ಕೊಳ್ಳೆಗಾಲದಲ್ಲಿ ಬಾಬು ಜಗಜೀವನ ರಾಂ ಜಯಂತಿ ವೇಳೆ ಭರವಸೆ

---

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನನ್ನ ಅವಧಿಯಲ್ಲಿಯೇ ಕೊಳ್ಳೇಗಾಲದಲ್ಲಿ ಸಮುದಾಯ ಭವನ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ಹೇಳಿದರು.ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂರವರ 119ನೇ ಜನ್ಮ ದಿನಾಚರಣೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಬಾಬಾ ಜಗಜೀವನರಾಂ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಜಯಂತಿ ಆಚರಿಸಿದರೆ ಸಾಲದು. ಅವರ ತತ್ವಾದರ್ಶಗಳನ್ನು ಯುವಪೀಳಿಗೆ ಕಿಂಚಿತ್ತಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಣ್ಯರ ಕೊಡುಗೆಗಳನ್ನು ಮೆಲುಕು ಹಾಕುವಂತಾಗಬೇಕು. ಜಗಜೀವನರಾಂ ಭವನ ನಿರ್ಮಾಣವಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದ್ದು, ಇದಕ್ಕಿರುವ ತೊಡಕುಗಳನ್ನು ನಿವಾರಿಸಿ ನನ್ನ ಅವಧಿಯಲ್ಲಿಯೇ ಭವನ ನಿರ್ಮಿಸುವೆ ಎಂದು ಭರವಸೆ ನೀಡಿದರು.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು ಮಾತನಾಡಿ, ಜಗಜೀವನ್ ರಾಂ ಹಾಗೂ ಅಂಬೇಡ್ಕರ್‌ ಅವರು ದೇಶದ ಎರಡು ಕಣ್ಣುಗಳಿದ್ದಂತೆ. ಬಾಬೂಜಿ ಅವರು ಮಹಾತ್ಮ ಗಾಂಧಿಯವರ ಒಡನಾಡಿಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದವರು. ಅವರು ಉಪಪ್ರಧಾನಿಯಾಗಿ ಹಸಿರು ಕ್ರಾಂತಿ ತರುವ ಮೂಲಕ ಸ್ವಾಭಿಮಾನ ಬದುಕು ನಡೆಸಿದವರು. ಈ ಹಿನ್ನೆಲೆ ಅವರು ಹಸಿರು ಕ್ರಾಂತಿ ಹರಿಕಾರ ಎಂದೇ ಖ್ಯಾತರಾದರು ಎಂದರು.ಈ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜೇಂದ್ರ, ತಹಶೀಲ್ದಾರ್‌ ಬಸವರಾಜು, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಬಿಇಒ ಮಂಜುಳಾ, ನಗರಸಭೆ ಪೌರಯುಕ್ತೆ ರುದ್ರಮ್ಮ ಶರಣಯ್ಯ, ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ತಾಲೂಕು ಜಗಜೀವನ್ ರಾಂ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ. ಬಾಲರಾಜು, ನಾರಾಯಣ್, ಹೊಂಗನೂರು ಚೇತನ್ ಇನ್ನಿತರಿದ್ದರು.

---5ಕೆಜಿಎಲ್ 27ಕೊಳ್ಳೇಗಾಲ ತಾಪಂ ಸಭಾಂಗಣದಲ್ಲಿ ಅಯೋಜಿಸಲಾಗಿದ್ದ ಬಾಬು ಜಗಜೀವನರಾಂ ಅವರ ಜಯಂತಿಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಶಾಸಕ ಎ.ಆರ್‌. ಕೃಷ್ಣಮೂರ್ತಿ ಅಭಿನಂದಿಸಿದರು. ಹೊಂಗನೂರು ಚಂದ್ರು, ಬಸವರಾಜು, ಗುರುಶಾಂತಪ್ಪ, ಬಾಲರಾಜು ಇನ್ನಿತರಿದ್ದರು.