ಕುಡುಪು ಗುಂಪು ಹತ್ಯೆಯಲ್ಲಿ ಅಮಾಯಕರ ಸಿಲುಕಿಸಿದರೆ ಹೋರಾಟ : ಶಾಸಕ ಡಾ.ಭರತ್‌ ಶೆಟ್ಟಿ

| N/A | Published : May 02 2025, 11:46 PM IST / Updated: May 03 2025, 01:20 PM IST

Bharath Shetty
ಕುಡುಪು ಗುಂಪು ಹತ್ಯೆಯಲ್ಲಿ ಅಮಾಯಕರ ಸಿಲುಕಿಸಿದರೆ ಹೋರಾಟ : ಶಾಸಕ ಡಾ.ಭರತ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಡುಪು ಕೊಲೆ ಪ್ರಕರಣದಲ್ಲಿ ರಾಜಕೀಯಕ್ಕಾಗಿ ಅಮಾಯಕ ಬಿಜೆಪಿ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸಿದರೆ ನಾವು ಅಮಾಯಕರ ಪರವಾಗಿ ನಿಲ್ಲುತ್ತೇವೆ, ಪ್ರತಿಭಟನೆ, ಠಾಣೆಗೆ ಘೇರಾವ್‌ ಹಾಕುತ್ತೇವೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.

 ಮಂಗಳೂರು : ಕುಡುಪುವಿನಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಕೇರಳ ಮೂಲದ ವ್ಯಕ್ತಿಯ ಕೊಲೆ ಪ್ರಕರಣ ಆಕಸ್ಮಿಕ ಘಟನೆ. ಪ್ರಕರಣದಲ್ಲಿ ರಾಜಕೀಯ ನಡೆಸದೇ, ಅಪರಾಧವನ್ನಾಗಿಯೇ ನೋಡಬೇಕು. 

ರಾಜಕೀಯಕ್ಕಾಗಿ ಅಮಾಯಕ ಬಿಜೆಪಿ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸಿದರೆ ನಾವು ಅಮಾಯಕರ ಪರವಾಗಿ ನಿಲ್ಲುತ್ತೇವೆ, ಪ್ರತಿಭಟನೆ, ಠಾಣೆಗೆ ಘೇರಾವ್‌ ಹಾಕುತ್ತೇವೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ರವೀಂದ್ರ ನಾಯಕ್ ಅವರ ಹೆಸರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹೇಳಿದ್ದಾರೆ. ಈ ಆರೋಪಕ್ಕೆ ಅವರು ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಬಿಜೆಪಿಯಲ್ಲಿ ಸಕ್ರಿಯವಾಗಿದ್ದಾರೆ ಎಂಬ ಕಾರಣಕ್ಕೆ ಪ್ರಕರಣದಲ್ಲಿ ಅವರನ್ನು ಸಿಲುಕಿಸಲಾಗುತ್ತಿದೆ.

 ಆರೋಪಿಗಳನ್ನು ಪೊಲೀಸರು ಗುರುತಿಸುವ ಬದಲಿಗೆ ಇಂತವರೇ ಆರೋಪಿಗಳು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹೇಗೆ ತೀರ್ಪು ನೀಡುತ್ತಾರೆ ಎಂದು ಪ್ರಶ್ನಿಸಿದರು.ಕುಡುಪು ಪ್ರಕರಣದಲ್ಲಿ ನಮಗೆ ೩೦ ಜನರು ಆರೋಪಿಗಳನ್ನು ನೀಡಿ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಬಳಿ ಪೊಲೀಸರು ಹೇಳುತ್ತಿದ್ದಾರೆ. ನಮಗೆ ರಾಜಕೀಯ ಒತ್ತಡವಿದೆ ಎಂದು ಅನಧಿಕೃತವಾಗಿ ಪೊಲೀಸರು ಒಪ್ಪಿಕೊಳ್ಳುತ್ತಿದ್ದಾರೆ.

ಇಂತವರನ್ನೇ ಬಂಧಿಸಬೇಕು ಎಂಬ ಒತ್ತಡವಿದೆ ಎನ್ನುತ್ತಿದ್ದಾರೆ. ಕ್ರಿಕೆಟ್ ಆಟದ ಸ್ಥಳದಲ್ಲಿದ್ದವರನ್ನೂ ಬಂಧಿಸಲಾಗುತ್ತಿದೆ. ಅಮಾಯಕರನ್ನು ಬಂಧಿಸಿದರೆ ನಾವು ಸುಮ್ಮನಿರುವುದಿಲ್ಲ. ಈ ಪ್ರಕರಣದಲ್ಲಿ ಅಮಾಯಕರ ಬಂಧನ ರಾಷ್ಟ್ರದ್ರೋಹ ಎಂದರೂ ತಪ್ಪಾಗದು ಎಂದು ಡಾ. ಭರತ್ ಶೆಟ್ಟಿ ಹೇಳಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಉಪಾಧ್ಯಕ್ಷ ಲೋಹಿತ್ ಅಮೀನ್, ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಆಶಿತ್ ನೋಂಡಾ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಮನೋಹರ ಶೆಟ್ಟಿ, ರಣದೀಪ್ ಕಾಂಚನ್ ಇದ್ದರು.