ಹೊಳೆಹೊನ್ನೂರಿಗೆ ಸಿಗುವುದೇ ತಾಲೂಕು ಕೇಂದ್ರ ಭಾಗ್ಯ?

| Published : Feb 20 2025, 12:49 AM IST

ಸಾರಾಂಶ

ಎರಡು ದಶಕಗಳಿಂದ ಹೊಳೆಹೊನ್ನೂರು ಪಟ್ಟಣವನ್ನು ತಾಲೂಕು ಕೇಂದ್ರವಾಗಿ ನೋಡಬೇಕೆನ್ನುವ ಇಲ್ಲಿನ ಜನರ ಕನಸು ಈ ಬಾರಿಯ ರಾಜ್ಯ ಬಜೆಟ್‌ನಲ್ಲಾದರೂ ಈಡೇರಲಿ ಎಂಬುದು ಜನರ ಆಶಯವಾಗಿದೆ.

ಅರಹತೊಳಲು ಕೆ.ರಂಗನಾಥ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಎರಡು ದಶಕಗಳಿಂದ ಹೊಳೆಹೊನ್ನೂರು ಪಟ್ಟಣವನ್ನು ತಾಲೂಕು ಕೇಂದ್ರವಾಗಿ ನೋಡಬೇಕೆನ್ನುವ ಇಲ್ಲಿನ ಜನರ ಕನಸು ಈ ಬಾರಿಯ ರಾಜ್ಯ ಬಜೆಟ್‌ನಲ್ಲಾದರೂ ಈಡೇರಲಿ ಎಂಬುದು ಜನರ ಆಶಯವಾಗಿದೆ.ಹೊಳೆಹೊನ್ನೂರನ್ನು ತಾಲೂಕು ಕೇಂದ್ರವೆಂದು ಘೋಷಿಸುವಂತೆ ಎರಡು ದಶಕಗಳಿಂದಲೂ ಹೋರಾಟಗಳು ನಡೆಯುತ್ತಲೇ ಇವೆ. ಇದಕ್ಕಾಗಿ ಹಲವಾರು ಹೋರಾಟ ಸಮಿತಿಗಳೂ ರಚನೆಯಾಗಿದ್ದವು. ಜಿಲ್ಲಾ ಕೇಂದ್ರದ ವರೆಗೂ ಪಾದಯಾತ್ರೆ ನಡೆಸಿ ಸಚಿವರಿಗೂ ಮನವಿಯನ್ನು ಸಲ್ಲಿಸಲಾಗಿತ್ತು. ಆದರೂ ಇದುವರೆಗೂ ಸಾಧ್ಯವಾಗದಿರುವುದು ಎಲ್ಲಾ ಹೋರಾಟಗಳಿಗೂ ತಣ್ಣೀರು ಎರಚಿದಂತಾಗಿದೆ.ಘಟಾನುಘಟಿ ನಾಯಕರ ತವರು ಜಿಲ್ಲೆ:ಶಿವಮೊಗ್ಗ ಬಹಳ ವರ್ಷಗಳಿಂದ ಘಟಾನುಘಟಿ ರಾಜಕೀಯ ನಾಯಕರನ್ನು ಕಂಡಿದೆ. ಅನೇಕ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದೆ. ಆದರೂ, ಜಿಲ್ಲೆಯಲ್ಲಿ ಸ್ವಾತಂತ್ರ್ಯ ನಂತರ ಒಂದೇ ಒಂದು ಹೊಸ ತಾಲೂಕು ಕೇಂದ್ರ ಘೋಷಣೆಯಾಗಿಲ್ಲ. 20 ವರ್ಷಗಳ ಹಿಂದೆ ಕ್ಷೇತ್ರ ಮರು ವಿಂಗಡಣೆಯಿಂದ ಹೊಳೆಹೊನ್ನೂರು ವಿಧಾನಸಭಾ ಕ್ಷೇತ್ರದ ಕೆಲ ಗ್ರಾಮಗಳು ಕೈಬಿಟ್ಟು ಹೋಗಿ ಹೊಸ ಗ್ರಾಮಗಳು ಸೇರ್ಪಡೆಗೊಂಡು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಎಂದು ಹೆಸರು ಬದಲಾಯಿತೇ ಹೊರತು ತಾಲೂಕು ಕೇಂದ್ರ ಎಂದು ಘೋಷಣೆ ಮಾತ್ರ ಆಗಲಿಲ್ಲ. ಈಗಲೂ ಕೂಡ ಜಿಲ್ಲೆಯವರೇ ಸಚಿವರಾಗಿದ್ದಾರೆ. ಜಿಲ್ಲಾ ಉಸ್ತುವಾರಿಯೂ ಕೂಡ. ಆದ್ದರಿಂದ ಜನರ ನಿರೀಕ್ಷೆಯೂ ಕೂಡ ಹೆಚ್ಚಾಗಿದೆ. ಅರ್ಹತೆ ಇದ್ದರೂ ಆಳುವ ವರ್ಗಕ್ಕೆ ಆಸಕ್ತಿ ಇಲ್ಲ:ಹೊಳೆಹೊನ್ನೂರು ಇಂದು ವಿಶಾಲವಾಗಿ ಬೆಳೆದಿದೆ. ಸುತ್ತಮುತ್ತಲ ಗ್ರಾಮಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಪೊಲೀಸ್ ಠಾಣೆ, ಸರ್ಕಾರಿ ಪ್ರಾಥಾಮಿಕ ಶಾಲೆಯಿಂದ ಹಿಡಿದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವರೆಗೂ ಶೈಕ್ಷಣಿಕ ಕೇಂದ್ರಗಳಿವೆ. ಹಲವಾರು ಖಾಸಗೀ ಶೈಕ್ಷಣಿಕ ಸಂಸ್ಥೆಗಳಿವೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಅರಸಿ ಪಟ್ಟಣಕ್ಕೆ ಬರುತ್ತಾರೆ. ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳು ಇವೆ. 26 ಸದಸ್ಯ ಬಲವಿದ್ದ ಹೊಳೆಹೊನ್ನೂರು ಗ್ರಾಮ ಪಂಚಾಯಿತಿ ನಾಲ್ಕು ವರ್ಷದ ಹಿಂದೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿತು. ಹೀಗೆ ಸಕಲ ಸೌಲತ್ತುಗಳನ್ನು ಹೊಂದಿರುವ ಹೊಳೆಹೊನ್ನೂರು ತಾಲೂಕು ಕೇಂದ್ರವಾಗಿರುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ಆದ್ದರಿಂದ ಈ ಬಾರಿಯ ಬಜೆಟ್‌ನಲ್ಲಾದರೂ ತಾಲೂಕು ಕೇಂದ್ರವಾಗಿ ಘೋಷಣೆಯಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷನಾಗಿ ಹಲವಾರು ಹೋರಾಟಗಳನ್ನು ಮಾಡಿದ್ದೇವೆ. ಆದರೆ ಯಾವುದೇ ರಚನಾ ಸಮಿತಿಗಳು ತಾಲೂಕು ಎಂದು ಘೋಷಿಸುವಂತೆ ಶಿಫಾರಸ್ಸು ಮಾಡಿಲ್ಲ ಎಂದು ಸಬೂಬು ಹೇಳುತ್ತಾರೆ. ಇಂದು ಹೊಳೆಹೊನ್ನೂರು ತಾಲೂಕು ಆಗುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ರಾಜಕೀಯ ನಾಯಕರ ಇಚ್ಛಾಸಕ್ತಿ ಕೊರತೆ ತಾಲೂಕು ರಚನೆಯನ್ನು ತಡೆಯುತ್ತಿದೆ. ಈಗಲಾದರೂ ತಾಲೂಕು ರಚನೆಗೆ ಮುಂದಾಗಬೇಕು. ಎಚ್.ಆರ್.ಬಸವರಾಜಪ್ಪ. ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ.

ಮುಂದೆ ಏನಾದರೂ ಗಡಿನಿರ್ಧಾರ ಸಮಿತಿ ರಚನೆಯಾಗಿ, ಹೊಳೆಹೊನ್ನೂರಿನ ಭೌಗೋಳಿಕ ವ್ಯಾಪ್ತಿಯನ್ನು ಅವಲೋಕಿಸಿ ತಾಲೂಕು ರಚನೆಯ ಶಿಫಾರಸ್ಸು ಬಂದಲ್ಲಿ ಖಂಡಿತ ಪ್ರಯತ್ನ ಮಾಡಲಾಗುದು.

- ಶಾರದಾ ಪೂರ್ಯಾ ನಾಯ್ಕ್. ಶಾಸಕಿ.