ಈ ಬಾರಿ ನಡೆಯುವುದೇ ಕಂಪ್ಲಿ ಉತ್ಸವ?

| Published : Feb 08 2024, 01:30 AM IST

ಸಾರಾಂಶ

ಕೊಟ್ಟ ಮಾತಿನಂತೆ ತಮ್ಮ ಸರ್ಕಾರವನ್ನು ಮನವೊಲಿಸಿ ಉತ್ಸವ ನಡೆಸುತ್ತಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಬಿ.ಎಚ್.ಎಂ. ಅಮರನಾಥಶಾಸ್ತ್ರಿ

ಕಂಪ್ಲಿ: ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮೊದಲು ನಾಂದಿ ಹಾಡಿದ ಕಂಪ್ಲಿಯ ಇತಿಹಾಸವನ್ನು ರಾಜ್ಯದೆಲ್ಲೆಡೆ ಪಸರಿಸಲು ತಾಲೂಕಿನ ಜನರ ಬೇಡಿಕೆಯಂತೆ 2023ರಲ್ಲಿ "ಕಂಪ್ಲಿ ಕಲಾರತಿ " ಎಂಬ ಹೆಸರಿನಲ್ಲಿ ಉತ್ಸವ ಜರುಗಿದ್ದು, ಈ ಬಾರಿ ಉತ್ಸವ ನಡೆಯುವುದೇ ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿವೆ.

ಕಂಪ್ಲಿ. ಕ್ರಿಶ 8ನೇ ಶತಮಾನದಿಂದ ಐತಿಹಾಸಿಕ ಶ್ರೀಮಂತಿಕೆ ಹೊಂದಿದೆ ಹಾಗೂ 1017ರಿಂದ 1076ರ ವರೆಗೆ ರಾಜಧಾನಿಯಾಗಿ ಮೆರೆದಿದೆ. ಈ ಭೂಮಿಯ ಇತಿಹಾಸ ಹಾಗೂ ಕಂಪಿಲರಾಯ ಮತ್ತು ಗಂಡುಗಲಿ ಕುಮಾರರಾಮರ ಶೌರ್ಯ ಪರಾಕ್ರಮವನ್ನು ರಾಜ್ಯದ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಹಂಪಿ, ಆನೆಗುಂದಿ, ಬಳ್ಳಾರಿ, ಕನಕಗಿರಿ ಉತ್ಸವದ ರೀತಿಯಲ್ಲಿ ಕಂಪ್ಲಿ ಉತ್ಸವವನ್ನು ಆಚರಿಸಬೇಕೆಂಬುದು ತಾಲೂಕಿನ ಜನತೆಯ ಬಹುವರ್ಷಗಳ ಕನಸಾಗಿತ್ತು. ಈ ಕುರಿತು ಕಂಪ್ಲಿ ಯುವ ಶಕ್ತಿ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು 2018ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಹಿಡಿದು ಅನೇಕ ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಅದರಂತೆ 2023ರ ಫೆ. 11 ಹಾಗೂ 12ರಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ. ಶ್ರೀರಾಮುಲು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ಉತ್ಸವವನ್ನು ಆಚರಿಸಲಾಗಿತ್ತು. ಅಂದು ಸಚಿವರಾಗಿದ್ದ ಬಿ. ಶ್ರೀರಾಮುಲು ಸೂರ್ಯ- ಚಂದ್ರರಿರುವ ವರೆಗೂ ಕಂಪ್ಲಿ ಉತ್ಸವ ಜರುಗಲಿದೆ ಎಂದು ಭರವಸೆ ನೀಡಿದ್ದರು. ಅಲ್ಲದೇ ಮುಂದಿನ ಬಾರಿ ಮತ್ತಷ್ಟು ಅದ್ಧೂರಿಯಾಗಿ ಉತ್ಸವ ಆಚರಿಸಲಾಗುವುದು ಎಂದು ಶಾಸಕ ಜೆ.ಎನ್. ಗಣೇಶ್ ಸಹ ಭರವಸೆ ನೀಡಿದ್ದರು.ಉತ್ಸವದ ಮಾತೇ ಇಲ್ಲ: ಬರದ ನಡುವೆಯೂ ಫೆ. 2, 3 ಮತ್ತು 4ರಂದು 3 ದಿನಗಳ ಕಾಲ ಹಂಪಿ ಉತ್ಸವ ಅದ್ಧೂರಿಯಾಗಿ ಜರುಗಿದೆ. ಅಲ್ಲದೇ ಫೆ. 12 ಸಮೀಪಿಸುತ್ತಿದೆ. ಆದರೆ ತಾಲೂಕಿನಲ್ಲಿ ಉತ್ಸವದ ಆಚರಣೆಯ ಬಗ್ಗೆ ಶಾಸಕರಾಗಲಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಾಗಲಿ ಈ ವರೆಗೆ ಚಕಾರ ಎತ್ತುತ್ತಿಲ್ಲ. ಶ್ರೀರಾಮುಲು ಅವರು ಅಧಿಕಾರದಲ್ಲಿಲ್ಲ. ಶಾಸಕ ಜೆ.ಎನ್‌. ಗಣೇಶ ಅವರದ್ದೇ ಪಕ್ಷ ಅಧಿಕಾರದಲ್ಲಿದೆ. ಕೊಟ್ಟ ಮಾತಿನಂತೆ ತಮ್ಮ ಸರ್ಕಾರವನ್ನು ಮನವೊಲಿಸಿ ಉತ್ಸವ ನಡೆಸುತ್ತಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಜನರ ಒತ್ತಾಯ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಂಪ್ಲಿಯ ಉತ್ಸವ ಮಾಡಿದರೆ ಈ ನೆಲದ ಸೊಗಡಿನ ಬಗ್ಗೆ ರಾಜ್ಯದ ಜನತೆಗೆ ತಿಳಿಸಿದಂತಾಗುತ್ತದೆ. ಅಲ್ಲದೇ ಸ್ಥಳೀಯ ಕಲಾವಿದರಿಗೆ ಆರ್ಥಿಕವಾಗಿ ನೆರವಾಗಲಿದೆ. ಬರ ಹಾಗೂ ಗ್ಯಾರಂಟಿ ಹೊರೆ ಎಂಬ ಯಾವುದೇ ಇಲ್ಲಸಲ್ಲದ ಮಾತುಗಳನ್ನಾಡಿ ಉತ್ಸವವನ್ನು ಆಚರಿಸಿದಂತೆ ತಟಸ್ಥವಾಗದೆ, ಹಂಪಿ ಉತ್ಸವದ ರೀತಿಯಲ್ಲಿ ಕಂಪ್ಲಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರ ಮುಂದಾಗಬೇಕೆಂದು ತಾಲೂಕಿನ ಜನತೆಯ ಒತ್ತಾಸೆ.ಉತ್ಸವ ಆಚರಿಸಿ: ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಮುತುವರ್ಜಿ ವಹಿಸಿ ತಾಲೂಕಿನ ಜನತೆಯ ಬಹುವರ್ಷಗಳ ಒತ್ತಾಸೆಯಂತೆ ಕಂಪ್ಲಿ ಉತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು. ಕಂಪ್ಲಿ ಉತ್ಸವದ ಆಚರಣೆಯಿಂದ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಜನತೆಯ ಆಸೆ ಹಾಗೂ ನಿರೀಕ್ಷೆಯನ್ನು ಹುಸಿ ಮಾಡದೇ ಉತ್ಸವವನ್ನು ಆಚರಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದರು.

ಉತ್ಸವದ ಮೆರುಗು: ವಿಜಯನಗರ ಸಾಮ್ರಾಜ್ಯದ ಪೂರ್ವದಲ್ಲಿಯ ಕಂಪ್ಲಿ ಐತಿಹಾಸಿಕವಾಗಿ ಹೆಸರು ಮಾಡಿತ್ತಲ್ಲದೇ ವಿಜಯನಗರದ ಉಗಮಕ್ಕೆ ಮೆಟ್ಟಿಲಾಗಿತ್ತು. ಇಂತಹ ಐತಿಹಾಸಿಕ ಘನತೆ ಹೊಂದಿರುವ ಕಂಪ್ಲಿಗೆ ಉತ್ಸವದ ಮೆರುಗು ಬೇಕಿದೆ. ನಮ್ಮ ಮಣ್ಣಿನ ಚರಿತ್ರೆಯನ್ನು ರಾಜ್ಯದ ಜನತೆಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದು ಕನ್ನಡ ಹಿತರಕ್ಷಣಾ ಸಂಘದ ಗೌರವಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಎಂದರು.