ಸಾರಾಂಶ
ಬೆಂಗಳೂರು : ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಲಿಯಾಸ್ ಪಪ್ಪಿ ಅವರನ್ನು 5 ದಿನಗಳ ಕಾಲ ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ಶನಿವಾರ ವೀರೇಂದ್ರ ಅವರನ್ನು ಬಂಧಿಸಿದ್ದ ಇ.ಡಿ.ಅಧಿಕಾರಿಗಳು, ಸ್ಥಳೀಯ ನ್ಯಾಯಾಲಯದಲ್ಲಿ ಟ್ರಾನ್ಸಿಟ್ ವಾರೆಂಟ್ ಪಡೆದು ವಿಮಾನದ ಮೂಲಕ ತಡರಾತ್ರಿ ಬೆಂಗಳೂರು ನಗರಕ್ಕೆ ಕರೆತಂದರು. ಭಾನುವಾರ ಬೆಳಗ್ಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿ ಬಳಿಕ ಇ.ಡಿ. ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದರು.
ಆರೋಪಿಯ ಬಂಧನದ ಮಾಹಿತಿ ನೀಡಿದ ಇ.ಡಿ. ಪರ ವಕೀಲರು, ಹೆಚ್ಚಿನ ವಿಚಾರಣೆ ಸಂಬಂಧ ಆರೋಪಿಯನ್ನು 14 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ವೀರೇಂದ್ರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ತಮ್ಮ ಕಕ್ಷಿದಾರರನ್ನು ಇ.ಡಿ. ವಶಕ್ಕೆ ನೀಡದಂತೆ ಮನವಿ ಮಾಡಿದರು. ಬಳಿಕ ವಿಚಾರಣೆ ನಡೆಸಿದ ನ್ಯಾಯಾಧೀಶರು ಆ.28ರವರೆಗೆ ವೀರೇಂದ್ರರನ್ನು ಇ.ಡಿ. ವಶಕ್ಕೆ ನೀಡಿದರು.
ನಂತರ ಇ.ಡಿ. ಅಧಿಕಾರಿಗಳು ಆರೋಪಿಯನ್ನು ಶಾಂತಿನಗರದ ಇ.ಡಿ. ಕಚೇರಿಗೆ ಕರೆತಂದರು. ಕೆಲ ಕಾಲ ವಿಶ್ರಾಂತಿಗೆ ಅವಕಾಶ ನೀಡಿದ ಅಧಿಕಾರಿಗಳು ಬಳಿಕ ಆನ್‌ಲೈನ್ ಮತ್ತು ಆಫ್ ಲೈನ್ ಬೆಟ್ಟಿಂಗ್, ಅಕ್ರಮ ಹಣ ವರ್ಗಾವಣೆ, ದಾಳಿ ವೇಳೆ ಜಪ್ತಿ ಮಾಡಲಾದ ಭಾರೀ ಪ್ರಮಾಣದ ನಗದು, ಚಿನ್ನಾಭರಣ, ಆಸ್ತಿ ದಾಖಲೆಗಳ ಮೂಲದ ಕುರಿತು ಆರೋಪಿ ವೀರೇಂದ್ರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಇ.ಡಿ. ಮೂಲಗಳು ತಿಳಿಸಿವೆ.
ಇ.ಡಿ.ಅಧಿಕಾರಿಗಳು ಶುಕ್ರವಾರ ಮುಂಜಾನೆ ವೀರೇಂದ್ರ, ಅವರ ಸಹೋದರರು ಹಾಗೂ ಪಾಲುದಾರರ ಮನೆಗಳು ಹಾಗೂ ಕಚೇರಿಗಳು ಸೇರಿದಂತೆ ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು ನಗರ, ಹುಬ್ಬಳ್ಳಿ, ಜೋಧಪುರ, ಮುಂಬೈ, ಗೋವಾ (ಪಪ್ಪಿ ಮಾಲೀಕತ್ವದ 5 ಕ್ಯಾಸಿನೊ) ಸೇರಿ ರಾಜ್ಯ ಹಾಗೂ ಹೊರರಾಜ್ಯಗಳ 31 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಶನಿವಾರವೂ ಶೋಧ ಕಾರ್ಯ ಮುಂದುವರೆದಿತ್ತು.
ಅಕ್ರಮ ಬೆಟ್ಟಿಂಗ್ ಬಯಲಿಗೆ:
ಈ ನಡುವೆ ಕ್ಯಾಸಿನೋ ಆರಂಭಿಸುವ ಸಂಬಂಧ ಜಾಗದ ಗುತ್ತಿಗೆ ಪಡೆಯಲು ವೀರೇಂದ್ರ ಹಾಗೂ ಸಹಚರರು ಸಿಕ್ಕಿಂಗೆ ತೆರಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಇ.ಡಿ.ಅಧಿಕಾರಿಗಳು, ಶನಿವಾರ ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ವೀರೇಂದ್ರರನ್ನು ಬಂಧಿಸಿದ್ದರು. ಶೋಧ ಕಾರ್ಯದ ವೇಳೆ ಆರೋಪಿ ವೀರೇಂದ್ರ ಕಿಂಗ್ 567, ರಾಜಾ 567 ಸೇರಿದಂತೆ ವಿವಿಧ ಹೆಸರುಗಳಲ್ಲಿ ಅಕ್ರಮವಾಗಿ ಆನ್‌ಲೈನ್ ಹಾಗೂ ಆಫ್ ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು.
ದುಬೈನಿಂದ ನಿರ್ವಹಣೆ:
ಆರೋಪಿ ವೀರೇಂದ್ರ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ಮತ್ತು ಅವರ ಸಹೋದರನ ಮಗ ಪೃಥ್ವಿ ಎನ್.ರಾಜ್ ದುಬೈನಲ್ಲಿ ಡೈಮಂಡ್ ಸಾಫ್ಟ್‌ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಎಂಬ ಕಂಪನಿಗಳನ್ನು ನಿರ್ವಹಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಮೂರೂ ಕಂಪನಿಗಳು ವೀರೇಂದ್ರ ಅವರ ಕಾಲ್ ಸೆಂಟರ್ ಸೇವೆಗಳು ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿರುವುದು ಇ.ಡಿ. ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ.
ಕುಟುಂಬ, ಪಾಲುದಾರರು, ಸ್ನೇಹಿತರಿಗೆ ಡವಡವ:
ಶಾಸಕ ವೀರೇಂದ್ರ ಬಂಧನದ ಬೆನ್ನಲ್ಲೇ ಅವರ ಕುಟುಂಬದ ಸದಸ್ಯರು, ವ್ಯವಹಾರದ ಪಾಲುದಾರರು ಹಾಗೂ ಸ್ನೇಹಿತರಿಗೆ ಡವಡವ ಶುರುವಾಗಿದೆ. ವೀರೇಂದ್ರ ಅವರ ಸಹೋದರರಾದ ಕೆ.ಸಿ.ತಿಪ್ಪೇಸ್ವಾಮಿ, ಕೆ.ಸಿ.ನಾಗರಾಜ್, ಪುತ್ರ ಪೃಥ್ವಿ ಎನ್.ರಾಜ್, ಪಾಲುದಾರ ಎನ್ನಲಾದ ಕಾಂಗ್ರೆಸ್ ನಾಯಕಿ ಕುಸುಮಾ ಅವರ ಸಹೋದರ ಅನಿಲ್ ಗೌಡ ಸೇರಿದಂತೆ ವೀರೇಂದ್ರ ಅವರೊಂದಿಗೆ ವ್ಯವಹಾರದಲ್ಲಿ ತೊಡಗಿರುವವರಿಗೆ ಇ.ಡಿ. ಅಧಿಕಾರಿಗಳು ಶೀಘ್ರದಲ್ಲೇ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಿದ್ದಾರೆ ಎಂದು ಇ.ಡಿ.ಮೂಲಗಳು ತಿಳಿಸಿವೆ. 12 ಕೋಟಿ ರು. ನಗದು, ಚಿನ್ನಾಭರಣ, ಆಸ್ತಿ ದಾಖಲೆ ಜಪ್ತಿ:
ವೀರೇಂದ್ರ ಅವರ ಮತ್ತೋರ್ವ ಸಹೋದರ ಕೆ.ಸಿ.ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್.ರಾಜ್ ಅವರ ಬಳಿ ಕೋಟ್ಯಂತರ ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇ.ಡಿ.ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಂತೆಯೇ ವೀರೇಂದ್ರ ಅವರಿಗೆ ಸೇರಿದ 17 ಬ್ಯಾಂಕ್ ಖಾತೆಗಳು ಮತ್ತು 2 ಬ್ಯಾಂಕ್ ಲಾಕರ್‌ಗಳನ್ನು ಫ್ರೀಜ್ ಮಾಡಿದ್ದಾರೆ. ಈ ನಗದು ಹಾಗೂ ಆಸ್ತಿಗಳ ಮೂಲದ ಬಗ್ಗೆ ಕೆ.ಸಿ. ವೀರೇದ್ರ ಅವರನ್ನು ಇ.ಡಿ.ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಧೀಶರು ಕೆ.ಸಿ.ವೀರೇಂದ್ರ ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡದಂತೆ ಇ.ಡಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತನಿಖೆಗೆ ಸಹಕರಿಸುವಂತೆ ವೀರೇಂದ್ರ ಅವರಿಗೂ ಸೂಚಿಸಿದ್ದಾರೆ. ಆ.28ರಂದು ವೀರೇಂದ್ರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ವೇಳೆ ವಕೀಲರ ತಂಡ ಜಾಮೀನು ಅರ್ಜಿ ಸಲ್ಲಿಸಲಿದೆ
- ಉಮೇಶ್, ಕೆ.ಸಿ. ವೀರೇಂದ್ರ ಪರ ವಕೀಲ