ಚಿಕ್ಕಮಗಳೂರುಹಾಸನ ಜಿಲ್ಲೆಯಿಂದ 56 ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ಅಥವಾ ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಾಸಕ ಎಚ್.ಡಿ.ತಮ್ಮಯ್ಯ, ಯಾವುದೇ ಕಾರಣಕ್ಕೂ ಆನೆಗಳನ್ನು ನಮ್ಮ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಬಿಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಹಾಸನ ಜಿಲ್ಲೆಯಿಂದ 56 ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ಅಥವಾ ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಾಸಕ ಎಚ್.ಡಿ.ತಮ್ಮಯ್ಯ, ಯಾವುದೇ ಕಾರಣಕ್ಕೂ ಆನೆಗಳನ್ನು ನಮ್ಮ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಬಿಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.ಈ ಸಂಬಂಧ ಅರಣ್ಯ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಲಾಗಿದೆ. ಬೆಂಗಳೂರಿನಲ್ಲಿ ಶಾಸಕ ಟಿ.ಡಿ.ರಾಜೇಗೌಡ, ನಯನಾ ಮೋಟಮ್ಮ ಸೇರಿದಂತೆ ಜಿಲ್ಲೆಯ ಐವರು ಶಾಸಕರು ಒಟ್ಟಾಗಿ ಸಚಿವರನ್ನು ಭೇಟಿ ಯಾಗಿ ಸ್ಥಳಾಂತರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಾನವ-ಪ್ರಾಣಿ ಸಂಘರ್ಷ ಹಾಸನ/ ಚಿಕ್ಕಮಗಳೂರು ಎಲ್ಲಾದರೂ ಸಮಸ್ಯೆಯೇ. ನಾವೆಲ್ಲರೂನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ಒಗ್ಗಟ್ಟಾಗಿರುವವರು. ಮಾನವ-ಪ್ರಾಣಿ ಸಂಘರ್ಷ ವಾಗಬಾರದು ಹಾಗೂ ಕಾಡಾನೆಗಳು ಸುರಕ್ಷಿತವಾಗಿ ಬದುಕಬೇಕು ಎಂಬುದು ನಮ್ಮ ಆಶಯ. ಆದರೆ ಆನೆಗಳು ಸುರಕ್ಷಿತ ವಾಗಿರಬೇಕಾದರೆ ಹೆಚ್ಚು ವಿಸ್ತೀರ್ಣದ ಅರಣ್ಯ ಪ್ರದೇಶಗಳಿಗೆ ಬಿಡಬೇಕು ಎಂದು ಹೇಳಿದರು.56 ಕಾಡಾನೆಗಳ ಸ್ಥಳಾಂತರ ವಿಚಾರವಾಗಿ ದಿಢೀರನೆ ಪತ್ರ ಹೊರಬಂದಿರುವುದು ಹಾಗೂ ಈ ಸಂಬಂಧದ ಹೇಳಿಕೆಗಳಿಂದ ನಮಗೂ ಆತಂಕವಾಯಿತು. ತಕ್ಷಣವೇ ಶಾಸಕರಾದ ಟಿ.ಡಿ.ರಾಜೇಗೌಡ, ನಯನಾ ಮೋಟಮ್ಮ ಎಲ್ಲರೂ ಬೆಂಗಳೂರಿಗೆ ತೆರಳಿ ಅರಣ್ಯ ಸಚಿವರ ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಚಿಕ್ಕಮಗಳೂರು ಜಿಲ್ಲೆ ಭದ್ರಾ ಅಭಯಾರಣ್ಯ ಅಥವಾ ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಆನೆಗಳನ್ನು ಸ್ಥಳಾಂತರಿಸದಂತೆ ಒತ್ತಾಯಿಸಿದ್ದೇವೆ ಎಂದರು.ಜಿಲ್ಲೆಯ ಅರಣ್ಯ ಪ್ರದೇಶದ ವಿಸ್ತೀರ್ಣ ಸೀಮಿತ. ಇದಕ್ಕೆ ಬದಲಾಗಿ ಬಂಡೀಪುರ ಸೇರಿದಂತೆ ಸುಮಾರು 5 ಸಾವಿರ ಚದರ ಕಿ.ಮೀ. ಹೆಚ್ಚು ವಿಸ್ತೀರ್ಣ ಹೊಂದಿದ ಅರಣ್ಯ ಪ್ರದೇಶಗಳಲ್ಲಿ ಆನೆಗಳಿಗೆ ಸುರಕ್ಷಿತ ನೆಲೆ ಕಲ್ಪಿಸಬಹುದು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಹೊರಡಿಸಿದ ಆದೇಶದಲ್ಲೂ ನಿರ್ದಿಷ್ಟ ಅರಣ್ಯ ಪ್ರದೇಶದ ಹೆಸರು ಉಲ್ಲೇಖಿಸಿಲ್ಲ. ಆನೆಗಳಿಗೆ ತೊಂದರೆಯಾಗದ ಹಾಗೂ ಸುರಕ್ಷತೆ ಇರುವ ಸ್ಥಳಗಳಿಗೆ ಬಿಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಮೂಡಿಗೆರೆ, ಎನ್.ಆರ್.ಪುರ ಮತ್ತು ಶೃಂಗೇರಿಯಲ್ಲಿ ಕಾಡಾನೆಗಳ ಹಾವಳಿಯಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ ಜಿಲ್ಲೆಯಲ್ಲಿ ಇಂತಹ ಪ್ರಾಣಹಾನಿಗೆ ಅವಕಾಶ ನೀಡುವುದಿಲ್ಲ. ಸರ್ಕಾರ ಬಲವಂತ ವಾಗಿ ಆನೆಗಳ ಸ್ಥಳಾಂತರಿಸಲು ಪ್ರಯತ್ನಿಸಿದರೆ ನಮ್ಮದೇ ಸರ್ಕಾರವಾಗಿದ್ದರೂ ಜಿಲ್ಲೆಯ ಐವರು ಶಾಸಕರು ಒಗ್ಗಟ್ಟಾಗಿ ಅದನ್ನು ತಡೆಯಲು ಒತ್ತಡ ಹೇರುತ್ತೇವೆ ಎಂದರು.