ಶಾಸಕ ರಾಘವೇಂದ್ರ ದೊಡ್ಡ ಹೂವಿನ ಹಾರ ಹಾಕಲು ಮುಂದಾದ ವೇಳೆ ಬೇಡ ಬೇಡ ಎಂದು ನಯವಾಗಿ ತಿರಸ್ಕಾರ
ಕೊಪ್ಪಳ: ಮಂತ್ರಿಯಾಗುವವರೆಗೂ ನಾನು ಮಾಲೆ ಹಾಕಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರಕ್ಕೆ ಶುಕ್ರವಾರ ಆಗಮಿಸುತ್ತಿದ್ದಂತೆ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಮಾಜಿ ಸಂಸದ ಸಂಗಣ್ಣ ಕರಡಿ ಹಾಗೂ ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ ಆತ್ಮೀಯವಾಗಿ ಬರಮಾಡಿಕೊಂಡು, ಲೋಕಾರೂಢಿಯಂತೆ ಸತ್ಕಾರ ಮಾಡಲು ಮುಂದಾದರು. ಶಾಲು ಹಾಕಿ, ಹೂವಿನ ಹಾರ ಹಾಕಲು ಮುಂದಾದರು. ಶಾಲು ಹಾಕುವಾಗ ಸುಮ್ಮನೇ ಇದ್ದ ನರೇಂದ್ರಸ್ವಾಮಿ, ಶಾಸಕ ರಾಘವೇಂದ್ರ ದೊಡ್ಡ ಹೂವಿನ ಹಾರ ಹಾಕಲು ಮುಂದಾದ ವೇಳೆ ಬೇಡ ಬೇಡ ಎಂದು ನಯವಾಗಿ ತಿರಸ್ಕಾರ ಮಾಡಿದರು.ಅದರಲ್ಲೂ ಅಕ್ಕಪಕ್ಕ ಇದ್ದವರು ಒತ್ತಾಯ ಮಾಡುತ್ತಿದ್ದಂತೆ ಮಂತ್ರಿ ಆಗುವವರೆಗೂ ನಾನು ಮಾಲೆ ಹಾಕುವುದಿಲ್ಲ ಎಂದು ಹೇಳಿದರು. ಮಂತ್ರಿ ಆದ ಮೇಲೆಯೂ ಹಾಕುತ್ತೇವೆ, ಈಗ ಹಾಕಿಕೊಳ್ಳಿ ಎಂದರೂ ಹಾಕಿಸಿಕೊಳ್ಳದೇ ಮಂತ್ರಿ ಆಗುವವರೆಗೂ ಹಾಕಲ್ಲ ಬಿಡಿ ಎಂದು ತಿರಸ್ಕಾರ ಮಾಡಿದರು. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ವೇಳೆಯಲ್ಲಿಯೇ ನರೇಂದ್ರಸ್ವಾಮಿ ಹೇಳಿರುವ ಮಾತು ಈಗ ಮತ್ತಷ್ಟು ಚರ್ಚೆಗೆ ಇಂಬು ನೀಡಿದಂತಾಗಿದೆ.