ನೋಟಿಸ್‌ ವಾಪಸ್‌ವರೆಗೂ ಫೋನ್‌ಪೇ, ಪೇಟಿಎಂ ಬಳಸಲ್ಲ: ವ್ಯಾಪಾರಿಗಳ ಪಟ್ಟು

| N/A | Published : Jul 21 2025, 01:30 AM IST / Updated: Jul 21 2025, 06:39 AM IST

UPI
ನೋಟಿಸ್‌ ವಾಪಸ್‌ವರೆಗೂ ಫೋನ್‌ಪೇ, ಪೇಟಿಎಂ ಬಳಸಲ್ಲ: ವ್ಯಾಪಾರಿಗಳ ಪಟ್ಟು
Share this Article
  • FB
  • TW
  • Linkdin
  • Email

ಸಾರಾಂಶ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಬಂಧ ನೀಡಿರುವ ನೋಟಿಸ್ ಅನ್ನು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಸಂಪೂರ್ಣವಾಗಿ ವಾಪಸ್ ಪಡೆಯಬೇಕು ಎಂದು ಸಣ್ಣ ವ್ಯಾಪಾರಿಗಳು ಪಟ್ಟು ಹಿಡಿದಿದ್ದು, ‘ನೋ ಯುಪಿಐ, ಓಒನ್ಲಿ ಕ್ಯಾಷ್‌’ ನಿಲುವನ್ನು ತೀವ್ರಗೊಳಿಸಿದ್ದಾರೆ. ಪರಿಣಾಮ ಗ್ರಾಹಕರು ಪರದಾಡುವಂತಾಗಿದೆ.

 ಬೆಂಗಳೂರು :  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಬಂಧ ನೀಡಿರುವ ನೋಟಿಸ್ ಅನ್ನು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಸಂಪೂರ್ಣವಾಗಿ ವಾಪಸ್ ಪಡೆಯಬೇಕು ಎಂದು ಸಣ್ಣ ವ್ಯಾಪಾರಿಗಳು ಪಟ್ಟು ಹಿಡಿದಿದ್ದು, ‘ನೋ ಯುಪಿಐ, ಓಒನ್ಲಿ ಕ್ಯಾಷ್‌’ ನಿಲುವನ್ನು ತೀವ್ರಗೊಳಿಸಿದ್ದಾರೆ. ಪರಿಣಾಮ ಗ್ರಾಹಕರು ಪರದಾಡುವಂತಾಗಿದೆ.

ಭಾನುವಾರದಂದು ವಾರಾಂತ್ಯದ ಶಾಪಿಂಗ್‌ ಮಾಡಲು ಪ್ರಮುಖ ಮಾರುಕಟ್ಟೆ ಪ್ರದೇಶಗಳಿಗೆ ತೆರಳಿದ್ದ ಗ್ರಾಹಕರಿಗೆ ‘ನೋ ಯುಪಿಐ, ಓನ್ಲಿ ಕ್ಯಾಷ್‌’ ನಿಲುವಿನ ಬಿಸಿ ತಟ್ಟಿದೆ. ನಗದು ಇಲ್ಲದೆ, ಕೇವಲ ಯುಪಿಐ ನಂಬಿಕೊಂಡು ಬಂದಿದ್ದ ಗ್ರಾಹಕರು ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಅಲಿಯಬೇಕಾಯಿತು. ಕಾರ್ಡ್ ತಂದವರು ಎಟಿಎಂ ಯಂತ್ರಗಳಿಂದ ಹಣವನ್ನು ವಿತ್‌ಡ್ರಾ ಮಾಡಿಕೊಂಡು ಶಾಪಿಂಗ್ ಮಾಡಿದರು.

ಮೆಜೆಸ್ಟಿಕ್, ಮಲ್ಲೇಶ್ವರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಬನಶಂಕರಿ, ಜಯನಗರ, ನಾಗರಭಾವಿ ಸೇರಿ ಬೆಂಗಳೂರಿನ ಹಾಗೂ ರಾಜ್ಯದ ಅನೇಕ ಕಡೆ ಬೇಕರಿ, ಕಾಂಡಿಮೆಂಟ್ಸ್, ಬೀದಿ ಬದಿ ಬಟ್ಟೆ ಅಂಗಡಿಗಳು, ತಳ್ಳುಗಾಡಿ ವ್ಯಾಪಾರಿಗಳು, ಆಟೋ ಚಾಲಕರು ಕೂಡ ಯುಪಿಐ ಬದಲು ಕ್ಯಾಷ್ ಕೇಳುವುದು ಕಂಡು ಬಂತು. ಬಹುತೇಕರ ಬಾಯಲ್ಲಿ ‘ಕ್ಯಾಷ್ ಇದ್ರೆ ಕೊಡಿ. ಸುಮ್ನೆ ಯಾಕೆ, ನೋಟಿಸ್ ಕೊಡ್ತವ್ರಂತೆ’ ಎಂಬ ಮಾತುಗಳು ಕೇಳಿ ಬರುತ್ತಿದ್ದವು.

ನೋಟಿಸ್ ವಾಪಸ್ ಪಡೆಯಬೇಕು:

ಇಲಾಖೆಯಿಂದ ನೀಡಿರುವ ನೋಟಿಸ್‌ ವಿರುದ್ಧ ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಎಸ್ಟಿ ಮಿತಿಯನ್ನು ಮೀರಿ ವ್ಯಾಪಾರ ಮಾಡಿದವರು ಆಯಾ ವರ್ಷದ ವ್ಯಾಪಾರದ ಮೇಲೆ ಶೇ.1ರಷ್ಟು ಮಾತ್ರ ಜಿಎಸ್ಟಿ ದಂಡ ಪಾವತಿಸಿ, ಹೊಸದಾಗಿ ಜಿಎಸ್ಟಿಯನ್ನು ಬೇಗ ನೋಂದಣಿ ಮಾಡಿಕೊಳ್ಳಿ ಎಂದು ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಆದರೆ, ಹಿಂದಿನ ವರ್ಷಗಳ ವ್ಯಾಪಾರದ ಸೂಕ್ತ ಲೆಕ್ಕ ಇಲ್ಲದೆ, ವ್ಯಾಪಾರದಲ್ಲಿ ಲಾಭಾಂಶವೂ ಕಡಿಮೆ ಇರುವಾಗ ಶೇ.1ರಷ್ಟು ದಂಡ ಪಾವತಿಸುವುದು ಹೇಗೆ? ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ನ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಪ್ರಶ್ನಿಸಿದರು.

ಇಲಾಖೆಯ ನಿಯಮದಂತೆ ಹೊಸದಾಗಿ ಜಿಎಸ್ಟಿ ನೋಂದಣಿಗೆ ವ್ಯಾಪಾರಿಗಳು ಸಿದ್ಧರಿದ್ದಾರೆ. ಆದರೆ, ಹಿಂದಿನ ಲೆಕ್ಕ ಕೊಡಲು ಸಾಧ್ಯವಿಲ್ಲದ ಕಾರಣ ನೋಟಿಸ್ ವಾಪಸ್ ಪಡೆಯಲೇಬೇಕು ಎಂಬುದು ವ್ಯಾಪಾರಿಗಳ ಅಭಿಪ್ರಾಯ ಎಂದು ರವಿ ಹೇಳಿದರು. 

ನೋಟಿಸ್‌ ಹಿಂಪಡೆಯಲಿ 

ಇಲಾಖೆಯಿಂದ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು ಎಂಬುದು ವ್ಯಾಪಾರಿಗಳ ಮುಖ್ಯ ಬೇಡಿಕೆ. ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಸಿದ್ಧರಿದ್ದಾರೆ. ಬೇಡಿಕೆಗಾಗಿ ಜು.23ರಿಂದ 25ರ ವರೆಗೆ ಪ್ರತಿಭಟನೆ ನಡೆಸುವ ನಿಲುವಿನಲ್ಲಿ ಬದಲಾವಣೆ ಇಲ್ಲ.

- ರವಿ ಶೆಟ್ಟಿ ಬೈಂದೂರು, ಅಧ್ಯಕ್ಷ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್

23, 24ಕ್ಕೆ ಹಾಲು ಮಾರಾಟ ಬಂದ್‌

ಜು.23 ಮತ್ತು 24ರಂದು ಬೇಕರಿ ಮತ್ತು ಕಾಂಡಿಮೆಂಟ್ಸ್‌ಗಳಲ್ಲಿ ಹಾಲು, ಕಾಫಿ-ಟೀ ಮತ್ತು ಹಾಲಿನ ಎಲ್ಲಾ ಉತ್ಪನ್ನಗಳ ಮಾರಾಟ ಸಂಪೂರ್ಣವಾಗಿ ನಿಲ್ಲಿಸುತ್ತೇವೆ. ಅಲ್ಲದೆ, ಅಂದು ಕಪ್ಪು ಪಟ್ಟಿ ಧರಿಸಿ ವ್ಯಾಪಾರ ಮಾಡುತ್ತೇವೆ. ಜು.25ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ತಿಳಿಸಿದ್ದಾರೆ.

Read more Articles on