ಸಾರಾಂಶ
ಈ ಬಾರಿ ನಡೆಯುವ ಚುನಾವಣೆಯು ಸತ್ಯ, ಅಸತ್ಯ ಮತ್ತು ಧರ್ಮ, ಅಧರ್ಮಗಳ ನಡುವಿನ ಯುದ್ಧವಾಗಿದೆ. ಈ ಬಾರಿ ರಾಜಕೀಯ ವ್ಯಕ್ತಿಯನ್ನು ಹೊರತುಪಡಿಸಿ ಒಬ್ಬ ಶಿಕ್ಷಕ ಗೆಲುವು ಸಾಧಿಸುವುದು ಖಚಿತವಾಗಿದೆ.
ಕನ್ನಡಪ್ರಭ ವಾರ್ತೆ ತಿಪಟೂರು
ಬಹುತೇಕ ಶಿಕ್ಷಕರು ಬಹಳ ವರ್ಷಗಳಿಂದ ನನ್ನ ಹೋರಾಟವನ್ನು ಗಮನಿಸಿ ತುಂಬು ಅಭಿಮಾನದಿಂದ ನನ್ನನ್ನು ಚುನಾವಣೆಗೆ ಸ್ಪರ್ಧಿಸಲು ಬೆಂಬಲಿಸಿರುವ ಕಾರಣ, ಈ ಬಾರಿ ನಡೆಯುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕ ವೃತ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾನು ಸ್ವರ್ಧೆ ಮಾಡುತ್ತಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದರು.ನಗರದ ಖಾಸಗಿ ಹೋಟೇಲ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನಡೆಯುವ ಚುನಾವಣೆಯು ಸತ್ಯ, ಅಸತ್ಯ ಮತ್ತು ಧರ್ಮ, ಅಧರ್ಮಗಳ ನಡುವಿನ ಯುದ್ಧವಾಗಿದೆ. ಈ ಬಾರಿ ರಾಜಕೀಯ ವ್ಯಕ್ತಿಯನ್ನು ಹೊರತುಪಡಿಸಿ ಒಬ್ಬ ಶಿಕ್ಷಕ ಗೆಲುವು ಸಾಧಿಸುವುದು ಖಚಿತವಾಗಿದೆ. ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮೂರು ಬಾರಿ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರೂ ಶಿಕ್ಷಕರ ನಂಬಿಕೆಗೆ ಅರ್ಹರಾದವರಲ್ಲ. ನಾರಾಯಣಸ್ವಾಮಿಗೆ ಶಿಕ್ಷಕರು ಮತ ಹಾಕಿ ಮೋಸ ಹೋಗಿದ್ದಾರೆ. ಶಿಕ್ಷಕರ ಕುಂದುಕೊರತೆಗಳನ್ನು ಬಗೆಹರಿಸುವಲ್ಲಿ ನಾರಾಯಣಸ್ವಾಮಿ ವಿಫಲರಾಗಿದ್ದಾರೆ. ಈ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿರುವ ನಾನು, ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ಆದರೆ ದುರಾದೃಷ್ಟ ನಾವು ರಾಜಕೀಯ ವ್ಯಕ್ತಿಯನ್ನು ಗೆಲ್ಲಿಸಿ ಮೋಸ ಹೋದೆವು. ನಾರಾಯಣಸ್ವಾಮಿಗೆ ಶಿಕ್ಷಕರ ಬಗ್ಗೆ ಕೊಂಚವೂ ಆಸಕ್ತಿ ಇಲ್ಲ. ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದ್ದು, ನಾನೊಬ್ಬ ಶಿಕ್ಷಕನಾಗಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಕೃಷ್ಣಮೂರ್ತಿ, ಮಲ್ಲೇಶ್, ರೇಣುಕಯ್ಯ ಮತ್ತು ಲೋಕೇಶ್ ತಾಳಿಕಟ್ಟೆ ಬೆಂಬಲಿಗರು ಉಪಸ್ಥಿತರಿದ್ದರು.