ಸಾರಾಂಶ
ಬಲಗೈ ಸಮುದಾಯಗಳೇ ಮುಂದು ?
ನಾಗಮೋಹನ್ ದಾಸ್ ಅವರ ವರದಿಯನ್ನು ಆಧರಿಸಿ ವರದಿಯ ಒಳಗೆ ವರ್ಗೀಕರಿಸಲಾದ ಉಪ ಜಾತಿಗಳನ್ನು ಕೂಡಿಸಲಾಗಿ, ಇಲ್ಲಿ ಬಲಗೈ ಸಮುದಾಯದವರೇ ಅಧಿಕ ಎಂಬ ಸಂಗತಿಯು ತಿಳಿದು ಬಂದಿರುತ್ತದೆ. ಹೀಗಾಗಿ ಇದು ಗೊಂದಲಕ್ಕೆ ಅವಕಾಶ ಮಾಡಿಕೊಡುವ ಕಾರಣದಿಂದಾಗಿ ಈ ಬಗ್ಗೆ ಆಯೋಗವು ಪುನರ್ ಪರಿಶೀಲನೆಯನ್ನು ನಡೆಸಬೇಕಿದೆ. ವರದಿಯ ಅನುಸಾರ ಜನಸಂಖ್ಯೆಯನ್ನು ಲೆಕ್ಕ ಹಾಕಿದಾಗ, ಈ ಕೆಳಕಾಣಿಸಿದಂತೆ ಸಂಖ್ಯೆಯನ್ನು ಗುರುತಿಸಲಾಗಿದೆ.----
ಪಾಯಿಂಟರ್ಬಲಗೈ ಸಮುದಾಯಗಳಿಗೆ ಸೇರಿರುವ ಉಪ ಜಾತಿಗಳ ಒಟ್ಟು ಜನಸಂಖ್ಯೆ - 34,76,464
ಎಡಗೈ ಸಮುದಾಯದ ಉಪ ಜಾತಿಗಳಿಗೆ ಸೇರಿದ ಜನರ ಸಂಖ್ಯೆ - 3440748ಬೋವಿ, ಲಂಬಾಣಿ ಮತ್ತಿತರೆ ಜಾತಿಗಳ ಸಂಖ್ಯೆ - 3111709
----ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ದಿನಾಂಕ 01/08/2024 ರಂದು ಸುಪ್ರೀಂ ಕೋರ್ಟ್ ನವರು ನೀಡಿರುವ ತೀರ್ಪನ್ನು ಆಧರಿಸಿ, ಕರ್ನಾಟಕ ಸರ್ಕಾರವು 12/11/2024 ರಂದು ಹೆಚ್ ಎನ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿದೆ.
ಸರ್ಕಾರದ ಆದೇಶದಲ್ಲಿ ಸದರಿ ಆಯೋಗವು 2011 ರ ಜನಗಣತಿಯನ್ನು ಪರಿಗಣಿಸಿ ವೈಜ್ಞಾನಿಕವಾಗಿ ತರ್ಕಬದ್ಧ ಒಳ ಮೀಸಲಾತಿ ಜಾರಿಗೊಳಿಸುವುದು ಮತ್ತು ಪರಿಶಿಷ್ಟ ಜಾತಿಗಳಲ್ಲಿ ಸಮಾನ ಲಕ್ಷಣಗಳನ್ನು ಹೊಂದಿರುವ ಜಾತಿಗಳ (ಹೋಮೋಜೀನಿಯಸ್ ಗ್ರೂಪ್ಸ್) ಒಳಗೆ ಬರುವ ಉಪ ಜಾತಿಗಳನ್ನು ಒಂದೆಡೆ ಗುರುತಿಸಬೇಕೆಂದು ಹೇಳಿದೆ.ಮುಂದುವರೆದು ಉಪ ಜಾತಿಗಳ ಸಾಮಾಜಿಕ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಅವುಗಳಿಗೆ ಮೀಸಲಾತಿ ವರ್ಗೀಕರಣ ಮಾಡುವಾಗ ಪರಿಣಾಮಕಾರಿ ವಿಧಾನವನ್ನು ಅನುಸರಿಸಬೇಕೆಂದೂ ಸಹ ಹೇಳಲಾಗಿದೆ.
ಆದರೆ ವರದಿಯಲ್ಲಿ ಪರಿಶಿಷ್ಟ ಸಮುದಾಯದ ಉಪ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಿ ಅವುಗಳನ್ನು ನಾಗಮೋಹನ್ ದಾಸ್ ಅವರ ವರ್ಗೀಕರಿಸಿರುವ ಪ್ರವರ್ಗ–ಎ, ಪ್ರವರ್ಗ-ಬಿ, ಪ್ರವರ್ಗ-ಸಿ, ಪ್ರವರ್ಗ –ಡಿ, ಹಾಗೂ ಪ್ರವರ್ಗ-ಇ ಪಟ್ಟಿಯಲ್ಲಿ ಅವರ ಸ್ಥಿತಿಗತಿಗೆ ಅನುಗುಣವಾಗಿ ಸೇರಿಸಬೇಕೆಂದು ಹೇಳಲಾಗಿದೆ.ಹೀಗಿದ್ದರೂ ಕೂಡಾ ನಾಗಮೋಹನ್ ದಾಸ್ ಅವರ ವರದಿಯು ವಿವಿಧ ಪರಿಶಿಷ್ಟ ಸಮುದಾಯದ ಜನರ ಸ್ಥಿತಿಗತಿಯನ್ನು ಗುರುತಿಸಿ ಅವರನ್ನು ಪಟ್ಟಿಗೆ ಸೇರಿಸುವಾಗ ತಾವೇ ಹೇಳಿದ ವೈಜ್ಞಾನಿಕ ಮತ್ತು ತರ್ಕಬದ್ಧವಾದ ಮಾದರಿಯನ್ನು ಅನುಸರಿಸಿಲ್ಲ. ಉದಾಹರಣೆಗೆ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯವನ್ನೇ ಪಡೆಯದ 12 ಪರಿಶಿಷ್ಟ ಜಾತಿಗಳನ್ನು ಅತ್ಯಂತ ಹಿಂದುಳಿದ ಸಮುದಾಯಗಳ ಪಟ್ಟಿಯಲ್ಲಿ ಸೇರಿಸದೇ ಗೊಂದಲ ಸೃಷ್ಟಿ ಮಾಡಿದ್ದಾರೆ. ನ್ಯಾಯವಾಗಿ ಈ ಜಾತಿಗಳು ಅತ್ಯಂತ ಹಿಂದುಳಿದ ಪ್ರವರ್ಗ–ಎ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕಿದ್ದರೂ, ಇವುಗಳನ್ನು ಪ್ರವರ್ಗ–ಬಿ ಮತ್ತು ಪ್ರವರ್ಗ –ಸಿ ಗುಂಪಿಗೆ ಸೇರ್ಪಡೆ ಮಾಡಲಾಗಿದೆ.
ಚಂಡಾಲ, ಕೆಂಪರಿಸ್, ಕುಡುಂಬನ್, ಮವಿಲನ್, ಪನ್ನಂಡಿ ಜಾತಿಗಳು ಪ್ರವರ್ಗ –ಬಿ ಮತ್ತು ಮಹ್ಯವಂಶಿ, ದೆಡ್, ವಂಕರ್, ಮರುವಂಕರ್, ಮಲಹನ್ನೈ, ಮಲಮಸ್ತಿ, ಮಲಸಲೆ, ನೆಟ್ಕಾನಿ ಜಾತಿಗಳು ಪ್ರವರ್ಗ–ಸಿ ಪಟ್ಟಿಯಲ್ಲಿದ್ದು ಈವರೆಗೆ ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯ ಆಗದ ಇವರು ಬಿ ಮತ್ತು ಸಿ ಗುಂಪಿನ ಜಾತಿಗಳ ನಡುವೆ ಪೈಪೋಟಿ ನಡೆಸಿ ಉದ್ಯೋಗ ಗಿಟ್ಟಿಸಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ ಎಂಬ ಸಂಗತಿಯು ಇಲ್ಲಿ ಗೊಂದಲ ಸೃಷ್ಟಿಗೆ ಕಾರಣವಾದ ಸಂಗತಿಯಾಗಿದೆ.ಇನ್ನು ಶೈಕ್ಷಣಿಕವಾಗಿ ನೋಡುವಾಗ ಅಗೇರ್, ಬಕುಡ, ಬೈರ, ಬಂತ್, ಬೇಡ ಜಂಗಮ, ಬುಡ್ಗ ಜಂಗಮ, ಗೊಡ್ಡ, ಲಿಂಗಾದರ್, ಮಾಚಲ, ಮನ್ನೆ ಆದಿಯಾಗಿ ಒಟ್ಟು 26 ಜಾತಿಗಳ ಸಾಕ್ಷರತೆಯ ಪ್ರಮಾಣವು 90% ಗಿಂತ ಮೇಲಿದ್ದು ಅವುಗಳನ್ನು ಅತಿ ಹಿಂದುಳಿದ ಸಮುದಾಯಗಳೆಂದು ಪರಿಗಣಿಸಲಾಗಿರುತ್ತದೆ. ಇನ್ನು 80 ರಿಂದ 90% ಸಾಕ್ಷರತಾ ಪ್ರಮಾಣ ಹೊಂದಿದ 55 ಕ್ಕೂ ಅಧಿಕ ಜಾತಿಗಳನ್ನೂ ಸಹ ಅತಿ ಹಿಂದುಳಿದ ಜಾತಿಗಳೆಂದು ವರದಿಯಲ್ಲಿ ಹೇಳಲಾಗಿದೆ. ಇಲ್ಲಿ ಜಗ್ಗಲಿ, ಗರಡಗಾರು ಮತ್ತು ಸಿಂದೊಳ್ಳು ತರದ ಜಾತಿಗಳ ಸಾಕ್ಷರತಾ ಪ್ರಮಾಣವು 60% ಗಿಂತ ಕಡಿಮೆ ಇದ್ದು ಅವುಗಳನ್ನೂ ಕೂಡಾ ಅತಿ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸುವ ಮೂಲಕ ಈ ದುರ್ಬಲ ಜಾತಿಗಳಿಗೆ ಆದ್ಯತೆಯ ಮೇರೆಗೆ ಸಿಗಬೇಕಾದ ಸೌಲಭ್ಯಗಳಿಗೆ ಸ್ಪರ್ಧೆಯನ್ನು ತಂದಿಡಲಾಗಿದ್ದು ಇಲ್ಲಿ ನಾಗಮೋಹನ್ ದಾಸ್ ಅವರ ವರದಿಯು ವೈಜ್ಞಾನಿಕವಾಗಿಲ್ಲ ಮತ್ತು ಗೊಂದಲಮಯವಾಗಿದೆ.
ಇನ್ನು ಬೇಡ ಜಂಗಮ ಜಾತಿಯ ವಿಷಯದಲ್ಲಿ ನ್ಯಾಯಾಲಯವೇ ಆ ಸಮುದಾಯದ ಸುಳ್ಳು ಜಾತಿ ಪ್ರಮಾಣ ಪತ್ರದ ಬಗ್ಗೆ ತಿಳಿಸಿದ್ದರೂ ಕೂಡಾ ನಾಗಮೋಹನ್ ದಾಸ್ ಅವರ ವರದಿಯಲ್ಲಿ ಬೇಡ ಜಂಗಮ ಮತ್ತು ಬುಡ್ಗ ಜಂಗಮ ಜಾತಿಗಳನ್ನು ಒಂದೇ ಕಾಲಂ ನಲ್ಲಿ ನಮೂದಿಸಲಾಗಿದ್ದು ಇಲ್ಲಿಯೂ ಗೊಂದಲವನ್ನು ಸೃಷ್ಟಿ ಮಾಡಲಾಗಿದೆ.ಇನ್ನು ರಾಜಕೀಯ ಪ್ರಾತಿನಿಧ್ಯವನ್ನು ಗಮನಿಸಿದರೆ ಈವರೆಗೂ ಪ್ರಾತಿನಿಧ್ಯವನ್ನೇ ಪಡೆಯದ 40 ಕ್ಕೂ ಹೆಚ್ಚು ಸಮುದಾಯಗಳು ಇದ್ದರೂ ಅವುಗಳನ್ನು ಅತಿ ಹಿಂದುಳಿದ ಸಮುದಾಯಗಳು ಎಂದು ಗುರುತಿಸದೇ ಅವನ್ನು ಗ್ರೂಪ್ ಸಿ ಪಟ್ಟಿಗೆ ಸೇರಿಸಲಾಗಿದೆ.
ಇನ್ನು ಅತಿ ಕಡಿಮೆ ರಾಜಕೀಯ ಪ್ರಾತಿನಿಧ್ಯ ಪಡೆದ 50 ಕ್ಕೂ ಹೆಚ್ಚು ಜಾತಿಗಳ ವಿಷಯದಲ್ಲೂ ಸಹ ಆಯೋಗವು ಇದೇ ರೀತಿಯಾಗಿ ತರ್ಕವಿಲ್ಲದೇ ಸರಿಯಾದ ಮಾನದಂಡಗಳನ್ನು ಅನುಸರಿಸದೇ ಅವನ್ನು ಅಸಮರ್ಪಕವಾಗಿ ಗ್ರೂಪ್ ಸಿ ಪಟ್ಟಿಗೆ ಸೇರಿಸಿದ್ದು, ಸರಿಯಾದ ಪ್ರಾತಿನಿಧ್ಯವನ್ನು ಒದಗಿಸುವ ನಿಟ್ಟಿನಲ್ಲಿ ಇಲ್ಲಿಯೂ ಗೊಂದಲವನ್ನು ಸೃಷ್ಟಿ ಮಾಡಲಾಗಿದೆ.ಈ ವರದಿಯಲ್ಲಿ ಕೆಲವು ಲೋಪಗಳೂ ಇವೆ. ಉದಾಹರಣೆಗೆ 2025 ರ ಪರಿಶಿಷ್ಟ ಸಮುದಾಯಗಳ ಸಮೀಕ್ಷೆಯಲ್ಲಿ ಪಾಲ್ಗೊಂಡ ಕುಟುಂಬಗಳ ಸಂಖ್ಯೆ 27,24,768 ಎಂದು ಹೇಳಿರುವ ಆಯೋಗವು, ಅದೇ ವರದಿಯಲ್ಲಿ 27,60,975 ಕುಟುಂಬಗಳು ಭೂಮಿಯನ್ನು ಹೊಂದಿವೆ ಎಂದು ಹೇಳಿದ್ದು ಇನ್ನಷ್ಟು ಗೊಂದಲವನ್ನು ಸೃಷ್ಟಿಸಿದೆ.
ಇನ್ನು ಜನಸಂಖ್ಯಾವಾರು ಗಮನಿಸಿದಾಗಲೂ ಕೂಡಾ ಬಲಗೈ ಸಮುದಾಯಗಳಿಗೆ ಸೇರಿರುವ ಉಪ ಜಾತಿಗಳ ಒಟ್ಟು ಜನಸಂಖ್ಯೆಯು 34,76,464 ಇದ್ದು ಎಡಗೈ ಸಮುದಾಯದ ಉಪ ಜಾತಿಗಳಿಗೆ ಸೇರಿದ ಜನರ ಸಂಖ್ಯೆಯು 3440748 ಇದೆ. ಇನ್ನು ಪರಿಶಿಷ್ಟ ಜಾತಿ ಇತರೆ ಪಟ್ಟಿಯಲ್ಲಿರುವ ಬೋವಿ, ಲಂಬಾಣಿ ಮತ್ತಿತರೆ ಜಾತಿಗಳ ಸಂಖ್ಯೆಯು 3111709 ಇದ್ದು, ಪ್ರಸ್ತುತ ಎಡಗೈ ಸಮುದಾಯದ ಜನರೇ ಹೆಚ್ಚಾಗಿದ್ದಾರೆ ಎಂದು ಹರಿದಾಡುತ್ತಿರುವ ಗೊಂದಲವನ್ನು ಆಯೋಗ ಮತ್ತು ಸರ್ಕಾರವು ವೈಜ್ಞಾನಿಕವಾಗಿ ಮತ್ತು ತರ್ಕಬದ್ಧವಾಗಿ ನಿಭಾಯಿಸುವ ಸವಾಲವನ್ನು ಹೊಂದಿದೆ