ಸಾರಾಂಶ
- ಗ್ಯಾರಂಟಿ ಯೋಜನೆಗಳ ಭಾರದ ಮಧ್ಯೆ ದಾವಣಗೆರೆ ಜಿಲ್ಲೆ ಜನತೆ ಬಹುನಿರೀಕ್ಷೆಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಸಿಗುತ್ತಾ?
- ಅಹಿಂದ ಸಮಾವೇಶ, ಸಿದ್ದರಾಮೋತ್ಸವ ಯಶಸ್ವಿ ಕಾರ್ಯಕ್ರಮಗಳಿಂದ ಮುಖ್ಯಮಂತ್ರಿಗೆ ಶಕ್ತಿ ತುಂಬಿರುವ ದಾವಣಗೆರೆ ಜಿಲ್ಲೆ- ಪ್ರಭಾವಿ ಸಚಿವ, ಸಂಸದೆ, ಆರು ಶಾಸಕರು, ವಿಪ ಸದಸ್ಯ ಬಲವಿರುವ ಜಿಲ್ಲೆ । ಯಾವುದಕ್ಕೆ, ಎಷ್ಟು ಹಣ ಕೊಟ್ಟಾರೆಂಬುದೇ ಜನರ ಚಿಂತೆ!
- - - ನಾಗರಾಜ ಎಸ್. ಬಡದಾಳ್ಕನ್ನಡಪ್ರಭ ವಾರ್ತೆ ದಾವಣಗೆರೆ ಪಂಚ ಗ್ಯಾರಂಟಿ ಯೋಜನೆಗಳ ಸರದಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಸ್ತುತ ಸನ್ನಿವೇಶಗಳ ಗಮನಿಸಿದರೆ, ಜನತೆ ಮೇಲೆ ಬೆಲೆ ಏರಿಕೆ, ಆರ್ಥಿಕ ಹೊರೆ ಹೇರುವ ಪರಿಸ್ಥಿತಿ ಗೋಚರಿಸುತ್ತಿದೆ. ಇಂಥ ದುಸ್ಥಿತಿಯಲ್ಲಿ ದಾವಣಗೆರೆ ಜಿಲ್ಲೆಯ ಜನತೆ ಸಿದ್ದರಾಮಯ್ಯ ಮಂಡಿಸುವ ದಾಖಲೆ ಬಜೆಟ್‌ನಿಂದ ಹೆಚ್ಚೇನು ನಿರೀಕ್ಷಿಸಲು ಸಾಧ್ಯ..?
ರಾಜ್ಯ ಬಜೆಟ್ ಮಂಡನೆಯ ಇಂದಿನ ಸಂದರ್ಭದಲ್ಲಿ ಹೀಗಂತ ಜಿಲ್ಲೆಯ ಜನ ಬೇಸರ, ನಿರಾಶೆಯ ಮಾತುಗಳಾಡುತ್ತಿದ್ದಾರೆ. ಇದರ ಹಿಂದೆಯೇ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎಂಬ ಗಾದೆಯನ್ನೂ ನೆನಪಿಸುತ್ತಿದ್ದಾರೆ.ಹೌದು. ಜೆಡಿಎಸ್ ತೊರೆದು ದಾವಣಗೆರೆಯಲ್ಲಿಯೇ ಸಿದ್ದರಾಮಯ್ಯ ಅಹಿಂದ ಸಮಾವೇಶ ಮಾಡಿದ್ದು. ಇದೇ ನೆಲದಿಂದ ರಾಜಕೀಯ ಪುನರ್ಜನ್ಮ ಪಡೆದವರು. ಕೆಲ ವರ್ಷದ ಹಿಂದೆ ಬಿಜೆಪಿ ಆಳ್ವಿಕೆಯಲ್ಲಿ ಸಿದ್ದರಾಮೋತ್ಸವ ಮೂಲಕ ರಾಜಕೀಯ ಮರುಹುಟ್ಟು ಪಡೆದ ಸಿದ್ದರಾಮಯ್ಯ, 2ನೇ ಅವಧಿಗೆ ಸಿಎಂ ಆದರೂ ಕಳೆದ ಬಜೆಟ್‌ನಲ್ಲಿ ಮಧ್ಯ ಕರ್ನಾಟಕದ ಜಿಲ್ಲೆಗೆ ಕೈಬಿಚ್ಚಿ ಅನುದಾನ ನೀಡಿಲ್ಲ. ಈ ಸಲವಾದರೂ ಎರಡೂ ಸಲ ತಮಗೆ ರಾಜಕೀಯ ಶಕ್ತಿ, ಆತ್ಮಸ್ಥೈರ್ಯ ತುಂಬಿದ ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಹೇಗೆ ಸ್ಪಂದಿಸುತ್ತಾರೆ ಎಂಬ ಆಶಾಭಾವನೆ ಜನರಲ್ಲಿ ಮೊಳೆತಿದೆ.
7 ವಿಧಾನಸಭಾ ಕ್ಷೇತ್ರಗಳ ಜಿಲ್ಲೆ:ದಾವಣಗೆರೆ ಜಿಲ್ಲೆಯು ಏಳು ವಿಧಾನಸಭಾ ಕ್ಷೇತ್ರದಲ್ಲಿ ಆರು ಶಾಸಕರು, ಓರ್ವ ಸಂಸದರು, ಮೇಲ್ಮನೆಯಲ್ಲೂ ಸದಸ್ಯರನ್ನು ಹೊಂದಿದೆ. ಹೀಗಿದ್ದೂ ಕಳೆದ ಸಲ ಈ ಜಿಲ್ಲೆ ಮೇಲೆ ಸಿದ್ದರಾಮಯ್ಯ ಕೃಪಾದೃಷ್ಟಿ ಬಿದ್ದಿಲ್ಲ. ಈಗ ಬಜೆಟ್ ಮಂಡನೆಯಲ್ಲೇ ದಾಖಲೆ ಸ್ಥಾಪಿಸುತ್ತಿರುವ ಮುಖ್ಯಮಂತ್ರಿಯವರು ದಾವಣಗೆರೆ ಜಿಲ್ಲೆಗೆ ಹೊಸ ಕಾರ್ಯಕ್ರಮ, ಯೋಜನೆ, ಸೌಲಭ್ಯ, ಕೊಡುಗೆಗಳನ್ನು ಘೋಷಿಸುತ್ತಾರಾ ಎಂಬ ಪ್ರಶ್ನೆ, ನಿರೀಕ್ಷೆ ಬೆಣ್ಣೆನಗರಿಯವರದು.
ವಿಮಾನ ಹಾರಾಡುವ ಕಾಲ ಬರುತ್ತಾ?ವಿದ್ಯಾನಗರಿ, ವಾಣಿಜ್ಯ ನಗರಿ, ದಾನಿಗಳ ಊರು ಹೀಗೆ ಹಲವಾರು ಬಿರುದು ಬಾವಲಿಗಳು ದಾವಣಗೆರೆ ಹೊತ್ತಿದೆ. ಆದರೆ, ಕಳೆದೊಂದು ದಶಕದಿಂದ ಆಳಿದ ಸರ್ಕಾರಗಳೆಲ್ಲಾ ಜಿಲ್ಲೆಯನ್ನು ಕಡೆಗಣಿಸಿರುವುದು ಗಂಭೀರ ವಾಸ್ತವ. ರಾಜ್ಯದಲ್ಲೇ ಯಾವುದೇ ಸರ್ಕಾರದ ಹಂಗಿಲ್ಲದೇ, ಸ್ವಸಾಮರ್ಥ್ಯದಿಂದ ಅತಿ ವೇಗದಲ್ಲಿ ಬೆಳೆಯುತ್ತಿರುವ ಮಹಾನಗರ ಎಂಬ ಖ್ಯಾತಿ ದಾವಣಗೆರೆಗೆ ಇದ್ದೆ. ಆದರೂ, ವಾಣಿನ್ಯ- ವ್ಯವಹಾರಗಳಿಗೆ ಬೂಸ್ಟರ್ ಡೋಸ್ ಆಗಬಲ್ಲ ವಿಮಾನ ನಿಲ್ದಾಣ ಮಾತ್ರ ಮಂಜೂರಾಗಿಲ್ಲ. ನಾಲ್ಕೈದು ದಶಕಗಳ ಈ ಕನಸು ದಾವಣಗೆರೆ ಜನರಿಗೆ ಇಂದಿಗೂ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ. ಈ ಬಾರಿಯ ಬಜೆಟ್‌ನಲ್ಲಿ ದಾವಣಗೆರೆಗೆ ಸಿಎಂ ವಿಮಾನ ಹಾರಿಸುತ್ತಾರಾ?, ನಗರ ದೇವತೆ ಶ್ರೀ ದುಗ್ಗಮ್ಮನಿಗೇ ಗೊತ್ತು.
ವಿಮಾನ ನಿಲ್ದಾಣಕ್ಕೆ ಅಲ್ಲಿ ಜಾಗ ನೋಡಿದ್ದರೆ, ಇಲ್ಲಿ ಜಾಗ ಗುರುತಿಸಿದ್ದರೆ, ಅಲ್ಲೆಲ್ಲೋ ಸರ್ವೇ ಮಾಡಿದ್ದಾರೆ ಅಂತಾ ಪುಕಾರು ಆಗಿ, ಅಂತಹ ಪ್ರದೇಶಗಳ ಸುತ್ತಮುತ್ತಲಿನ ಜಾಗದ ಬೆಲೆ ಏರಿಕೆಯಾಗಿದ್ದಷ್ಟೇ. ಜಿಲ್ಲಾ ಕೇಂದ್ರದ ಮೇಲೆ ವಿಮಾನ ಹಾರುವುದಿರಲಿ, ಇನ್ನೂ ಜಾಗವೇ ಸಿಗದ ಸ್ಥಿತಿ ಇದೆ. ವಿಮಾನ ನಿಲ್ದಾಣಕ್ಕೆಂದು ಇಲ್ಲಿನ ಟಿವಿ ಸ್ಟೇಷನ್ ಕೆರೆ ಸಮೀಪ ಜಾಗವನ್ನು ದಶಕಗಳ ಹಿಂದೆಯೇ ಪರಿಶೀಲಿಸಿದ್ದರಂತೆ. ಅದಕ್ಕಾಗಿ ಅಲ್ಲಿ ಕೆಲ ಭಾಗವನ್ನು ಇಂದಿಗೂ ಹಳಬರು ವಿಮಾನಮಟ್ಟಿ ಅಂತಾನೇ ಕರೆಯುತ್ತಿದ್ದಾರೆ. ಆದರೆ, ಈ ಬೇಡಿಕೆ ಮಾತ್ರ ಗಗನ ಕುಸುಮವೇ ಆಗಿದೆ.ಕೈಗಾರಿಕೆಗಳೇ ಇಲ್ಲ, ಕೃಷಿ ಕಾಲೇಜೂ ಒಲಿದಿಲ್ಲ:
ಒಂದು ಕಾಲದಲ್ಲಿ ಹತ್ತಿ ಗಿರಣಿ, ಎಣ್ಣೆ ಮಿಲ್, ರೈಸ್ ಮಿಲ್‌ಗಳು ದಾವಣಗೆರೆಯಲ್ಲಿ ಸದ್ದು ಮಾಡಿದ್ದವು. ಆದರೆ, ಈಗ ಈ ಊರಿನಲ್ಲಿ ಎದ್ದೆ ಮುಟ್ಟಿ ಹೇಳಿಕೊಳ್ಳಲು ಒಂದೇ ಒಂದು ದೊಡ್ಡ ಕೈಗಾರಿಕೆಯೂ ಅಸ್ಥಿತ್ವದಲ್ಲಿಲ್ಲ. ರಾಜ್ಯದ ಮೆಕ್ಕೆಜೋಳದ ಕಣಜ ದಾವಣಗೆರೆ ಜಿಲ್ಲೆ ಅಂತಾರೆ. ಇಲ್ಲಿ ಮೆಕ್ಕೆಜೋಳ ಆಧಾರಿತ ಉತ್ಪನ್ನಗಳ ಕೈಗಾರಿಕೆ ಸ್ಥಾಪಿಸಬೇಕೆಂಬ ಕೂಗು ಬಹಳ ಹಿಂದಿನಿಂದಲೂ ಇದೆ. ಈ ಕೈಗಾರಿಕೆ ಸ್ಥಾಪನೆಯಾದರೆ ಸ್ಥಳೀಯ ರೈತರು, ರೈತರ ಮಕ್ಕಳು, ನಗರ, ಗ್ರಾಮೀಣ ಯುವಜನರ ಕೈಗೆ ಕೆಲಸವೂ ಸಿಕ್ಕಂತಾಗುತ್ತದೆ. ಮೆಕ್ಕೆಜೋಳದ ಕಣಜ, ಅಡಕೆ, ತೆಂಗು, ಬತ್ತ, ಕಬ್ಬು ಮತ್ತಿತರೆ ತೋಟಗಾರಿಕೆ ಬೆಳೆಯುವ ಜಿಲ್ಲೆಯಲ್ಲೊಂದು ಕೃಷಿ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಇದಕ್ಕಾಗಿ ಜಿಲ್ಲೆಯಲ್ಲಿ ಎರಡು ಕಡೆ ಜಾಗವೂ ಇದೆ. ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳಿಗೆ ಮೆಗಾ ಡೈರಿ ಸ್ಥಾಪಿಸಬೇಕೆಂಬ ಬೇಡಿಕೆಯೂ ಪೆಂಡಿಂಗ್ ಇದೆ. ಕೃಷಿ ಉತ್ಪನ್ನ ಶೇಖರಿಸಿಡಲು ಶೀಥಲೀಕರಣ ಘಟಕ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯವೂ ಇದೆ. ಆದರೂ, ಆಳುವ ಸರ್ಕಾರದ ಚಿತ್ತ ಮಾತ್ರ ಈ ವಿಷಯಗಳತ್ತ ಹರಿದಿಲ್ಲ.ಜೀವನಾಡಿ ಭದ್ರಾ ಅಣೆಕಟ್ಟೆಯ ನಾಲೆಗಳು ಜಿಲ್ಲೆಯ ನರನಾಡಿಗಳಂತೆ ಹರಡಿವೆ. ನಾಲೆಯಲ್ಲಿ ಹೂಳು ತುಂಬಿದ್ದು, ಕಳೆಗಿಡಗಳು ರಾಶಿರಾಶಿ ಬೆಳೆದಿವೆ. ಪರಿಣಾಮ ಭದ್ರಾ ನಾಲೆ ಅಚ್ಚುಕಟ್ಟು ಕೊನೆಯ ಭಾಗದ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ, ರೈತರ ಗೋಳೂ ತಪ್ಪುತ್ತಿಲ್ಲ. 1972ರಲ್ಲಿ ಗಾರೆ ಸುಣ್ಣ, ಕಲ್ಲುಗಳಿಂದ ನಿರ್ಮಾಣವಾದ ಭದ್ರಾ ಡ್ಯಾಂನ ದುರಸ್ತಿ, ಕ್ರೆಸ್ಟ್‌ಗೇಟ್‌ಗಳನ್ನು ರೀಕಂಡೀಷನ್, ನಾಲೆಗಳ ಆಧುನೀಕರಣ, ಹೂಳೆತ್ತುವುದು, ಕಳೆಗಿಡಗಳ ತೆರವಿಗೆ ಕನಿಷ್ಟ ₹2 ಸಾವಿರ ಕೋಟಿ ಮೀಸಲಿಡುವಂತೆ, ಅಚ್ಚುಕಟ್ಟು ಕೊನೆ ಭಾಗಕ್ಕೆ ಪ್ರದೇಶಗಳಿಗೆ ಕಾಲಕಾಲಕ್ಕೆ ಸಮರ್ಪಕ ನೀರು ಹರಿಸಬೇಕೆಂಬ ರೈತರು, ಸಂಘಟನೆಗಳ ಕೂಗು ಆಳುವ ಧಣಿ (ಸರ್ಕಾರ) ಕೇಳಿ, ಸ್ಪಂದಿಸಬೇಕಾಗಿದೆ. ಹರಿಹರದ ಭೈರನಪಾದವೂ ನನೆಗುದಿಗೆ ಬಿದ್ದಿದೆ. ಕೈಗಾರಿಕಾ ಕಾರಿಡಾರ್ ಇಲ್ಲಿಲ್ಲ. ಜವಳಿ ಪಾರ್ಕ್ ಮಾತ್ರ ಹೆಸರಿಗಷ್ಟೇ ಇದ್ದು, ಅಲ್ಲಿ ಜವಳಿ ಕ್ಷೇತ್ರಕ್ಕೆ 2-3 ಘಟಕ ಬಿಟ್ಟರೆ ಉಳಿದಿದ್ದೆಲ್ಲಾ ಗ್ಯಾರೇಜ್, ವರ್ಕ್ ಶಾಪ್, ಬೇರೆ ಬೇರೆ ಕೈಗಾರಿಕೆಗೆ ಸೀಮಿತವಾಗಿವೆ.
ದಾವಣಗೆರೆಯಲ್ಲೇ 3ನೇ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ದನಿ:ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಈ ಹಿಂದೆ ಸಿದ್ದರಾಮಯ್ಯ ಮೊದಲ ಅವಧಿಗೆ ಸಿಎಂ ಆಗಿದ್ದಾಗ ಅನುದಾನ ಮೀಸಲಿಟ್ಟಿದ್ದರೂ, ಅದು ನನೆಗುದಿಗೆ ಬಿದ್ದಿತ್ತು. ಇದೀಗ ಮತ್ತೆ ವಿಶ್ವ ಕನ್ನಡ ಸಮ್ಮೇಳನಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು, ದಿನಾಂಕ ಘೋಷಿಸುವಂತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲೆಯ ಶಾಸಕರ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಾಭಿಮಾನಿಗಳು, ಸಂಘಟನೆಗಳು, ಮಾಧ್ಯಮದವರು ಕೂಡ ಈ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ.
ಪ್ರವಾಸ ತಾಣಗಳು, ಪುಣ್ಯಕ್ಷೇತ್ರಗಳಿಗೆ ಸ್ಪಂದನೆ ಸಿಗುವುದೇ?:ಚನ್ನಗಿರಿ ತಾಲೂಕಿನಲ್ಲಿ ಇಡೀ ಏಷ್ಯಾದಲ್ಲೇ ಅತಿ ದೊಡ್ಡ ಎರಡನೇ ಕೆರೆ ಸೂಳೆಕೆರೆ, ವಿಶಾಲ ತೂಗು ಕಾಲುವೆ, ಸಾಗರಪೇಟೆ, ಅತ್ಯಾಕರ್ಷಕ ಪುಷ್ಕರಿಣಿ, ಅಮ್ಮನ ಗುಡ್ಡ, ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಜಿರಾಜೇ ಬೋಸ್ಲೆ ಸಮಾಧಿ ಸ್ಥಳ, ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾದ ಉಬ್ರಾಣಿ ಹೋಬಳಿ, ಅರಣ್ಯ ಪ್ರದೇಶ, ಭಾರತದಲ್ಲೇ ಅತಿ ದೊಡ್ಡದಾದ ಆಕರ್ಷಕ ಗಾಜಿನ ಮನೆ, ಆನಗೋಡು ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯ, ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ, ಕೊಂಡಜ್ಜಿ ಅರಣ್ಯ ಪ್ರದೇಶ, ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶ, ಪ್ರಕೃತಿ ಮಡಿಲಲ್ಲಿರುವ ಕಣ್ವಕುಪ್ಪೆ ಅರಣ್ಯ ಪ್ರದೇಶ ಹೀಗೆ ಸಾಲು ಸಾಲು ಪ್ರವಾಸಿ ತಾಣಗಳಿವೆ. ಹೊನ್ನಾಳಿ, ನ್ಯಾಮತಿ ತಾಲೂಕಿನ ಪ್ರವಾಸಿ ತಾಣಗಳು, ಪುಣ್ಯಕ್ಷೇತ್ರಗಳು ಕಡೆಗಣಿಸಲ್ಪಟ್ಟಿವೆ. ಅವನ್ನೆಲ್ಲಾ ಸೇರಿಸಿ, ಪ್ರವಾಸಿ ಸರ್ಕೀಟ್ ಮಾಡುವ ಕೆಲಸವೂ ಸರ್ಕಾರದಿಂದ ಆಗಲೆಂಬುದು ಜನರ ನಿರೀಕ್ಷೆಯಾಗಿದೆ.
ಐಟಿ ಬಿಟಿಗೆ ಉತ್ಸಾಹ ತೋರುವರೇ ಸಿಎಂ?:ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂಬ ಕೂಗು ಹಿಂದಿನಿಂದಲೂ ಇದೆ. ಸರ್ಕಾರಿ ಕೃಷಿ ಮತ್ತು ತೋಟಗಾರಿಕೆ ವಿವಿ ಅಥವಾ ಕಾಲೇಜುಗಳನ್ನು ಸ್ಥಾಪಿಸುವಂತೆ ರೈತಾಪಿ ವರ್ಗದ ಕೂಗು ಸರ್ಕಾರಕ್ಕೆ ಮುಟ್ಟಿಯೇ ಇಲ್ಲ. ನಾಲ್ಕು ಎಂಜಿನಿಯರಿಂಗ್ ಕಾಲೇಜು ಇಲ್ಲಿದ್ದು, ಸಾಫ್ಟ್‌ವೇರ್ ಎಂಜಿನಿಯರ್‌ಗಳ ಇಲ್ಲಿ ಕಲಿತು ಅನ್ನ, ಉದ್ಯೋಗ ಅರಸಿ ಬೇರೆಡೆ ಹೋಗುತ್ತಿದ್ದಾರೆ. ದಾವಣಗೆರೆಯಲ್ಲೇ ಎಲ್ಲ ಸೌಲಭ್ಯ ಇದೆಯಲ್ಲ ಎನ್ನುವವರಿಗೆ ಐಟಿ ಬಿಟಿ ಕಂಪನಿಗಳು ಸ್ಥಾಪನೆ ಆಗಿಲ್ಲವಲ್ಲ ಎಂಬ ಬೇಸರದ ಉತ್ತರ ಸಿಗುತ್ತಿದೆ. ಪ್ರತಿ ವರ್ಷ ನೂರಾರು ಸಾಫ್ಪ್‌ವೇರ್, ಸಿವಿಲ್, ಮೆಕ್ಯಾನಿಕಲ್ ಸೇರಿದಂತೆ ವಿವಿಧ ವಿಭಾಗದ ಎಂಜಿನಿಯರ್‌ಗಳು ಹೊರಬರುತ್ತಿದ್ದಾರೆ. ಆದರೆ, ಅವರೆಲ್ಲ ಜಿಲ್ಲೆಯಲ್ಲಿ ನೆಲೆನಿಲ್ಲದೇ ಉದ್ಯೋಗ ಅರಸಿ, ಹೊರ ಜಿಲ್ಲೆ, ರಾಜ್ಯಗಳಿಗೆ ಗುಳೆ ಹೋಗುತ್ತಾರೆ. ಬರೀ ಕೂಲಿ ಕಾರ್ಮಿಕರಷ್ಟೇ ಅಲ್ಲ ಪದವೀಧರರೂ ಅನ್ನ ಅರಸಿ, ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ ಐಟಿ ಬಿಟಿ ಸೇರಿದಂತೆ ವಿವಿಧ ಕಂಪನಿಗಳ ಸ್ಥಾಪನೆಯಾಗಬೇಕಿದೆ.
- - - -(ಫೋಟೋ ಕಳಿಸುವೆ)