ಈ ಬಾರಿಯಾದ್ರು ಕೆಲಸದ ಅವಧಿ ಬದಲಾವಣೆ ಆಗುತ್ತಾ ?

| Published : Mar 18 2025, 12:32 AM IST

ಸಾರಾಂಶ

ಕಲ್ಯಾಣ ಕರ್ನಾಟದ ಏಳು ಜಿಲ್ಲೆಗಳಲ್ಲಿ ಬಿರು ಬಿಸಿಲಿನಲ್ಲಿ ಸರ್ಕಾರಿ ಕಚೇರಿಗಳಲ್ಲಿ ಸೇವೆ ಸವಾಲಾಗಿದೆ. ನೌಕರರ ಸಂಕಷ್ಟವನ್ನು ಸಿಎಂಗೆ ಮನವರಿಕೆ ಮಾಡಿಕೊಡಲಾಗಿದ್ದು, ಆದೇಶದ ನಿರೀಕ್ಷೆಯಲ್ಲಿ ನೌಕರರಿದ್ದಾರೆ.

ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಬೇಸಿಗೆ ಬಿರುಬಿಸಿಲಿನ ತಾಪ ದಿನೇ ದಿನೆ ಜಾಸ್ತಿಯಾಗುತ್ತಿರುವುದರಿಂದ ಸರ್ಕಾರಿ ಕಚೇರಿಗಳ ಕೆಲಸದ ಅವಧಿ ಬದಲಾಯಿಸಬೇಕು ಎನ್ನುವ ನೌಕರರ ಬೇಡಿಕೆ ಮುನ್ನೆಲೆಗೆ ಬಂದಿದೆ. ವಿವಿಧ ಕಾರಣಗಳಿಂದ ಕಳೆದ ಹಲವು ವರ್ಷಗಳಿಂದ ತಪ್ಪು ಹೋಗಿದ್ದ ಸರ್ಕಾರಿ ಕಚೇರಿಗಳ ಕೆಲಸದ ವಧಿ ಬದಲಾವಣೆ ಈ ಬಾರಿಯಾದರೂ ಜಾರಿಗೆ ಆಗುತ್ತದೆಯೋ ?ಇಲ್ಲವೋ ಎನ್ನುವ ಗೊಂದಲದ ಆತಂಕದಲ್ಲಿ ನೌಕರರಿದ್ದಾರೆ.ಪ್ರತಿ ಬೇಸಿಗೆಯ ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬೇಸಿಗೆಯ ತಾಪವು ಗರಿಷ್ಠ ಪ್ರಮಾಣಕ್ಕೆ ತಲುಪುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯಂತೂ ಇದರ ಪ್ರಮಾಣವು ಇನ್ನು ಜಾಸ್ತಿಯಾಗುತ್ತದೆ. ಪ್ರಸಕ್ತ ಸಾಲಿನ ಬೇಸಿಗೆಯ ತಾಪವು 40 ರಿಂದ 47 ಡಿಗ್ರಿ ಸೆಲ್ಸಿಯಸ್‌ ಗರಿಷ್ಠಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದರಿಂದ ಕಚೇರಿ ಅವಧಿ ಬದಲಿಸಬೇಕು ಎಂದು ನೌಕರರ ಸಂಘವು ಸರ್ಕಾರದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತಿದೆ.ಎರಡ್ಮೂರು ವರ್ಷಗಳಿಂದ ಬದಲಾವಣೆ ಇಲ್ಲ : ಈ ಮುಂಚೆ ಬೇಸಿಗೆ ಕೊನೆ ಎರಡ್ಮೂರು ಮಾಸದಲ್ಲಿ ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ಬರುವ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸರ್ಕಾರಿ ಸೌಮ್ಯದ ಕಚೇರಿಗಳ ಕೆಲಸದ ಅವಧಿಯ ಸಮಯವನ್ನು ಬದಲಿಸುವ ಪರಿಪಾಠವಿತ್ತು ಆದರೆ ಕೊರೋನಾ, ವಿಧಾನ ಸಭೆ ಹಾಗೂ ಲೋಕಸಭಾ ಸಾರ್ವತ್ರಿಕ ಚುನಾಣೆ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಸರ್ಕಾರಿ ನೌಕರರ ಸುಡು ಬಿಸಿಲಿನಲ್ಲಿಯೇ ಕೆಲಸ ಮಾಡಿ ದಣಿದಿದ್ದರು. ಶೀಘ್ರದಲ್ಲಿಯೇ ಆದೇಶ: ಪ್ರಸಕ್ತ ಬೇಸಿಗೆಯಲ್ಲಿ ಎಲೆಕ್ಷನ್‌ ಸೇರಿ ಇತರೆ ಜರೂರಿ ಸಂದರ್ಭವಿಲ್ಲದ ಕಾರಣಕ್ಕೆ ಎರಡು ತಿಂಗಳಲ್ಲಿಯಾದರೂ ಸರ್ಕಾರಿ ಕಚೇರಿ ಅವಧಿಯವನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1:30 ವರೆಗೆ ಮಾಡಬೇಕು ಎಂದು ಕೆಕೆ ಭಾಗದ ಜಿಲ್ಲೆಗಳ ಸರ್ಕಾರಿ ನೌಕರರ ಸಂಘಗಳು ರಾಜ್ಯಾಧ್ಯಕ್ಷರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದು, ಸರ್ಕಾರಿ ನೌಕರರ ಈ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಆದೇಶ ಹೊರಡುವ ಸಾಧ್ಯತೆಗಳಿವೆ. ----------------ಬಾಕ್ಸ್ ಆರೋಗ್ಯ ಸಚಿವರಿಂದ ಹೆಲ್ತ್‌ ಟಿಪ್ಸ್ರಾಯಚೂರು ಜಿಲ್ಲೆ ಮಾನ್ವಿಗೆ ಮೊನ್ನೆ ಭೇಟಿ ನೀಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಸಾರ್ವಜನಿಕರಿಗೆ ಹಾಗೂ ಸರ್ಕಾರಿ ನೌಕರರಿಗೆ ಕೆಲ ಹೆಲ್ತ್‌ ಟಿಪ್ಸ್‌ ನೀಡಿ ಹೋಗಿದ್ದಾರೆ.ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಿಸಿಲು ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ ವಿಚಾರ ಬಗ್ಗೆ ಸರ್ಕಾರ ಮಟ್ಟದಲ್ಲಿ ತೀರ್ಮಾನ ಮಾಡಿಕೊಳ್ಳಲಿ. ಮಧ್ಯಾಹ್ನ ಹೊತ್ತು ಫೀಲ್ಡ್ ವಿಜಿಟ್ ಮಾಡುವುದನ್ನು ಅಧಿಕಾರಿಗಳು ಬಿಡಬೇಕು. ಸರ್ಕಾರಿ ನೌಕರರು ಹೊರಗಡೆ ವೀಕ್ಷಣೆಯನ್ನ ಮಧ್ಯಾಹ್ನ 12 ರಿಂದ 3ರ ವರೆಗೆ ಮಾಡಬಾರದು. ಬೆಳಗಿನ ಜಾವ ಅಥವಾ ಸಾಯಂಕಾಲ ಮಾಡಬೇಕು. ಸರ್ಕಾರ ರಜೆ ಕೊಡಬೇಕು ಅಂತ ಹೇಳುವುದಿಲ್ಲ, ಸಮಯ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು ಎಂದು ಸಚಿವರು ಸಲಹೆಯಿತ್ತಿದ್ದಾರೆ.ಇನ್ನು, ಶಾಲೆಗಳು, ಎಲ್ಲಾ ಸಂಸ್ಥೆಗಳು ಆ ಬಗ್ಗೆ ಗಮನ ಕೊಡಬೇಕು. ಆಹಾರದ ಬಗ್ಗೆಯೂ ಗಮನ ಕೊಡಬೇಕು. ಆಗಾಗ ನೀರು ಕುಡಿದರೆ ನಿರ್ಜಲೀಕರಣದಿಂದ ದೂರ ಇರಬಹುದು. ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಪೆಷಲ್ ವಾರ್ಡ್ ಅಗತ್ಯ ಇಲ್ಲಾ ನಮ್ಮಲ್ಲಿ ಎಲ್ಲಾ ಸೌಲಭ್ಯಗಳಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.----ಕೋಟ್:

ಕಲ್ಯಾಣ ಕರ್ನಾಟಕ ಏಳು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಅವಧಿ ಬದಲಾವಣೆ ಸಂಬಂಧ ಈಗಾಗಲೇ ಸಂಘದಿಂದ ಸಿಎಂಗೆ ಮನವಿ ಸಲ್ಲಿಸಿದ್ದು, ಅದಕ್ಕೆ ಸೂಕ್ತ ಸ್ಪಂದನೆಯೂ ಲಭಿಸಿದೆ. ಶೀಘ್ರದಲ್ಲಿಯೇ ಸಮಯ ಬದಲಾವಣೆ ಆದೇಶ ಜಾರಿಗೊಳ್ಳುವ ಭರವಸೆಯಿದೆ.

- ಕೃಷ್ಣಾ ಶಾವಂತಿಗೇರಾ, ಜಿಲ್ಲಾಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ