ವನ್ಯಜೀವಿ-ಮಾನವ ಸಂಘರ್ಷಕ್ಕೆ ಕೊನೆ ಎಂದು?

| Published : Nov 19 2023, 01:30 AM IST

ಸಾರಾಂಶ

ಬೆಳೆಗಾರರು, ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ವನ್ಯಜೀವಿಗಳ ದಾಳಿಯಿಂದ ಸಾವನ್ನಪ್ಪಿದ್ದು, ಕಾಡಾನೆ, ಹುಲಿ ಸೇರಿದಂತೆ ಇತರೆ ವನ್ಯಜೀವಿಗಳ ಹಾವಳಿ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.

ಆರ್‌. ಸುಬ್ರಮಣಿ

ಕನ್ನಡಪ್ರಭ ವಾರ್ತೆ ಸಿದ್ದಾಪುರಜಿಲ್ಲೆಯಲ್ಲಿ ಮಾನವ- ವನ್ಯಜೀವಿ ಸಂಘರ್ಷ ಮಿತಿ ಮೀರಿದ್ದು, ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಾರರು, ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ವನ್ಯಜೀವಿಗಳ ದಾಳಿಯಿಂದ ಸಾವನ್ನಪ್ಪಿದ್ದು, ಕಾಡಾನೆ, ಹುಲಿ ಸೇರಿದಂತೆ ಇತರೆ ವನ್ಯಜೀವಿಗಳ ಹಾವಳಿ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.

ಹುಲಿ ಉಪಟಳಕ್ಕೆ ಮಾನವ ಜಾನುವಾರುಗಳು ಬಲಿ.

ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ಬಾಲಕ ಸೇರಿದಂತೆ ಅನೇಕ ಕಾರ್ಮಿಕರು ಬಲಿಯಾಗಿದ್ದು, ರೈತರು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಜಾನಾವಾರುಗಳ ಜೊತೆಗೆ ತೋಟಗಳಲ್ಲಿ ಮೇಯುತ್ತಿದ್ದ ಜಾನುವಾರುಗಳನ್ನು ಹುಲಿ ದಾಳಿ ನಡೆಸಿ ಕೊಂದು ತಿನ್ನುತ್ತಿದೆ.

* ಕಾಡಾನೆ ದಾಳಿಯಿಂದ ಪ್ರಾಣ ಹಾನಿ ಬೆಳೆ ನಾಶ

ಕೊಡಗು ಜಿಲ್ಲೆಯ ಕಾಫಿ ತೋಟಗಳು ಕಾಡಾನೆಗಳ ಆವಾಸಸ್ಥಾನವಾಗಿ ಮಾರ್ಪಾಡುಗೊಂಡಿದೆ. ಜಿಲ್ಲೆಯ ಕಾಫಿ ತೋಟಗಳು ಕಾಡಾನೆಗಳ ಬೀಡಾಗಿದೆ. ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುತ್ತಿರುವ ಕಾಡಾನೆಗಳು, ತೋಟದಲ್ಲೇ ಬೀಡುಬಿಟ್ಟಿದೆ. ತೋಟದಲ್ಲಿ ಆನೆಗಳಿಗೆ ಬೇಕಾದ ಆಹಾರ ಸಿಗುತ್ತಿರುವುದರಿಂದ, ಕಾಡಾನೆಗಳು ತೋಟವನ್ನೇ ತಮ್ಮ ವಾಸಸ್ಥಳವಾಗಿ ಮಾಡಿಕೊಂಡು ತೋಟದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು, ಬೆಳೆಗಾರರ ಮೇಲೆ ದಾಳಿ ನಡೆಸುತಿದೆ. ಕಾಡಾನೆ ದಾಳಿಯಿಂದ ಬೆಳೆಗಾರರು ಕಾರ್ಮಿಕರು ಸಾವನ್ನಪ್ಪಿದ್ದು ಅದೆಷ್ಟೊ ಮಂದಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿ ಇಂದಿಗೂ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ತೋಟದಲ್ಲಿ ಆಹಾರ ಅರಸಿ ಬರುವ ಕಾಡಾನೆಗಳು ಬೆಳೆಗಳನ್ನು ನಾಶ ಪಡಿಸುವುದು ಒಂದೆಡೆಯಾದರೆ, ಕಾರ್ಮಿಕರು ತೋಟಗಳಲ್ಲಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುತಿರುವುದರಿಂದ ಬೆಳೆಗಾರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

* ಪರಿಹಾರಕ್ಕಿಂತ ವೆಚ್ಚವೇ ಅಧಿಕ

ಅರಣ್ಯ ಇಲಾಖೆ ವನ್ಯಜೀವಿಗಳ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ, ನಷ್ಟ ಅನುಭವಿಸಿದವರಿಗೆ ನೀಡುವ ಪರಿಹಾರ ಸಾಲದು ಎಂಬ ಮಾತುಗಳು ಕೇಳಿ ಬರುತ್ತಿವೆ. ವಿರಾಜಪೇಟೆ ಅರಣ್ಯ ವಿಭಾಗದಲ್ಲಿ ಕಳೆದ 2019ರಿಂದ 2023ರ ವರೆಗಿನ 5 ವರ್ಷಗಳಲ್ಲಿ ವನ್ಯಜೀವಿಗಳಿಂದಾದ ಹಾನಿಗಳಿಗೆ ನೀಡಿದ ದಯಾತ್ಮಕ ಧನ ಸಹಾಯ ಸುಮಾರು 6 ಕೋಟಿ ರು.ನಷ್ಟಿದೆ. 83 ಕ್ಕೂ ಅಧಿಕ ಪ್ರಾಣಹಾನಿ ಮತ್ತು ಮಾನವ ಗಾಯ ಪ್ರಕರಣಗಳು ದಾಖಲಾಗಿದ್ದು, 1.5 ಕೋಟಿಗೂ ಅಧಿಕ ಮೊತ್ತ ಪರಿಹಾರ ನೀಡಲಾಗಿದೆ.

ಸರ್ಕಾರ ಮತ್ತು ಅರಣ್ಯ ಇಲಾಖೆ ವನ್ಯಜೀವಿ-ಮಾನವ ಸಂಘರ್ಷ ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡರು ಸಂಘರ್ಷ ಮಾತ್ರ ಮುಂದುವರಿಯುತ್ತಲೇ ಇದೆ. ಅನೇಕ ಜೀವಗಳು ಬಲಿಯಾಗುತ್ತಲಿದೆ. ಇವುಗಳನ್ನು ತಡೆಯಲು ಮತ್ತಷ್ಟು ಕಠಿಣ ಕ್ರಮಗಳ ಅಗತ್ಯತೆ ಇದೆ.ಜಿಲ್ಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ ನಿರಂತರವಾಗಿದೆ. ಅರಣ್ಯ ಇಲಾಖೆ ವಿಫಲವಾಗಿದ್ದು ಜಿಲ್ಲೆಯಲ್ಲಿ ಸಾವುಗಳು ಸಂಭವಿಸಿದಾಗ ಇಲಾಖೆಯವರು ಕಾಟಚಾರಕ್ಕೆ ಅಲ್ಲಿ ನಿಲ್ಲುತಾರೆ. ನಂತರ ಈ ವಿಚಾರಗಳನ್ನೇ ಮರೆತು ಬಿಡುತ್ತಾರೆ. ಆನೆ ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ಜನಸಾಮಾನ್ಯರು, ಕಾರ್ಮಿಕರು, ವಿದ್ಯಾರ್ಥಿಗಳು ದಿನನಿತ್ಯ ಸಂಕಷ್ಟವನ್ನು ಎದುರಿಸಬೇಕಾಗಿದೆ. ಕಾರ್ಮಿಕರು ಪ್ರಾಣವನ್ನು ಒತ್ತೆ ಇಟ್ಟು ಕೆಲಸಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರದಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲತೆಯನ್ನು ಹೊಂದಿದ್ದು, ಜಿಲ್ಲೆಯಲ್ಲಿ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರವನ್ನು ಸರ್ಕಾರ ತಕ್ಷಣವೇ ರೂಪಿಸಿ ಜಾರಿಗೊಳಿಸಬೇಕಿದೆ.

। ಎಚ್.ಬಿ. ರಮೇಶ್. ಜಿಲ್ಲಾ ಕಾರ್ಯದರ್ಶಿ ಸಿಪಿಐಎಂ ಹಾಗೂ ಕಾರ್ಮಿಕ ಮುಖಂಡ ಕೊಡಗು

ವನ್ಯಜೀವಿ ದಾಳಿಗಳನ್ನು ತಡೆಯಲು ಇಲಾಖೆ ವತಿಯಿಂದ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ರೈಲ್ವೇ ಹಳಿಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಾಣ ಮಾಡುತ್ತಿದ್ದು, ಅದಕ್ಕೆ ಹೆಚ್ಚಿನ ಮೊತ್ತದ ಹಣದ ಅವಶ್ಯಕತೆ ಇದೆ. ಹಣ ಬಿಡುಗಡೆಗೆ ಅನುಗುಣವಾಗಿ ಹಂತಹಂತವಾಗಿ ಅಳವಡಿಸಲಾಗುತ್ತಿದೆ. ಪ್ರಸ್ತುತ ತೋಟಗಳಲ್ಲಿ ಕಾಡನೆಗಳ ಸಂಖ್ಯೆ ಕಡಿಮೆಯಾಗಿದ್ದು, ನಾವುಗಳು ಅವುಗಳನ್ನು ಕಾಡಿಗಟ್ಟುತ್ತಿದ್ದೇವೆ. ಅರಣ್ಯ ಇಲಾಖೆ ವನ್ಯಜೀವಿ ಹಾವಳಿ ತಡೆಯಲು ಶಕ್ತಮೀರಿ ಶ್ರಮಿಸುತಿದೆ.। ಗೋಪಾಲ್ ಎ.ಸಿ.ಎಫ್ . ವಿರಾಜಪೇಟೆ

-----ಕಾಡಾನೆ ಸೇರಿದಂತೆ ಹುಲಿ, ಮಂಗಗಳಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಅವುಗಳು ಬೆಳೆ ನಾಶ ಮಾಡಿದರೆ ಪರಿಹಾರದ ನೆಪದಲ್ಲಿ ಕೊಂಚ ಹಣ ನೀಡಿ ಸರ್ಕಾರ ಕೈ ತೊಳೆದುಕೊಳ್ಳುತಿದೆ. ಈಗಾಗಲೇ ಮಂಗಗಳ ಸೈನ್ಯ ಕಾಫಿ ಬೀಜಗಳನ್ನು ತಿಂದು ವಿಪರೀತ ನಷ್ಟ ಉಂಟುಮಾಡುತ್ತಿದೆ. ಇಲಾಖೆ ವನ್ಯಜೀವಿಗಳನ್ನು ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು. ಟಾಸ್ಕ್ ಪೋರ್ಸ್‌ ನಿರಂತರವಾಗಿ ಕಾರ್ಯನಿರ್ವಹಿಸಬೇಕಿದೆ.

। ಹೊಸಮನೆ ವಸಂತಕುಮಾರ್, ಬೆಳೆಗಾರರು. ನೆಲ್ಯಹುದಿಕೇರಿ.