ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಗೆಲ್ಲುವೆವು: ಎಂ.ಪಿ.ರೇಣುಕಾಚಾರ್ಯ

| Published : Mar 17 2024, 01:49 AM IST

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಗೆಲ್ಲುವೆವು: ಎಂ.ಪಿ.ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳ ಗೆಲ್ಲಲಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹೊಂದಾಣಿಕೆಯಿಂದ 28 ಲೋಕಸಭಾ ಸ್ಥಾನಗಳನ್ನೂ ಗೆಲ್ಲುವುದು ಗ್ಯಾರಂಟಿ. ಇದರ ಪರಿಣಾಮದಿಂದ ಕಾಂಗ್ರೆಸ್ ನವರು ಇಲ್ಲಸಲ್ಲದ ಆರೋಪಗಳನ್ನು ಬಿಜೆಪಿ ಮೇಲೆ ಮಾಡುತ್ತಿರುವುದು ಖಂಡನೀಯ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಲೋಕಸಭಾ ಚುನಾವಣೆಯ ಪ್ರಚಾರ ಸಮಾವೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾ.18ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಈ ಸಮಾವೇಶದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಮಂಡಲ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳ ಗೆಲ್ಲಲಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹೊಂದಾಣಿಕೆಯಿಂದ 28 ಲೋಕಸಭಾ ಸ್ಥಾನಗಳನ್ನೂ ಗೆಲ್ಲುವುದು ಗ್ಯಾರಂಟಿ. ಇದರ ಪರಿಣಾಮದಿಂದ ಕಾಂಗ್ರೆಸ್ ನವರು ಇಲ್ಲಸಲ್ಲದ ಆರೋಪಗಳನ್ನು ಬಿಜೆಪಿ ಮೇಲೆ ಮಾಡುತ್ತಿರುವುದು ಖಂಡನೀಯ ಎಂದರು.

ಮೋದಿ 3ನೇ ಬಾರಿ ಪ್ರಧಾನಿ ನಿಶ್ಚಿತ:

ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಬಳಿಕ ದೇಶದ ಹಿತ ಕಾಯುವ ಅನೇಕ ಕಾಯ್ದೆಗಳ ಹಾಗೂ ಯೋಜನೆಗಳ ರೂಪಿಸಿ ನುಡಿದಂತೆ ನಡೆದಿದ್ದಾರೆ. ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದನ್ನು ದೇಶದ ಜನರಷ್ಟೇ ಅಲ್ಲದೆ ವಿಶ್ವವೇ ಎದುರು ನೋಡುತ್ತಿದೆ. ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಿಯಾಗುವುದು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜನರು ಈಗಾಗಲೇ ತಾತ್ಸಾರ ಮನೋಭಾವನೆಯಿಂದ ನೋಡುತ್ತಿದ್ದು, ಸಿಎಂ ಮತ್ತು ಡಿಸಿಎಂ ಗ್ಯಾರಂಟಿಗಳ ಬಗ್ಗೆ ಜನರು ನಂಬಿಕೆಯ ಕಳೆದುಕೊಂಡಿದ್ದಾರೆ ಎಂದರು.

ಹೊನ್ನಾಳಿ ಮತ್ತು ನ್ಯಾಮತಿ ಮಂಡಲ ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿ, ಶಿವಮೊಗ್ಗದಲ್ಲಿ ನಡೆಯುವ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಅವಳಿ ತಾಲೂಕುಗಳಿಂದ 10 ರಿಂದ15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಕೆ.ಪಿ.ಕುಬೇಂದ್ರಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ ತಾಪಂ ಮಾಜಿ ಅಧ್ಯಕ್ಷ ರಂಗಪ್ಪ, ಪರಸಭೆ ಸದಸ್ಯರಾದ ಧರ್ಮಪ್ಪ, ಕೆ.ವಿ.ಶ್ರೀಧರ್, ಮುಖಂಡರಾದ ಅರಕೆರೆ ನಾಗರಾಜ್, ಎಂ.ಎಸ್.ಪಾಲಾಕ್ಷಪ್ಪ, ಎಸ್.ಎಸ್.ಬೀರಪ್ಪ, ದಿಡಗೂರು ಪಾಲಾಕ್ಷಪ್ಪ ಹಾಗೂ ಇತರರಿದ್ದರು.

ಇಂದು ರವೀಂದ್ರನಾಥ ನೇತೃತ್ವದಲ್ಲಿ ಮತ್ತೆ ಸಭೆ

ದಾವಣಗೆರೆಯಲ್ಲಿ ಶುಕ್ರವಾರ ನಡೆದ ಲೋಕಸಭೆ ಚುನಾವಣೆ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿಲ್ಲ. ದಾವಣಗೆರೆ ಲೋಕಸಭಾ ಟಿಕೆಟ್‌ನ್ನೂ ಈಗಾಗಲೇ ಘೋಷಣೆ ಮಾಡಿದ್ದು, ಇದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಮಾ.17ರಂದು ದಾವಣಗೆರೆಯಲ್ಲಿ ಮಾಜಿ ಸಚಿವ ರವೀಂದ್ರನಾಥ ನೇತೃತ್ವದಲ್ಲಿ ಸಭೆ ಕರೆದಿದ್ದು, ಆ ಸಭೆಯಲ್ಲಿ ಎಲ್ಲವನ್ನೂ ತೀರ್ಮಾನಿಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

-----

ಮೋದಿ ಮತ್ತೆ ಪ್ರಧಾನಿಯಾಗಿಸಲು ಒಗ್ಗಟ್ಟಾಗಿ ಶ್ರಮ: ಮಲ್ಲಿಕಾರ್ಜುನ್‌ಕನ್ನಡಪ್ರಭ ವಾರ್ತೆ ಚನ್ನಗಿರಿ ಶಿವಮೊಗ್ಗ ನಗರದಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶಕ್ಕೆ ತಾಲೂಕಿನಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ ಭಾರತವು ಕಳೆದ 10 ವರ್ಷದಲ್ಲಿ ಪ್ರಗತಿಯ ಪಥದಲ್ಲಿ ಮುನ್ನಡೆದಿದ್ದು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ತರಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ. ದೇಶವು ಆರ್ಥಿಕವಾಗಿ ಮತ್ತು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರಬೇಕಾದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ ಎಂದರು.ಚನ್ನಗಿರಿಯಿಂದ ಹೆಚ್ಚಿನ ಮತ: ಭಾರತ ಬಲಿಷ್ಠ ರಾಷ್ಟ್ರವಾಗಲು ನರೇಂದ್ರ ಮೋದಿಯಂತಹ ಮಹಾನ್ ನಾಯಕರ ನಾಯಕತ್ವ ಅವಶ್ಯಕವಾಗಿದ್ದು ಇಂತಹ ಸಮರ್ಥ ವ್ಯಕ್ತಿಯ ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವುದೇ ನಮ್ಮ ಗುರಿ. ನರೇಂದ್ರ ಮೋದಿಯವರ ಕಳೆದ 10 ವರ್ಷಗಳ ಜನಪರ ಯೋಜನೆಗಳ ಮತದಾರರಿಗೆ ತಿಳಿಸಿ ಚನ್ನಗಿರಿ ಕ್ಷೇತ್ರದಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳ ಹಾಕಿಸಲು ಪಕ್ಷದ ಕಾರ್ಯಕರ್ತರು ಸಿದ್ಧರಾಗಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಪಟ್ಲಿ ನಾಗರಾಜ್, ಪಾರಿ ಪರಮೇಶ್, ಕಮಲಾ ಹರೀಶ್, ಸವಿತಾ ರಾಘವೇಂದ್ರ, ಕೆ.ಪಿ.ಎಂ.ಲತಾ, ಮುಖಂಡರಾದ ದಿಗ್ಗೇನಹಳ್ಳಿ ನಾಗರಾಜ್, ಚಿಕ್ಕೂಲಿಕೆರೆ ಸಂಗಮೇಶ್, ಮಾಚನಾಯ್ಕನಹಳ್ಳಿ ಜಯಣ್ಣ, ಬಿ.ಎಂ.ಕುಬೇಂದ್ರೋಜಿರಾವ್ ಹಾಜರಿದ್ದರು.ಗೊಂದಲ ಶೀಘ್ರ ಇತ್ಯರ್ಥ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಈಗಾಗಲೇ ಘೋಷಿಸಿದ್ದು ಜಿಲ್ಲೆ ಮತ್ತು ಚನ್ನಗಿರಿ ತಾಲೂಕಿನಲ್ಲಿರುವ ಕೆಲ ಗೊಂದಲಗಳ ಪಕ್ಷದ ಮುಖಂಡರು ಆದಷ್ಟು ಶೀಘ್ರದಲ್ಲಿಯೇ ಇತ್ಯರ್ಥಪಡಿಸಿಕೊಂಡು, ಎಲ್ಲರೂ ಒಗ್ಗಟ್ಟಿನಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ.ಮಾಡಾಳು ಮಲ್ಲಿಕಾರ್ಜುನ್, ಬಿಜೆಪಿ ಮುಖಂಡ