ವೀರಶೈವ ಲಿಂಗಾಯತ ಸಮಾಜದ ಹಿರಿಯರಾಗಿದ್ದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯ ಪೈಪೋಟಿ ನಡೆದಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಸರು ಮುನ್ನೆಲೆಗೆ ಬರುತ್ತಿದೆ.

- ಶಾಮನೂರು ಶಿವಶಂಕರಪ್ಪರಂತೆ ಖಡಕ್‌, ಗಟ್ಟಿಧ್ವನಿಯ ಧಣಿ ಹುಡುಕಾಟದಲ್ಲಿ ವೀರಶೈವ ಲಿಂಗಾಯತ ಸಮಾಜ!

- - -

- ಮಾಜಿ ಸಿಎಂ ಯಡಿಯೂರಪ್ಪ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಲಿ: ರೇಣುಕಾಚಾರ್ಯ - ನಾನೂ ಬಿಎಸ್‌ವೈ ಅಭಿಮಾನಿ, ಆದರೆ ಅವರಿಗೆ ವಯಸ್ಸಾಗಿದೆ: ಬಸವರಾಜ್ ಶಿವಗಂಗಾ

- ರಾಷ್ಟ್ರೀಯ ಅಧ್ಯಕ್ಷರನ್ನ ಸಮಾಜದ ಗುರು-ಹಿರಿಯರು ಚರ್ಚಿಸಿ, ನೇಮಿಸಲಿ: ಹರಿಹರ ಶಾಸಕ ಹರೀಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವೀರಶೈವ ಲಿಂಗಾಯತ ಸಮಾಜದ ಹಿರಿಯರಾಗಿದ್ದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯ ಪೈಪೋಟಿ ನಡೆದಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಸರು ಮುನ್ನೆಲೆಗೆ ಬರುತ್ತಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜದ ಹಿರಿಯ ಮುಖಂಡ, ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಕ್ತರಾಗಿದ್ದಾರೆ. ಆದ್ದರಿಂದ ಬಿಎಸ್‌ವೈ ಅವರನ್ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ 2 ಅವಧಿಗೆ ಅಧಿಕಾರ ನಡೆಸಿದ ಶಾಮನೂರು ಶಿವಶಂಕರಪ್ಪ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ವೀರಶೈವ ಲಿಂಗಾಯತ ಒಂದೇ ಎಂಬ ನಿಲುವಿಗೆ ಬಲವಾಗಿ ನಿಲ್ಲುವ ಮೂಲಕ ಸಮಾಜಕ್ಕೆ ಶಕ್ತಿ ತುಂಬಿದ್ದರು. ಅಂತಹ ಹಿರಿಯರ ಅಗಲಿಕೆಯಿಂದ ತೆರವಾದ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪನವರೇ ಸೂಕ್ತ. ಎಲ್ಲರೂ ಒಗ್ಗಟ್ಟಿನಿಂದ, ಒಮ್ಮತದಿಂದ ನೇಮಕ ಮಾಡಬೇಕು ಎಂದರು.

ಬಿಎಸ್‌ವೈ ಆಗಲಿ, ಆದರೆ...:

ಅತ್ತ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ, ಸಮಾಜದ ಯುವ ಮುಖಂಡ ಬಸವರಾಜ ವಿ. ಶಿವಗಂಗಾ ಮಾತನಾಡಿ, ನಾನೂ ಯಡಿಯೂರಪ್ಪನವರ ಅಭಿಮಾನಿ. ಆದರೆ, ಯಡಿಯೂರಪ್ಪನವರಿಗೆ ಈಗ ವಯಸ್ಸಾಗಿದೆ. ಒಂದುವೇಳೆ ಯಡಿಯೂರಪ್ಪ ಅವರಿಗೆ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಕೊಟ್ಟರೆ ನಾವು ಗೌರವಿಸುತ್ತೇವೆ. ಆದರೆ, ಇಡೀ ರಾಜ್ಯವ್ಯಾಪಿ ಸುತ್ತಾಡಿ, ಸಮಾಜವನ್ನು ಕಟ್ಟುವ, ಸಂಘಟನೆ ಮಾಡುವವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮಾಡಿದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುರು-ಹಿರಿಯರು ನಿರ್ಣಯ ಮಾಡಲಿ:

ಮತ್ತೊಂದು ಕಡೆ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ, ಸಮಾಜದ ಹಿರಿಯ ಮುಖಂಡ ಬಿ.ಪಿ.ಹರೀಶ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ, ಸಂಘಟನೆಗಾಗಿ ಹೋರಾಟ ಮಾಡಿದ ಬಹಳಷ್ಟು ಮಠಾಧೀಶರು, ಗುರು-ಹಿರಿಯರಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಅಧ್ಯಯನ ಮಾಡಿದವರೂ ಇದ್ದಾರೆ. ಅಭಾವೀಮ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರವು ನಮ್ಮ ಹಂತದ್ದಾಗಲೀ, ನಮ್ಮ ಮಟ್ಟದ್ದಾಗಲೀ ಆಗಲಿ ಅಲ್ಲ. ಅದನ್ನು ಸಮಾಜದ ಗುರು-ಹಿರಿಯರು ಸೇರಿ, ನಿರ್ಣಯ ಮಾಡಬೇಕು ಎಂದು ಪ್ರತಿಕ್ರಿಯಿಸಿದರು.

ಶಾಮನೂರು ಶಿವಶಂಕರಪ್ಪ ಇಡೀ ವೀರಶೈವ ಲಿಂಗಾಯತ ಸಮಾಜ ಒಂದೇ ಎಂಬುದಾಗಿ ಸಾರಿದ್ದರು. ಸಮಾಜವನ್ನು ಒಳಜಾತಿ ಹೆಸರಿನಲ್ಲಿ ಛಿದ್ರ ಮಾಡಲು ಹೊರಟಿದ್ದ ವೇಳೆ ಇಡೀ ಸಮಾಜದ ಧ್ವನಿಯಾಗಿ ಗುಡುಗಿದ್ದರು. ವೀರಶೈವ ಬೇರೆಯಲ್ಲ, ಲಿಂಗಾಯತವಾಗಲೀ ಬೇರೆಯಲ್ಲ. ಎರಡೂ ಒಂದೇ ಎಂಬ ತಮ್ಮ ಸ್ಪಷ್ಟವಾದ, ಎರಡು ಸಾಲಿನ ಮಾತಿನಲ್ಲೇ ಹೇಳಿ ಮುಗಿಸಿದ್ದರು.

ಸಮಾಜದ ಹಿತಕ್ಕೆ ಧಕ್ಕೆಯಾದಾಗ, ಸಮಾಜವನ್ನು ಛಿದ್ರಗೊಳಿಸಲು ಕೆಲವರು ಮುಂದಾದಾಗ ಸ್ವತಃ ಆಡಳಿತ ಪಕ್ಷದಲ್ಲಿರುವುದನ್ನೂ ಲೆಕ್ಕಕ್ಕಿಟ್ಟುಕೊಳ್ಳದೇ, ಸಮಾಜದ ಸ್ಪಷ್ಟ ನಿರ್ಧಾರವನ್ನು ಅವರು ಪ್ರಕಟಿಸಿದ್ದರು. ಗುರು-ವಿರಕ್ತರೂ ಆ ಧ್ವನಿಗೆ ತಲೆದೂಗುವಂತೆ ಮಾಡಿದ್ದರು. ತಮ್ಮ ಇಡೀ ಜೀವನದುದ್ದಕ್ಕೂ ಗುರು-ವಿರಕ್ತರನ್ನು ಒಂದಾಗಿಸಬೇಕು, ಅಖಂಡ ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ಇರಬೇಕೆಂಬ ಕನಸನ್ನು ಇಟ್ಟುಕೊಂಡು, ತಮ್ಮ ಕೊನೆಯ ಉಸಿರಿರುವವರೆಗೂ ಶಾಮನೂರು ಶಿವಶಂಕರಪ್ಪ ಮಹಾಸಭಾಗೆ ದೊಡ್ಡ ಶಕ್ತಿಯಾಗಿ ಬೆನ್ನಿಗೆ ನಿಂತಿದ್ದರು. ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅಂತಹದ್ದೇ ಗಟ್ಟಿ ನಿಲುವು, ನಿರ್ಧಾರದ ವ್ಯಕ್ತಿಗಾಗಿ ಇಡೀ ಸಮಾಜ ಈಗ ಎದುರು ನೋಡುತ್ತಿದೆ. ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮುಂದೆ ಯಾರು ಎಂಬ ಕುತೂಹಲವೂ ಸಮಾಜವನ್ನು ಕಾಡುತ್ತಿದೆ.

ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯೆಂಬ ಚೆಂಡು ನಾಡಿನ ಗುರು-ವಿರಕ್ತರು, ಮಠಾಧೀಶರು, ಪೀಠಾಧೀಶರು, ಸಮಾಜದ ಹಿರಿಯರು, ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ವೀರಶೈವ ಲಿಂಗಾಯತ ಸಮಾಜದ ನಾಯಕರ ಮುಂದಿದೆ. ಅಳೆದು, ತೂಗಿ ನೋಡಿ ಮಹಾಸಭಾಯ ಸಾರಥಿಯನ್ನು ಸಮಾಜ ಆಯ್ಕೆ ಮಾಡಬೇಕಾದ ಅನಿವಾರ್ಯತೆಯಲ್ಲಿದೆ.

- - -

(ಫೋಟೋಗಳ ಬಳಸಿ)

-ಬಿ.ಎಸ್‌.ಯಡಿಯೂರಪ್ಪ:

-ಶಾಮನೂರು ಶಿವಶಂಕರಪ್ಪ:

-