ಹಾದಿಯಲ್ಲಿ ಹೋಗೋರಿಗೆ ಟಿಕೆಟ್ ನೀಡೋಕ್ಕಾಗುತ್ತಾ ?

| Published : Apr 18 2024, 02:19 AM IST

ಸಾರಾಂಶ

ಹಾದಿಯಲ್ಲಿ ಹೋಗುವವರಿಗೆ ಟಿಕೆಟ್ ನೀಡುವುದಕ್ಕೆ ಆಗುತ್ತಾ? ಚುನಾವಣೆಗೆ ಸ್ಪರ್ಧಿಸಲು ಯಾರೂ ಆಸಕ್ತಿ ತೋರಲಿಲ್ಲ. ಈ ಕಾರಣಕ್ಕಾಗಿ ಹೈಕಮಾಂಡ್‌ ಹಾಗೂ ಸ್ಥಳೀಯ ಶಾಸಕರ ಜೊತೆಗೆ ಚರ್ಚಿಸಿ ಪ್ರಿಯಾಂಕಾ ಜಾರಕಿಹೊಳಿಗೆ ಟಿಕೆಟ್ ನೀಡಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಹಾದಿಯಲ್ಲಿ ಹೋಗುವವರಿಗೆ ಟಿಕೆಟ್ ನೀಡುವುದಕ್ಕೆ ಆಗುತ್ತಾ? ಚುನಾವಣೆಗೆ ಸ್ಪರ್ಧಿಸಲು ಯಾರೂ ಆಸಕ್ತಿ ತೋರಲಿಲ್ಲ. ಈ ಕಾರಣಕ್ಕಾಗಿ ಹೈಕಮಾಂಡ್‌ ಹಾಗೂ ಸ್ಥಳೀಯ ಶಾಸಕರ ಜೊತೆಗೆ ಚರ್ಚಿಸಿ ಪ್ರಿಯಾಂಕಾ ಜಾರಕಿಹೊಳಿಗೆ ಟಿಕೆಟ್ ನೀಡಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನಲ್ಲಿ ಕುಟುಂಬಸ್ಥರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಸಚಿವ ಸತೀಶ ಜಾರಕಿಹೊಳಿ ಹೀಗೆ ಪ್ರತಿಕ್ರಿಯಿಸಿದರು. ನನ್ನನ್ನು ಸೋಲಿಸುವುದಕ್ಕೆ ಸತೀಶ ಜಾರಕಿಹೊಳಿ 15 ಜನರನ್ನು ಕಳುಹಿಸಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ಪ್ರೇರಿತ ಆರೋಪ ಅಷ್ಟೆ. ಚುನಾವಣೆ ಎಂದರೆ ಒಬ್ಬರ ಮೇಲೆ ಒಬ್ಬರೂ ಆರೋಪ ಮಾಡುವುದು ಸಹಜ ಎಂದರು.

ಸ್ಮಶಾನದಲ್ಲಿ ಕಾರು ಪೂಜೆ ಮಾಡುತ್ತಿದ್ದ ಸತೀಶ ಈಗ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಒಳ್ಳೆಯ ವಿಚಾರ ಹೇಳಿದ್ದಾರೆ. ಯತ್ನಾಳರೇ ಅದನ್ನು ಮುಂದುವರಿಸಲಿ ಎಂದು ಟಾಂಗ್ ನೀಡಿದರು. ಗುರುವಾರ 12 ಗಂಟೆಗೆ ಸರಳವಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.