ಸಾರಾಂಶ
ಯಲ್ಲಾಪುರ: ಇಡೀ ವಿಶ್ವವೇ ನಮ್ಮ ದೇಶದ ನಾಯಕತ್ವವನ್ನು ಮೆಚ್ಚಿದ್ದು, ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ, ದೇಶವನ್ನು ವಿಶ್ವಗುರುವನ್ನಾಗಿಸಲು ಮತ್ತು ಭವ್ಯ ಬಲಾಢ್ಯ ದೇಶದ ಕನಸು ಸಾಕಾರಗೊಳಿಸಲು ಬಿಜೆಪಿಯ ನೀತಿ ಕಾರ್ಯ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.
ಮೇ ೩ರಂದು ಪಟ್ಟಣದ ಅಡಿಕೆ ಭವನದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಕಾಲದ ಕಾಂಗ್ರೆಸ್ಸಿಗೂ, ಇಂದಿನ ಕಾಂಗ್ರೆಸ್ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಇಂದು ದೇಶದ ಪರ ಘೋಷಣೆ ಕೂಗಲು ಪಕ್ಷದ ಅನುಮತಿ ಪಡೆಯಬೇಕಾದ ದುಃಸ್ಥಿತಿ ಇದೆ. ಮತಾಂಧತೆಯನ್ನು ಅಪ್ಪಿಕೊಂಡಿರುವುದು ಕೇವಲ ಕಾಂಗ್ರೆಸ್ಸಿನ ದುರಂತವಾಗಿರದೇ ಮತದಾರರೆಲ್ಲರ ದುರಂತವಾಗಿದೆ ಎಂದು ವಿಶ್ಲೇಷಿಸಿದರು.ಹಿಂದುತ್ವ ಬಿಟ್ಟು ರಾಜಕಾರಣ ಮಾಡುವ ಪಕ್ಷ ನಮ್ಮದಲ್ಲ. ಈ ಚುನಾವಣೆ ಕೇವಲ ಬಿಜೆಪಿಯನ್ನು ಉಳಿಸುವ ಚುನಾವಣೆಯೂ ಆಗಿರದೇ, ಇಡೀ ದೇಶವನ್ನು ಉಳಿಸುವ ಚುನಾವಣೆಯಾಗಿದ್ದು, ಪ್ರತಿ ಮತದಾರರೂ ಈ ಮಹತ್ವದ ಸಂಗತಿಯನ್ನು ಅರಿತು, ಅತ್ಯಂತ ಜಾಗ್ರತೆಯಿಂದ ಮತ ನೀಡಬೇಕು. ಬಿಜೆಪಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಡವರ ಪರಿಸ್ಥಿತಿ ಜತೆ ಮನಸ್ಥಿತಿಯನ್ನೂ ಬದಲಿಸುವ ಅಮೂಲ್ಯ ಯೋಜನೆಗಳನ್ನು ಜಾರಿಗೊಳಿಸುತ್ತದೆ ಎಂದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಪರಿಶಿಷ್ಟ, ಪಂಗಡ ವರ್ಗಗಳಿಗೆ ಮೀಸಲಾಗಿದ್ದ ಅನುದಾನದ ಹಣವನ್ನು ಬಳಕೆ ಮಾಡಿಕೊಂಡಿದೆ. ಇದು ಅತ್ಯಂತ ಹೇಯ ಕಾರ್ಯವಾಗಿದೆ. ಇಂತಹ ಮೋಸವನ್ನು ಮತದಾರರ ಅರಿವಿಗೆ ತರುವ ಕಾರ್ಯ ಮಾಡಬೇಕಾಗಿದೆ ಎಂದರು.ರಾಜ್ಯ ವಕ್ತಾರ ಹರಿಪ್ರಕಾಶ ಕೋಣೇಮನೆ, ಜಿಲ್ಲಾ ಸಮಿತಿ ಸದಸ್ಯ ಉಮೇಶ ಭಾಗ್ವತ, ಶ್ಯಾಮಿಲಿ ಪಾಟಣಕರ, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್ಟ ಮಾತನಾಡಿದರು. ಪ್ರಚಾರ ಸಮಿತಿಯ ಪ್ರಮುಖ ಜಿ.ಎನ್. ಗಾಂವ್ಕರ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರುತಿ ಹೆಗಡೆ, ಪಪಂ ಸದಸ್ಯರಾದ ಕಲ್ಪನಾ ನಾಯ್ಕ, ಆದಿತ್ಯ ಗುಡಿಗಾರ, ಪ್ರಮುಖರಾದ ಶಿವಲಿಂಗಯ್ಯ ಹಿರೇಮಠ, ಸೋಮೇಶ್ವರ ನಾಯ್ಕ, ರೇಖಾ ಹೆಗಡೆ ಮುಂತಾದವರು ವೇದಿಕೆಯಲ್ಲಿದ್ದರು. ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಸ್ವಾಗತಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ವೆಂಕಟರಮಣ ಮಠದಿಂದ ಎಪಿಎಂಸಿಯವರೆಗೆ ನಡೆದ ಜಾಥಾದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿಠ್ಠಲ ಜಾನು ಶಳಕೆ ನೇತೃತ್ವದಲ್ಲಿ ಮದನೂರು ಪಂಚಾಯಿತಿ ವ್ಯಾಪ್ತಿಯ ಬಾಬು ಎಡಗೆ, ರಾಮು ಕಾಳೆ, ಬಾಬು ಲಕ್ಕು ಪಾಂಡ್ರಾಮೀಶೆ, ಕಾಳು ಜಾನು ತೋರ್ವತ್, ಪುಂಡಲೀಕ ಪಾಂಡ್ರಾಮೀಶೆ ಸೇರಿದಂತೆ ಐವರು ಮರಳಿ ಬಿಜೆಪಿಗೆ ಸೇರ್ಪಡೆಗೊಂಡರು.;Resize=(128,128))
;Resize=(128,128))