ಜಿಲ್ಲೆಯ ಮಗನನ್ನು ಗೆಲ್ಲಿಸಿ ಸ್ವಾಭಿಮಾನ ಉಳಿಸಿ: ಡಿಕೆ ಸುರೇಶ್

| Published : Mar 22 2024, 01:02 AM IST

ಜಿಲ್ಲೆಯ ಮಗನನ್ನು ಗೆಲ್ಲಿಸಿ ಸ್ವಾಭಿಮಾನ ಉಳಿಸಿ: ಡಿಕೆ ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದನಾಗಿ ನಿಮ್ಮ ಕಷ್ಟ-ಸುಖಕ್ಕೆ ಸ್ಪಂದಿಸಿದ್ದೇನೆ. ನೀರಾವರಿ, ವಿದ್ಯಾಕ್ಷೇತ್ರ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೋವಿಡ್ ಸಮಯದಲ್ಲಿ ನಿಮ್ಮ ಜತೆ ನಿಂತಿದ್ದೇನೆ. ಖಾತೆ ಮತ್ತಿತರರ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಿದ್ದೇನೆ. ನರೇಗಾ ಯೋಜನೆ ಸೇರಿ ಸರ್ಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಹಾಸನ ಜಿಲ್ಲೆಯವರು ಪ್ರಧಾನಿ, ಮುಖ್ಯಮಂತ್ರಿಯಾದರು, ಸೊಸೆ ನಂತರ ಮೊಮ್ಮಗನನ್ನೂ ತಂದರು. ಇದೀಗ ಅಳಿಯನನ್ನು ಕರೆತಂದಿದ್ದಾರೆ. ಜಿಲ್ಲೆಯಲ್ಲಿ ಯಾರು ಸಮರ್ಥರು ಇರಲಿಲ್ಲವೇ? ಇದನ್ನು ಮತದಾರರು ಪ್ರಶ್ನಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರೇಳದೇ ಪರೋಕ್ಷ ವಾಗ್ದಾಳಿ ನಡೆಸಿದರು.

ತಾಲೂಕಿನ ಕಾಡಂಕನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೇರೆ ಯಾರನ್ನು ಏಕೆ ಬೆಳೆಸಲಿಲ್ಲ ಎಂಬ ಪ್ರಶ್ನೆಯನ್ನು ಮತದಾರರು ಕೇಳಬೇಕು ಎಂದರು.

ಸ್ವಾಭಿಮಾನ ಉಳಿಸಿ:

ನಾನು ಈ ಜಿಲ್ಲೆಯ ಮನೆಮಗ. ಮೂರು ಬಾರಿ ನನ್ನನ್ನು ಕ್ಷೇತ್ರದಿಂದ ಆಯ್ಕೆ ಮಾಡಿದ್ದೀರಿ. ನೀವು ಕೊಟ್ಟ ಅವಕಾಶವನ್ನು ಬಳಸಿಕೊಂಡು ನಿಮಗೆ ಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಮೂಲಕ ಜಿಲ್ಲೆಯ ಸ್ವಾಭಿಮಾನ ಉಳಿಸುವ ಕೆಲಸ ಮಾಡಿ. ನೀವು ಮಾತ್ರವಲ್ಲ ಇತರರಿಗೆ ಇದನ್ನು ತಿಳಿಸುವ ಕೆಲಸ ಮಾಡಿ ಎಂದು ಮನವಿ ಮಾಡಿದರು.

ಸಂಸದನಾಗಿ ನಿಮ್ಮ ಕಷ್ಟ-ಸುಖಕ್ಕೆ ಸ್ಪಂದಿಸಿದ್ದೇನೆ. ನೀರಾವರಿ, ವಿದ್ಯಾಕ್ಷೇತ್ರ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೋವಿಡ್ ಸಮಯದಲ್ಲಿ ನಿಮ್ಮ ಜತೆ ನಿಂತಿದ್ದೇನೆ. ಖಾತೆ ಮತ್ತಿತರರ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಿದ್ದೇನೆ. ನರೇಗಾ ಯೋಜನೆ ಸೇರಿ ಸರ್ಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಬೇರೆ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆಯಲ್ಲಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇನೆ ಎಂದು ತಿಳಿಸಿದರು.

ನೀರಾವರಿ ಯೋಜನೆಗೆ ಆದ್ಯತೆ: ಜಿಲ್ಲೆಯಾದ್ಯಂತ ಸಾವಿರಾರು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಸತ್ತೆಗಾಲ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದ್ದಾರೆ. ಇದರಿಂದ ಕಣ್ವ ಸೇರಿ ಎಲ್ಲ ಕೆರೆಗಳೂ ತುಂಬಿ ಹರಿಯಲಿವೆ. ಇದಲ್ಲದೇ ಜಿಲ್ಲೆಯಾದ್ಯಂತ ರೈತರ ಜಮೀನಿಗೆ ಟಿ.ಸಿ.ಗಳನ್ನು ಅಳವಡಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.

೫೦೦ ಮನೆ ನೀಡಲಿಲ್ಲ: ಈ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾದವರು ಕ್ಷೇತ್ರದ ಬಡವರಿಗೆ ಸೂರು ಕಲ್ಪಿಸಲು ಕನಿಷ್ಠ ೫೦೦ ಮನೆಗಳನ್ನೂ ನೀಡಲಿಲ್ಲ. ಪೆನ್,ಪೇಪರ್ ಅಧಿಕಾರ ಎಲ್ಲ ಇದ್ದರೂ ಸೂರು ಕಲ್ಪಿಸುವ ಕೆಲಸ ಮಾಡಲಿಲ್ಲ. ಸಿಎಂ ಆಗುತ್ತಾರೆ ಎಂದು ನೀವು ಆಸೆಯಿಂದ ಅವರನ್ನು ಗೆಲ್ಲಿಸಿದಿರಿ, ಆದರೆ ಅವರು ನಿಮ್ಮ ಕಷ್ಟ - ಸುಖ ಕೇಳಿದರೇ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಜನರಿಗೆ ನೆರವಾಗುವ ಕೆಲಸ ಮಾಡಿದೆ. ನಮ್ಮ ಗ್ಯಾರಂಟಿಗಳಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದು, ಅವರಿಗೆ ಆರ್ಥಿಕವಾಗಿ ಅನುಕೂಲವಾಗಿದ್ದು, ಇವುಗಳನ್ನು ಗಮನಿಸಿ ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್, ಮುಖಂಡರಾದ ದಂತೂರು ವಿಶ್ವನಾಥ್, ಮಲವೇಗೌಡ, ಶಿವಮಾದು, ಎ.ಸಿ.ವೀರೇಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ:

ಲೋಕಸಭೆ ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಯ ಉದ್ದೇಶದೊಂದಿಗೆ ಸಂಸದ ಡಿ.ಕೆ.ಸುರೇಶ್ ಗುರುವಾರ ಚನ್ನಪಟ್ಟಣದ ಕ್ಷೇತ್ರದಲ್ಲಿ ಮೆಗಾ ಆಪರೇಷನ್ ನಡೆಸಿ, ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡರು.

ನಗರ ಹಾಗೂ ಗ್ರಾಮಾಂತರ ಭಾಗದ ೨೦ಕ್ಕೂ ಹೆಚ್ಚು ಕಡೆಗಳಲ್ಲಿ ಗುರುವಾರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ನೂರಾರು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕಾಂಗ್ರೆಸ್‌ಗೆ ಸೇರ್ಪಡೆಯಾದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಶಾಲು ಹೊದಿಸಿ ಸುರೇಶ್ ಬರಮಾಡಿಕೊಂಡರು.

ಮಾಜಿ ತಾಪಂ ಅಧ್ಯಕ್ಷ ಹರೂರು ರಾಜಣ್ಣ, ಬಿಜೆಪಿಯ ಒಬಿಸಿ ಘಟಕದ ಮಾಜಿ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಮಂಗಳವಾರಪೇಟೆ ಗಣೇಶ್, ರಮೇಶ್, ಚಕ್ಕೆರೆ ಗ್ರಾಪಂ ಮಾಜಿ ಅಧ್ಯಕ್ಷ ರೂಪೇಶ್, ಕೃಷ್ಣೇಗೌಡ, ಕೊರಣಗೆರೆ ವಿಜಿ, ತೂಬಿನಕೆರೆ ರವಿ ಸೇರಿ ನೂರಾರು ಮಂದಿ ಜೆಡಿಎಸ್ ಹಾಗೂ ಬಿಜೆಪಿ ತೊರೆದ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.