ಸಾರಾಂಶ
ನಾನು ಮದ್ದೂರು ಕ್ಷೇತ್ರದ ಶಾಸಕನಾಗಿ ಕಳೆದ 20 ವರ್ಷಗಳ ಕಾಲ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಸ್ಪರ್ಧಿಸುತ್ತೇನೋ ಇಲ್ಲವೋ ಗೊತ್ತಿಲ್ಲ. ಕ್ಷೇತ್ರಕ್ಕೆ ಹಿಂದೆ ಮಾಡಿದ ಅಭಿವೃದ್ಧಿ ಪ್ರತಿಫಲವಾಗಿ ಜೆಡಿಎಸ್. ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಮತದಾರರು ಗೆಲ್ಲಿಸುವ ಮೂಲಕ ನನ್ನ ಅಭಿವೃದ್ಧಿ ಕಾರ್ಯದ ಬಾಕಿ ಕೂಲಿ ನೀಡಿ ಋಣ ತೀರಿಸಿ.
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಲೋಕಸಭಾ ಚುನಾವಣೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಉಭಯ ಪಕ್ಷಗಳ ನಾಯಕರು ಮದ್ದೂರು ಕ್ಷೇತ್ರದಲ್ಲಿ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು.ಕೆಸ್ತೂರು ಜಿಪಂ ವ್ಯಾಪ್ತಿಯ ಗೊಲ್ಲರದೊಡ್ಡಿ ಗ್ರಾಮದ ಜುಂಜಪ್ಪ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಬಿಜೆಪಿ ಮುಖಂಡ ಎಸ್. ಪಿ. ಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಸ್. ಗುರುಚರಣ್ ಅವರು ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಮಲ್ಲನಕುಪ್ಪೆ, ಹೂತಗೆರೆ, ಕೆಸ್ತೂರು, ಆತಗೂರು, ಕದಲೂರು ಹಾಗೂ ಹೆಮ್ಮೆನಹಳ್ಳಿ ಗ್ರಾಮಗಳಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಪರ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು. ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.ಈ ವೇಳೆ ಮಾತನಾಡಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ನಾನು ಮದ್ದೂರು ಕ್ಷೇತ್ರದ ಶಾಸಕನಾಗಿ ಕಳೆದ 20 ವರ್ಷಗಳ ಕಾಲ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಸ್ಪರ್ಧಿಸುತ್ತೇನೋ ಇಲ್ಲವೋ ಗೊತ್ತಿಲ್ಲ. ಕ್ಷೇತ್ರಕ್ಕೆ ಹಿಂದೆ ಮಾಡಿದ ಅಭಿವೃದ್ಧಿ ಪ್ರತಿಫಲವಾಗಿ ಜೆಡಿಎಸ್. ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಮತದಾರರು ಗೆಲ್ಲಿಸುವ ಮೂಲಕ ನನ್ನ ಅಭಿವೃದ್ಧಿ ಕಾರ್ಯದ ಬಾಕಿ ಕೂಲಿ ನೀಡಿ ಋಣ ತೀರಿಸಿ ಎಂದು ಕಳಕಳಿಯ ಮನವಿ ಮಾಡಿದರು.
ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಗುರುಚರಣ್ , ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ದಿವ್ಯ ರಾಮಚಂದ್ರ ಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಮಾತನಾಡಿದರು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಬಿಜೆಪಿ ಮಂಡಲ ಅಧ್ಯಕ್ಷ ಸಿ.ಕೆ.ಸತೀಶ್, ಮಹಿಳಾ ಘಟಕದ ಅಧ್ಯಕ್ಷ ಶ್ವೇತಾ ಅಶೋಕ್, ಮುಖಂಡರಾದ ಕೆ.ಟಿ.ರಾಜಣ್ಣ, ಮನು ಕುಮಾರ್, ಕೆ.ರವಿ, ಜಗದೀಶ್, ಆನಂದ್, ಕೆ.ಟಿ.ನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ರೂಪ, ಲಲಿತಮ್ಮ ಸಿದ್ದರಾಜು, ಮದ್ದೂರು ಪುರಸಭಾ ಸದಸ್ಯ ಪ್ರಿಯಾಂಕಾ ಅಪ್ಪು ಗೌಡ, ಕೂಳಗೆರೆ ಶೇಖರ ಮತ್ತಿತರರು ಪಾಲ್ಗೊಂಡಿದ್ದರು.