ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ದಲಿತರು, ಹಿಂದುಳಿದವರು ಹಾಗೂ ಶೋಷಿತರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ನಾವು ಆಯ್ಕೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಶ್ರೀನಿವಾಸ ಹೆಣ್ಣೂರ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ನರೇಂದ್ರ ಮೋದಿ ಅವರು ಕಳೆದ ೧೦ ವರ್ಷಗಳಿಂದ ಹಸಿ ಸುಳ್ಳುಗಳನ್ನು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ಜಾತಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿ ಜಾತಿ-ಜಾತಿಗಳ ಮಧ್ಯ ಜಗಳ ತಂದು ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಎಲ್ಲ ಮತದಾರರು ಎಚ್ಚೆತ್ತುಕೊಂಡು ದಲಿತ ವಿರೋಧಿ, ಮನುವಾದಿಯಾಗಿರುವ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟು ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಸಂಸದ ಅನಂತಕುಮಾರ ಹೆಗಡೆ ಅವರು ಸಂವಿಧಾನವನ್ನು ಬದಲಾಯಿಸು ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ಕೆಟ್ಟ ಚುನಾವಣೆಯನ್ನು ನಾವು ಎಂದೂ ನೋಡಿರಲಿಲ್ಲ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿದಾನದಲ್ಲಿರುವ ಮೀಸಲಾತಿಯನ್ನು ತೆಗೆದು ಹಾಕುತ್ತೇವೆ ಎಂದು ಬಹಿರಂಗ ಮಾತನಾಡುತ್ತಿದ್ದಾರೆ. ಸಂವಿಧಾನ ವಿರೋಧಿಗಳನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ವಿಜಯಪುರ ಜಿಲ್ಲೆಯವರಾದ ಗೋವಿಂದ ಕಾರಜೋಳ ಹಾಗೂ ರಮೇಶ ಜಿಗಜಿಣಗಿ ಸುಳ್ಳು ಹೇಳಿ ಸ್ವಹಿತಕ್ಕಾಗಿ ರಾಜಕಾರಣ ಮಾಡಿಕೊಂಡು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ನಾವು ಸಂವಿಧಾನ ವಿರೋಧಿಯಾಗಿರುವ ಬಿಜೆಪಿಗೆ ಮತ ನೀಡಬಾರದು ಎಂದರು.ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣದಲ್ಲಿ ಜಾತಿವಾದ ಲವ್ ಜಿಹಾದ್ ಎನ್ನುವ ವಿಷಯವನ್ನು ಹುಟ್ಟುಹಾಕಿ ಬಿಜೆಪಿ ರಾಜಕಾರಣಕ್ಕೆ ಬಳಸಿಕೊಂಡಿತು. ಜಾತಿವಾದ ಹಾಗೂ ಮನುವಾದವೇ ಬಿಜೆಪಿ ಮೂಲ ಆಶಯವಾಗಿದ್ದು ಜನ ಹಿತವನ್ನು ಕಾಪಾಡಲು ಸಾಧ್ಯವೇ ? ಹಾಗಾಗಿ ಕಾಂಗ್ರೆಸ್‌ಗೆ ಮತ ನೀಡಿ ಸಂವಿಧಾನ ರಕ್ಷಣೆ ಮಾಡಬೇಕು ಎಂದು ದೂರಿದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ರಮೇಶ ಆಸಂಗಿ, ಬೆಳಗಾವಿ ವಿಭಾಗಿಯ ಸಂಚಾಲಕ ವಿನಾಯಕ ಗುಣಸಾಗರ, ಜಿಲ್ಲಾ ಸಂಚಾಲಕ ಅಶೋಕ ಚಲವಾದಿ, ಬಸನವಬಾಗೇವಾಡಿ ತಾಲೂಕು ಸಂಚಾಲಕ ರವಿ ಮ್ಯಾಗೇರಿ, ವಿಜಯಪುರ ತಾ.ಸಂಚಾಲಕ ಬಸವರಾಜ ತಳಕೇರಿ, ವಿನೋದ ರೇವಣ್ಣವರ, ಮಂಜುನಾಥ ಯಂಟಮನ, ಸಿದ್ದು ಬಾರಿಗಿಡದ ಮುಂತಾದವರು ಇದ್ದರು.