ಸಾರಾಂಶ
ಭೀಮಣ್ಣ ಗಜಾಪುರ
ಕೂಡ್ಲಿಗಿ: ತಾಲೂಕಿನ ಮೂಲೆ ಮೂಲೆಯಲ್ಲೂ ಪವನ ಶಕ್ತಿ ಯಂತ್ರಗಳು, ಸೋಲಾರ್ ಪ್ಲಾಂಟ್‌ಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಕಂಪನಿಗಳಿಗೆ ಭೂಮಿಯನ್ನು ಕೊಟ್ಟು ರೈತರು ಯಾತನೆ ಪಡುವಂತಾಗಿದೆ.ತಾಲೂಕಿನ ಯಾವುದೇ ಮೂಲೆಗೆ ಹೋಗಿ ನೋಡಿದರೂ ಜಮೀನುಗಳಲ್ಲಿ ಗಾಳಿಯಂತ್ರ, ಸೋಲಾರ್ ಪ್ಲಾಂಟ್, ಗಾಳಿಯಂತ್ರದಿಂದ ತಯಾರಾದ ವಿದ್ಯುತ್ ಸರಬರಾಜಿಗೆ ಬಳಸುವ ವಿದ್ಯುತ್ ಕಂಬಗಳು, ತಂತಿಗಳು ನಿಮ್ಮನ್ನು ಸ್ವಾಗತಿಸುತ್ತವೆ.
ರೈತರು ಭೂಮಿ ಕಳೆದುಕೊಂಡು ಕೂಲಿ ಕಾರ್ಮಿಕರಾಗುತ್ತಿರುವುದು ಒಂದು ಕಡೆಯಾದರೆ, ಇನ್ನು ಕೆಲವು ರೈತರು ತಮ್ಮ ಅಳಿದುಳಿದ ಜಮೀನಿನಲ್ಲಿ ಬಿತ್ತನೆ, ಇತರೆ ಕೃಷಿ ಕಾರ್ಯ ಮಾಡುವಾಗ ಗಾಳಿ-ಮಳೆಗೆ ವಿದ್ಯುತ್ ತಂತಿಗಳು ತುಂಡಾಗಿ ಬೀಳುತ್ತಿವೆ. ಇದರಿಂದ ರೈತರ ಸಾವು-ನೋವು ಸಂಭವಿಸಿದರೆ ಹೊಣೆ ಯಾರೆಂಬುದೇ ಈಗ ಯಕ್ಷಪ್ರಶ್ನೆಯಾಗಿದೆ.ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಹೋಬಳಿ ಸೇರಿದಂತೆ ಗುಡೇಕೋಟೆ, ಹೊಸಹಳ್ಳಿ ಹೋಬಳಿಗಳಲ್ಲಿ ಅತೀ ಹೆಚ್ಚು ಪವನಯಂತ್ರಗಳು ರೈತರ ಜಮೀನುಗಳಲ್ಲಿ ಸದ್ದು ಮಾಡುತ್ತಿವೆ. ಇದರಿಂದ ತಯಾರಾದ ವಿದ್ಯುತ್ ದೂರದ ಪಟ್ಟಣಗಳಿಗೆ ಕಳುಹಿಸಲು ಬೇಕಾದ ವಿದ್ಯುತ್ ಕಂಬಗಳು, ತಂತಿಗಳು ಸಹ ರೈತರ ಜಮೀನುಗಳನ್ನು ಅಲ್ಲದೇ ಸರ್ಕಾರಿ ಜಮೀನು, ಕೆರೆಗಳನ್ನು ಆಕ್ರಮಿಸಿವೆ.
ಒಂದು ವಿದ್ಯುತ್ ಕಂಬ ರೈತರ ಜಮೀನುಗಳಲ್ಲಿ ಹಾದು ಹೋದರೆ ರೈತರಿಗೆ ಅಂದಾಜು ₹10 ಸಾವಿರ ನೀಡುತ್ತಾರೆ. ಕೆಲವು ಮಧ್ಯವರ್ತಿಗಳು ಹೆಚ್ಚಿನ ಹಣ ವಸೂಲಿ ಮಾಡಿ ರೈತರಿಗೆ ಪುಡಿಗಾಸು ನೀಡುತ್ತಾರೆ. ಇನ್ನು ಸರ್ಕಾರಿ ಜಮೀನು, ಕೆರೆಗಳಲ್ಲಿಯೂ ಕಂಬಗಳನ್ನು ಹಾಕುವ ಮೂಲಕ ಎಲ್ಲೆಡೆ ಖಾಸಗಿ ಕಂಪನಿಗಳು ದರ್ಬಾರ್ ನಡೆಸಿವೆ. ಅಧಿಕಾರಿಗಳು ಮಾತ್ರ ಜಾಣಮೌನಕ್ಕೆ ಶರಣಾಗಿದ್ದಾರೆ.ಫಲವತ್ತಾದ ಭೂಮಿಗಳನ್ನು ವಿಂಡ್ ಫ್ಯಾನ್, ಸೋಲಾರ್ ಕಂಪನಿಗಳಿಗೆ ನೀಡಿ ರೈತರು ಈಗ ಲಕ್ಷಗಟ್ಟಲೇ ಹಣಕ್ಕೆ ಮರುಳಾಗುತ್ತಿದ್ದಾರೆ. 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಳ್ಳಲು ಕೆಲವೇ ತಿಂಗಳು ಬಾಕಿ ಇದೆ. ಆಗ ರೈತರ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ. ಆದರೆ ಈಗ್ಗೆ ಎರಡು ವರ್ಷಗಳಿಂದ ರೈತರು ನಿರಂತರವಾಗಿ ಸಾವಿರಕ್ಕೂ ಹೆಚ್ಚು ಎಕರೆ ಜಮೀನುಗಳನ್ನು ಕಂಪನಿಗಳಿಗೆ ಮಾರಾಟ ಮಾಡಿದ್ದಾರೆ. ರೈತರ ಬಗ್ಗೆ ಭಾಷಣ ಮಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಜಾಣ ಮೌನ ವಹಿಸಿದ್ದಾರೆ.
ನೀವು ದುಡ್ಡು ಕೊಡ್ತೀರಾ?:ರೈತರು ತಮ್ಮ ಜಮೀನುಗಳನ್ನು ಎನ್.ಎ. ಮಾಡಿಸಿ ಕಂಪನಿಗಳಿಗೆ ಮಾರಾಟ ಮಾಡುತ್ತಾರೆ. ನಾವು ತಡೆಯಲು ಹೋದರೆ ಮನೆಯಲ್ಲಿ ಹಲವು ಸಂಕಷ್ಟಗಳಿವೆ. ಇವುಗಳ ಪರಿಹಾರಕ್ಕಾಗಿ ನೀವು ದುಡ್ಡು ಕೊಡುವಿರಾ? ಎಂದು ನಮ್ಮನ್ನೇ ಕೇಳುತ್ತಾರೆ ಎನ್ನುತ್ತಾರೆ ಗುಡೇಕೋಟೆ ಭಾಗದ ರೈತ.
ಸರ್ಕಾರದಿಂದ ಅನುಮತಿ:ಇನ್ನು ಸರ್ಕಾರಿ ಜಮೀನುಗಳಲ್ಲಿ ಖಾಸಗಿ ಕಂಪನಿಯವರು ವಿದ್ಯುತ್ ಕಂಬಗಳನ್ನು ನಿರ್ಮಿಸುವಾಗ ಸರ್ಕಾರದ ಅನುಮತಿ ಪಡೆದಿದ್ದಾರೆ ಎನ್ನುತ್ತಾರೆ ಕೂಡ್ಲಿಗಿ ತಹಶೀಲ್ದಾರ್ ಎಂ.ರೇಣುಕಾ.ಗಾಳಿಯಂತ್ರ ಕಂಪನಿಗಳು ಕೂಡ್ಲಿಗಿ ಕೆರೆಯಲ್ಲಿ, ಅಮರದೇವರಗುಡ್ಡ ಸರ್ಕಾರಿ ಶಾಲೆಯ ಪಕ್ಕದಲ್ಲಿಯೇ ವಿದ್ಯುತ್ ಲೈನ್ ಹಾದು ಹೋಗುವಂತೆ ನಿರ್ಮಿಸಿದ್ದಾರೆ. ಇದರಿಂದ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದರೆ ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸುತ್ತಾರೆ ರೈತ ಸಂಘದ ಮುಖಂಡ ದೇವರಮನಿ ಮಹೇಶ.