ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನಾದ್ಯಂತ ಕಳೆದ ಹಲವಾರು ತಿಂಗಳಿನಿಂದ ಮಳೆಬಾರದೆ ರೈತರು ತಲೆಯ ಮೇಲೆ ಕೈಹೊತ್ತು ಆಕಾಶದತ್ತ ನೋಡುತ್ತ ಚಿಂತಾಕ್ರಾಂತರಾಗಿರುವ ಸಂದರ್ಭದಲ್ಲಿ ಕಾಲುವೇಹಳ್ಳಿಯಲ್ಲಿ ನಡೆದ ವಾಮಾಚಾರ ಸುದ್ದಿ ರೈತರಷ್ಟೇಯಲ್ಲ, ಎಲ್ಲರಲ್ಲೂ ಆತಂಕ ಉಂಟು ಮಾಡಿದೆ.ಕಳೆದ ವರ್ಷವಷ್ಟೇ ವಾಮಾಚಾರ ನಡೆದ ಬಗ್ಗೆ ಸುದ್ದಿಯಾಗಿತ್ತು. ಈ ವರ್ಷದಲ್ಲಿ ಮೊಟ್ಟಮೊದಲ ವಾಮಾಚಾರ ಕಾಲುವೇಹಳ್ಳಿ ಗ್ರಾಮದ ಹೊರಭಾಗದಲ್ಲಿರುವ ಪುರಾತನ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ನಿಧಿಗಳ್ಳರು ನಿಧಿ ಶೋಧನೆಗಾಗಿ ಇಲ್ಲಿ ವಾಮಾಚಾರದ ಮೂಲಕ ಪ್ರಯತ್ನ ನಡೆಸಿದ್ದಾರೆ.
ಭಾನುವಾರ ತಡರಾತ್ರಿ ದೇವಸ್ಥಾನ ಆವರಣದಕ್ಕೆ ಬಂದಿರುವ ನಿಧಿಗಳ್ಳರು ಪುರಾತನ ದೇವಸ್ಥಾನ ಸುತ್ತಮುತ್ತ ನಿಧಿ ಇರಬಹುದು ಎಂಬ ಶಂಕೆಯ ಮೇಲೆ ಆಳವಾದ ಕಂದಕವನ್ನು ತೋಡಿದ್ಧಾರೆ. ಸುಮಾರು ಗಂಟೆಗಳ ಕಾಲ ಕಂದಕವನ್ನು ತೋಡಿದ ನಂತರ ನಿಧಿಗಾಗಿ ಗುಂಡಿಯ ಮುಂಭಾಗದಲ್ಲಿ ಅರಿಶಿನ, ಕುಂಕುಮ, ಹೂ, ನಿಂಬೆಹಣ್ಣುಗಳಿಂದ ಪೂಜಿಸಿ ದಿಗ್ಬಂಧನ ಹಾಕಿ ಶೋಧ ಕಾರ್ಯ ನಡೆಸಿದ್ಧಾರೆ. ಸ್ವಲ್ಪ ಹೊತ್ತು ಕಾದ ನಿಧಿಗಳ್ಳರು ಯಾವುದೇ ಫಲ ಸಿಗದೇ ಇದ್ಧಾಗ ಸದರಿ ಜಾಗದಿಂದ ಕಾಲ್ಕಿತ್ತಿದ್ದಾರೆ. ಸೋಮವಾರ ಬೆಳಿಗ್ಗೆ ಎಂದಿನಂತೆ ಗ್ರಾಮಸ್ಥರು, ಪೂಜಾರರು ಬಂದು ನೋಡಿದಾಗ ನಿಧಿಗಳ್ಳರ ಕೈಚಳಕ ಬೆಳಕಿಗೆ ಬಂದಿದೆ.ಗ್ರಾಮದ ಮುಖಂಡ ತಳವಾರರಂಗಸ್ವಾಮಿ, ಗೊಂಚಿಗಾರಪಾಲಣ್ಣ, ಕೆ.ಜಿ.ಕಾಂತಣ್ಣ, ತಿಪ್ಪೇಸ್ವಾಮಿ, ಪತ್ರಿಕೆಯೊಂದಿಗೆ ಮಾತನಾಡಿ, ಮದಕರಿನಾಯಕ ಅರಸರ ಕಾಲದಲ್ಲಿ ದೊಡ್ಡೇರಿ ಸಂಸ್ಥಾನವಾಗಿದ್ದು ಕಾಲುವೇಹಳ್ಳಿ ಗ್ರಾಮದಲ್ಲಿ ಉಪ ಸಂಸ್ಥಾನ ನೀಡಲಾಗಿತ್ತು. ಹಾಗಾಗಿ ಈ ಗ್ರಾಮದ ಸುತ್ತಲೂ ಕೋಟೆಗಳಿದ್ದು ಹತ್ತಕ್ಕೂ ಹೆಚ್ಚು ದೇವಸ್ಥಾನಗಳಿವೆ. ವಿಶೇಷವೆಂದರೆ ಎಲ್ಲವೂ ಆಂಜನೇಯಸ್ವಾಮಿ ದೇವಸ್ಥಾನಗಳಾಗಿವೆ. ಹಾಗಾಗಿ ನಿಧಿಗಳ್ಳರು ಕಳೆದ ವರ್ಷವೂ ಇದೇ ರೀತಿ ಪ್ರಯತ್ನ ನಡೆಸಿದ್ದರು. ಪುನಃ ಈ ವರ್ಷ ನಿಧಿಗಾಗಿ ದೇವಸ್ಥಾನಕ್ಕೆ ಅಷ್ಟಬಂಧನ ವಿಧಿಸಿ ವಾಮಾಚಾರ ನಡೆಸಿದ್ಧಾರೆ.
ಗ್ರಾಮದ ಸುತ್ತಮುತ್ತಲೂ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಿವೆ. ಕಳೆದ ವರ್ಷವೂ ಸಹ ನಿಧಿಗಳ್ಳತನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ವರ್ಷವೂ ಸಹ ಪೊಲೀಸರು ಆಗಮಿಸಿ ತೆರಳಿದ್ಧಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಿಧಿಗಳ್ಳತನ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಗ್ರಾಮಸ್ಥರು ಹೇಳಿದ್ಧಾರೆ.ನಿಧಿಗಳ್ಳರು ನಿಧಿಯನ್ನು ಪಡೆಯಬೇಕೆಂಬ ಹಟದಿಂದ ಅಷ್ಟದಿಗ್ಭಂಧನ ವಿಧಿಸಿ ಸುತ್ತಲೂ ಅರಿಶಿನ, ಕುಂಕುಮ ಹಾಗೂ ಹೂಗಳನ್ನು ಎಲ್ಲಂದರಲ್ಲೇ ಚೆಲ್ಲಿ ಭಯದ ವಾತಾವರಣವನ್ನುಂಟು ಮಾಡಿದ್ಧಾರೆ. ಗ್ರಾಮದ ಹೊರಭಾಗದ ದೇವಸ್ಥಾನವಾದ್ದರಿಂದ ಯಾರೂ ಗಮನಹರಿಸಿಲ್ಲ. ಇದು ನಿಧಿಗಳ್ಳರಿಗೆ ವರದಾನವಾಗಿದ್ದು, ಮುಂದಿನ ದಿನಗಳಲ್ಲಾದರೂ ಇಂತಹ ಪ್ರಕರಣಗಳನ್ನುನಿಯಂತ್ರಿಸಲು ಪೊಲೀಸರು ಮುಂದಾಗಬೇಕು ಎಂದಿದ್ಧಾರೆ. ಪೋಟೋ೪ಸಿಎಲ್‌ಕೆ೧: ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸಿರುವುದು.