ಸಾರಾಂಶ
ಗಂಗಾವತಿ:
ಕಾರ್ಮಿಕ ವಿರೋಧಿ ನೀತಿ ಹಿಂಪಡೆಯುವಂತೆ ಒತ್ತಾಯಿಸಿ ಎಐಸಿಸಿಟಿಯು ನೇತೃತ್ವದಲ್ಲಿ ಕಾರ್ಮಿಕರು ಶ್ರೀಕೃಷ್ಣದೇವರಾಯ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯ್ ದೊರೆರಾಜು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾರ್ಮಿಕ ವರ್ಗದ ಮೇಲಿನ ದಾಳಿ, ದೌರ್ಜನ್ಯ ಹೆಚ್ಚಾಗುತ್ತಿವೆ. ಕಾರ್ಮಿಕರ ಹೋರಾಟದ ಫಲವಾಗಿ ಅಸ್ತಿತ್ವಕ್ಕೆ ಬಂದ ಕಾರ್ಮಿಕ ಕಾನೂನುಗಳ ಬದಲಾವಣೆಗೆ ಕೇಂದ್ರ ಸರ್ಕಾರ ವಿಭಿನ್ನ ದಾರಿಯಲ್ಲಿ ಹೊರಟಿದೆ. ರಾಜ್ಯ ಸರ್ಕಾರಗಳೂ ಈ ಕಾನೂನು ಬದಲಾವಣೆಯಲ್ಲಿ ತೊಡಗಿವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಹಲವಾರು ಕಾನೂನುಗಳನ್ನು ಈಗಾಗಲೇ ಬದಲಾಯಿಸಲಾಗಿದೆ. ಉಳಿದ ರಾಜ್ಯಗಳು ಇದಕ್ಕೆ ಹೊರತಾಗಿಲ್ಲ ಎಂದು ಆರೋಪಿಸಿದ್ದಾರೆ.
ಹಾಲಿ ಕಾರ್ಮಿಕ ಕಾನೂನುಗಳನ್ನು ನೇರವಾಗಿ ಉಲ್ಲಂಘಿಸಿ, ಕಾರ್ಪೋರೆಟ್ ಹಾಗೂ ಗುತ್ತಿಗೆ ಕಾರ್ಮಿಕ ಪದ್ಧತಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ದೇಶದಲ್ಲಿ ಶೇ. 90ರಷ್ಟು ಕಾರ್ಮಿಕರು ಕನಿಷ್ಠ ವೇತನ ಹಾಗೂ ಉದ್ಯೋಗ ಮತ್ತು ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ ಎಂದು ಅಕ್ರೋಶ ವ್ಯಕ್ತ ಪಡಿಸಿದರು.ಎಲ್ಲ ಕಾರ್ಮಿಕರಿಗೂ ₹ 35 ಸಾವಿರ ಕನಿಷ್ಠ ವೇತನ ನಿಗದಿ, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ, ಇಎಸ್‌ಐ ಹಾಗೂ ವಸತಿ ಯೋಜನೆ ಜಾರಿಗೊಳಿಸಬೇಕು. ಗಣಿ ಕಾರ್ಮಿಕರಿಗೆ ಪುನರ್ವಸತಿ ಮತ್ತು ಪುನರಜ್ಜೀವನ ಯೋಜನೆಯಡಿ ಸಮಗ್ರ ಪುನರ್ವಸತಿ, ಉದ್ಯೋಗ ಕಲ್ಪಿಸಿ, ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು. ಗುತ್ತಿಗೆ ಕಾರ್ಮಿಕರ ಕಾಯಂಮಾತಿಗಾಗಿ ಶಾಸನ ರೂಪಿಸಲು ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸ್ತ್ರೀ ನೌಕರರಿಗೆ ಶಾಸನಬದ್ಧ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಕಾರ್ಮಿಕ ಹಿರಿಯ ಮುಖಂಡರಾದ ಭಾರಧ್ವಾಜ್, ಸಣ್ಣ ಹನುಮಂತಪ್ಪ ಹುಲಿಹೈದರ್, ಬೀದಿ ವ್ಯಾಪಾರಿಗಳ ಸಂಘದ ಸೈಯ್ಯದ್ ಬುರ್ಹಾನುದ್ದೀನ್, ಪೌರಕಾರ್ಮಿಕರ ಮುಖಂಡರಾದ ಪರಶುರಾಮ್, ಕೇಶವ ನಾಯಕ, ಬಾಬರ, ರಮೇಶ ಕೆ., ಕನಕಪ್ಪ ನಾಯಕ, ಭೀಮಣ್ಣ, ಕಾರಟಗಿ ದುರುಗಪ್ಪ, ಹುಲ್ಲೇಶ, ಮಾಯಮ್ಮ, ಪಾರ್ವತಮ್ಮ, ಕೊಟ್ರೇಶ ಇದ್ದರು.