ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಪದೇಪದೇ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ನಿತ್ಯ 8 ಸಾವಿರ ಕ್ಯುಸೆಕ್ ನೀರು ಹರಿಸುವುದಾಗಿ ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಿರುವುದನ್ನು ಹಿಂಪಡೆಯುವಂತೆ ರಾಜ್ಯ ರೈತಸಂಘದ ಮುಖಂಡ ಕಿರಂಗೂರು ಪಾಪು ಆಗ್ರಹಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು, ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶವನ್ನು ತಿರಸ್ಕರಿಸದೇ 8 ಸಾವಿರ ಕ್ಯುಸೆಕ್ ನೀರು ಹರಿಸುವುದಾಗಿ ಹೇಳಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ತಮಿಳುನಾಡಿಗೆ ನಿತ್ಯ ಒಂದು ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಎಸ್ ಆದೇಶ ಮಾಡಿರುವುದು ಖಂಡನೀಯ. ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಪ್ರಧಾನಿಯವರ ಮೇಲೆ ಒತ್ತಡ ಹಾಕಲು ಸಿಎಂ, ಸಂಸದರು, ಸಚಿವರು, ಶಾಸಕರು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.ಕಾವೇರಿ ನೀರು ನಿರ್ವಹಣಾ ಸಮಿತಿ ಪ್ರತಿ ನಿತ್ಯ 1 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ಮಾಡಿರುವುದು ರಾಜ್ಯದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಯಾವ ಕಾರಣಕ್ಕೂ ಯಾವುದೇ ಜಲಾಶಯಗಳಿಂದ ತಮಿಳುನಾಡಿಗೆ ನೀರನ್ನು ಹರಿಸಬಾರದು ಎಂದರು.
ಕೆಆರ್‌ಎಸ್ ಜಲಾಶಯದಲ್ಲಿ ಇದ್ದ ಅಲ್ಪಸ್ವಲ್ಪ ನೀರು ಖಾಲಿಯಾಗುತ್ತಿದೆ. ಇದರಿಂದ ಜನ-ಜಾನುವಾರುಗಳಿಗೂ, ಪಕ್ಷಿ ಸಂಕುಲಕ್ಕೂ ಕುಡಿಯುವ ನೀರಿಗೂ ಹಾಹಾಕಾರ ತಲೆದೋರಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಆದೇಶ ಹೊರಡಿಸಿರುವುದು ನಿಜಕ್ಕೂ ದುರದೃಷ್ಟಕರ ಎಂದು ವಿಷಾದಿಸಿದ್ದಾರೆ.ಮಂಡ್ಯ ಸಂಸದರಾದ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಎಲ್ಲಾ ಸಂಸದರು ಪ್ರಧಾನಮಂತ್ರಿಯವರ ಜೊತೆ ರಾಜ್ಯದ ಕಾವೇರಿ ನೀರಿನ ವಿಷಯವಾಗಿ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಬೇಕು. ಜಿಲ್ಲೆಯ ಶಾಸಕರು ಕೂಡ ಇದರ ಬಗ್ಗೆ ಚಕಾರ ಎತ್ತಿ ಮುಖ್ಯಮಂತ್ರಿಯವರ ಗಮನ ಸೆಳೆಯಬೇಕು. ಒಂದು ವೇಳೆ ರೈತರ ಹಿತ ಕಾಯದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.