ಸಾರಾಂಶ
- ಪೊಲೀಸ್ ಕುಟುಂಬಗಳ ಕಲ್ಯಾಣ ಸಂಘ ಅಧ್ಯಕ್ಷ ಗುರುಪಾದಯ್ಯ ಮಠದ್ ಒತ್ತಾಯ । ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಆದಿಲ್ ಎಂಬಾತನ ಸಾವಿಗೆ ಸಂಬಂಧಿಸಿದಂತೆ ಚನ್ನಗಿರಿ ಡಿವೈಎಸ್‌ಪಿ, ಸಿಪಿಐ ಹಾಗೂ ಪಿಎಸ್‌ಐ ಅವರನ್ನು ಅಮಾನತು ಮಾಡಿದ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಪೊಲೀಸ್ ಕುಟುಂಬಗಳ ಕಲ್ಯಾಣ ಸಂಘ ಅಧ್ಯಕ್ಷ ಹೊನ್ನಾಳಿ ಗುರುಪಾದಯ್ಯ ಮಠದ್ ಒತ್ತಾಯಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಟ್ಕಾ ಪ್ರಕರಣದ ವಿಚಾರಣೆಗೆಂದು ಕರೆತಂದಿದ್ದ ವೇಳೆ ಆದಿಲ್ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಪೊಲೀಸ್ ಇಲಾಖೆ ಸ್ವತ್ತು ಧ್ವಂಸ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಡಿವೈಎಸ್‌ಪಿ, ಸಿಪಿಐ, ಸಬ್ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಪಡಿಸಿರುವುದು ಪೊಲೀಸ್ ಸಿಬ್ಬಂದಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ. ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದರು.
ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಅಲ್ಲಿನ ಶಾಸಕ ಹರೀಶ ಪೂಂಜಾ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನನ್ನು ಕೈಗೆತ್ತಿಕೊಳ್ಳುವ ಕಿಡಿಗೇಡಿಗಳಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿ ರೋಸಿಹೋಗಿದ್ದಾರೆ. ಕಾನೂನು ಪರಿಪಾಲನೆ ಮಾಡುತ್ತಿರುವ, ಕಾನೂನು, ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುತ್ತಿರುವ ಪೊಲೀಸರಿಗೆ ಆತ್ಮಸ್ಥೈರ್ಯ ಮೂಡಿಸಿ, ಸೂಕ್ತ ಭದ್ರತೆ ನೀಡಬೇಕಿರುವುದು ಸರ್ಕಾರಗಳು. ಆ ಭಾಗದ ಜನಪ್ರತಿನಿಧಿಗಳು, ಪ್ರಜ್ಞಾವಂತ ನಾಗರೀಕರ ಆದ್ಯ ಕರ್ತವ್ಯ ಎಂದು ತಿಳಿಸಿದರು.ಸಮಾಜಘಾತುಕ ಶಕ್ತಿಗಳು, ಪುಂಡ-ಪೋಕರಿಗಳಿಗೆ, ರೌಡಿಗಳು, ಕಾನೂನುಬಾಹಿರ ಚಟುವಟಿಕೆಗಳಿಗೆ ಸ್ವತಃ ಸರ್ಕಾರವೇ ಪ್ರೋತ್ಸಾಹ ನೀಡಿದಂತಾಗುತ್ತದೆ. ತಕ್ಷಣವೇ ಚನ್ನಗಿರಿಯಲ್ಲಿ ಆದಿಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಪಡಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಅಮಾನತು ಆದೇಶ ಹಿಂಪಡೆಯಬೇಕು. ಠಾಣೆ ಮೇಲೆ, ಪೊಲೀಸ್ ಸಿಬ್ಬಂದಿ ಮೇಲೆ, ಇಲಾಖೆ ವಾಹನ, ಸ್ವತ್ತುಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಕೆಲಸವನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹಮಂತ್ರಿಗಳು ಮೊದಲು ಮಾಡಲಿ ಎಂದು ತಾಕೀತು ಮಾಡಿದರು.
ಮುಖಂಡರಾದ ವಿನಯ ಎಂ. ವಗ್ಗರ್, ಧನಂಜಯ, ಹನುಮಂತಪ್ಪ ಸೊರಟೂರು, ಆರುಂಡಿ ನಾಗರಾಜ ಇದ್ದರು.- - -
ಕೋಟ್ ಬೆಳ್ತಂಗಡಿ, ಚನ್ನಗಿರಿ, ಬೆಂಗಳೂರಿನ ಡಿಜೆ ಹಳ್ಳಿ ಸೇರಿದಂತೆ ಎಲ್ಲಿಯೂ ಠಾಣೆ ಮೇಲೆ ದಾಳಿಯಂಥ ಘಟನೆಗಳು ಮತ್ತೆ ಮುಂದೆಂದೂ ರಾಜ್ಯದ ಯಾವುದೇ ಭಾಗದಲ್ಲಿ ಮರುಕಳಿಸದಂತೆ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡು, ಪೊಲೀಸರಲ್ಲಿ ನೈತಿಕ ಸ್ಥೈರ್ಯ ತುಂಬಲಿ - ಗುರುಪಾದಯ್ಯ ಮಠದ, ಅಧ್ಯಕ್ಷ- - - -28ಕೆಡಿವಿಜಿ2:
ದಾವಣಗೆರೆಯಲ್ಲಿ ಮಂಗಳವಾರ ಪೊಲೀಸ್ ಕುಟುಂಬಗಳ ಕಲ್ಯಾಣ ಸಂಘ-ಕರ್ನಾಟಕದ ಅಧ್ಯಕ್ಷ ಹೊನ್ನಾಳಿ ಗುರುಪಾದಯ್ಯ ಮಠದ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.