ಗಜೇಂದ್ರಗಡ: ಕಾರ್ಮಿಕರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಗೆ ಕರಡು ನಿಯಮಗಳನ್ನು ಪ್ರಕಟಿಸುವ ಮೂಲಕ ಕಾರ್ಮಿಕರಿಗೆ ದ್ರೋಹ ಬಗೆದಿವೆ ಎಂದು ಸಿಐಟಿಯು ಮುಖಂಡ ಎಂ.ಎಸ್. ಹಡಪದ ಆರೋಪಿಸಿದರು.

ಕೇಂದ್ರ ಸರ್ಕಾರದ ಸಂಹಿತೆಗಳ ರದ್ಧತಿಗೆ ಕಾರ್ಮಿಕ ಸಂಘಟನೆಗಳು ಫೆ. ೧೨ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆ ಗುರುವಾರ ಸ್ಥಳೀಯ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ನಡೆದ ಮುಷ್ಕರದಲ್ಲಿ ಮಾತನಾಡಿದರು.ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಕೇಂದ್ರ ಬಿಜೆಪಿ ಸರ್ಕಾರ ರೂಪಿಸಿದ ೪ ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸುವ, ಮಾರ್ಪಡಿಸುವ ಅಥವಾ ಹೊಸದಾಗಿ ಪರ್ಯಾಯ ಕಾರ್ಮಿಕ ಕಾನೂನು ರೂಪಿಸುವ ಹೊಣೆಗಾರಿಕೆ ಪ್ರದರ್ಶಿಸಿಲ್ಲ. ಬದಲಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಕಾರ್ಮಿಕ ಸಂಹಿತೆಗಳ ಜಾರಿಗೆ ಕರಡು ನಿಯಮಗಳನ್ನು ಪ್ರಕಟಿಸುವ ಮೂಲಕ ಕಾರ್ಮಿಕ ವಿರೋಧಿ ನೀತಿಗಳಲ್ಲಿ ಬಿಜೆಪಿಗೂ ತನಗೂ ಯಾವುದೇ ವ್ಯತ್ಯಾಸವಿಲ್ಲ ಎಂದರು.

ತಾನು ಸಹ ಮೋದಿ ಸರ್ಕಾರದಂತೆ ಬಂಡವಾಳಗಾರರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಕಿಡಿಕಾರಿದ ಅವರು, ಕಾರ್ಮಿಕ ವಿರೋಧಿಯಾಗಿ ಪ್ರಕಟಿಸಿರುವ ಕರಡು ನಿಯಮಗಳನ್ನು ಕೂಡಲೇ ವಾಪಸ್‌ ಪಡೆದು ರಾಜ್ಯದಲ್ಲಿನ ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮುಂದಾಗಬೇಕು ಎಂದರು. ಕಾರ್ಮಿಕ ಸಂಘದ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿಗಳನ್ನು ನೀಡುವ ಮೂಲಕ ಅವರ ವ್ಯಾಪಾರದ ಸ್ಥಳವನ್ನು ಖಾತರಿಗೊಳಿಸಿ ಅವರಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸಬೇಕು. ರಾಜ್ಯದಲ್ಲಿ ದುಡಿತದ ಅವಧಿಯನ್ನು ದಿನಕ್ಕೆ ೧೨ ಗಂಟೆಗೆ ಹೆಚ್ಚಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಗ್ರಾಮೀಣ ದುಡಿಯುವ ಜನರ ಮರಣಶಾಸನವಾದ ವಿಜಿ ಜಿ ರಾಮಜಿ ಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿದರು. ಡಿವೈಎಫ್‌ಐ ಮುಖಂಡ ಎಫ್.ಎಫ್. ತೋಟದ ಮಾತನಾಡಿ, ತಾಲೂಕಿನ ಬಗರ್‌ಹುಕುಂ ಸಾಗುವಾಳಿದಾರ ರೈತರಿಗೆ ಹಕ್ಕು ಪತ್ರಗಳನ್ನು ವಿತರಿಸಬೇಕು ಮತ್ತು ರಿಗ್ರಾಂಟ್ ಮೂಲಕ ತಾಲೂಕು ಬಗರಹುಕುಂ ಸಮಿತಿ ಮೂಲಕ ರೈತರಿಗೆ ಹಕ್ಕುಪತ್ರ ಆದೇಶವಾಗಿರುವರಿಗೆ ಆಕಾರ ಬಂದು ಹಾಗೂ ಆರ್‌ಟಿಸಿ ಒಳಗೆ ಹೆಸರಿರುವ ರೈತರಿಗೆ ಪೋಡಿ ಮಾಡಿ ಕೊಡಬೇಕು ಎಂದರು.ಕಟ್ಟಡ ಕಾರ್ಮಿಕ ಮುಖಂಡ ಮೆಹಬೂಬ ಹವಾಲ್ದಾರ ಮಾತನಾಡಿದರು. ಈ ವೇಳೆ ರೂಪೇಶ ಮಾಳೋತ್ತರ, ವೀರೇಶ ಮಾಳೋತ್ತರ, ಅಂದಪ್ಪ ಕುರಿ, ಪರಶು ಅರಗಂಜಿ, ವೀರೇಶ ಇಟಗಿ, ಯಮನೂರ ಜಕ್ಕಲಿ, ಹನುಮಂತ ಚಿಟಗಿ, ಅನಂದ ರಾಠೋಡ, ನೀಲಮ್ಮ ಹಿರೇಮಠ, ಶರಣಮ್ಮ ವಾಲಿ, ಮೈಲಾರಪ್ಪ ಮುತಾರಿ, ಮಾಂಡ್ರೆ ಸೇರಿದಂತೆ ಬಿಸಿಯೂಟ ನೌಕರರ ಸಂಘ, ಆಶಾ ನೌಕರರ ಸಂಘ, ಕಟ್ಟಡ ಕಾರ್ಮಿಕರ, ಗ್ರಾಪಂ ನೌಕರರು, ಅಂಗನವಾಡಿ, ದೇವದಾಸಿ ಮಹಿಳಾ ಸಂಘಟನೆ, ಕೆಪಿಆರ್‌ಎಸ್ ಸೇರಿ ಸಾಮೂಹಿಕ ಸಂಘಟನೆ ಮುಖಂಡರು ಭಾಗವಹಿಸಿದ್ದರು.