ಸಾರಾಂಶ
ಬೆಳಗಾವಿಯ ಕನ್ನಡ ರಾಜ್ಯೋತ್ಸವ-25ಕ್ಕೆ ಸರ್ಕಾರದಿಂದ 2 ಕೋಟಿ ಹಣ ತಕ್ಷಣ ಬಿಡುಗಡೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕನ್ನಡ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆಯ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯಗೆ ಶನಿವಾರ ಮನವಿ ಸಲ್ಲಿಸಿದರು.ನಗರದ ಪ್ರವಾಸಿ ಮಂದಿರ ಬಳಿ ಸಿಎಂಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಬೆಳಗಾವಿಯ ಕನ್ನಡ ರಾಜ್ಯೋತ್ಸವ-25ಕ್ಕೆ ಸರ್ಕಾರದಿಂದ ₹2 ಕೋಟಿ ಹಣ ತಕ್ಷಣ ಬಿಡುಗಡೆ ಮಾಡಬೇಕು. ಕಿತ್ತೂರು ಕನಾಟಕಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಿ ವಿಶೇಷ ಅನುದಾನ ಒದುಗಿಸಬೇಕು. ವಾಯವ್ಯ ಸಾರಿಗೆ ಸಂಸ್ಥೆ ಹೆಸರನ್ನು ಕಿತ್ತೂರ ಕರ್ನಾಟಕ ಸಾರಿಗೆ ಎಂದು ಮರುನಾಮಕರಣ ಮಾಡಬೇಕು. ಕಿತ್ತೂರು ಕರ್ನಾಟಕ ಭಾಗದಲ್ಲಿರುವ ಐಟಿ/ ಬಿಟಿ ಮತ್ತು ಜವಳಿ ಪಾರ್ಕಗಳನ್ನು ನಿರ್ಮಿಸಿ ವಿಶೇಷ ಅನುದಾನ ನೀಡಿ ಕಾರ್ಯಗತಗೊಳಿಸಬೇಕೆಂದು ಮನವಿ ಮಾಡಿದರು.
ಸೇನೆಯ ಮಹಾದೇವ ತಳವಾರ ಮಾತನಾಡಿ, ಸುವರ್ಣ ವಿಧಾನಸೌಧಕ್ಕೆ ವಿಭಾಗೀಯ ಕಚೇರಿಗಳನ್ನು ಸ್ಥಳಾಂತರಗೊಳಿಸಿ ಈ ಭಾಗದ ಜನರು ಬೆಂಗಳೂರು ಅಲೆದಾಡುವುದನ್ನು ತಪ್ಪಿಸಬೇಕು. ಸುವರ್ಣ ಸೌಧದ ಮುಂಭಾಗದಲ್ಲಿ ಬೆಳವಡಿ ಮಲ್ಲಮ್ಮ, ಅಮಟೂರು ಬಾಳಪ್ಪ ಮತ್ತು ಸಿಂಧೂರ ಲಕ್ಷ್ಮಣರವರ ಪ್ರತಿಮೆ ಪ್ರತಿಷ್ಠಾಪಿಸಬೇಕು. ಕೃಷ್ಣಾ ಮತ್ತು ಮಹಾದಾಯಿ ನದಿಗಳಿಗೆ ಸಂಬಂಧಿಸಿದ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಅನುದಾನ ಒದಗಿಸಿ ಯೋಜನೆ ಪೂರ್ಣಗೊಳಿಸಬೇಕು. ಕರ್ನಾಟಕ ಲಾಂಛನದಲ್ಲಿರುವ ಸತ್ಯಮೇವ ಜಯತೆ ವಾಕ್ಯವನ್ನು ಹಿಂದಿಯಿಂದ ಕನ್ನಡಕ್ಕೆ ಬದಲಾಯಿಸಬೇಕು. ಕಿತ್ತೂರು ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ನೀಡಿ ಸಮಗ್ರ ಅಭಿವೃದ್ಧಿ ಮಾಡಬೇಕೆಂದು ಒತ್ತಾಯಿಸಿದರು.ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಿತ್ತೂರು ಕರ್ನಾಟಕ ಭಾಗದ ಪ್ರತಿಯೊಂದು ತಾಲೂಕಿನಲ್ಲೂ ಐಟಿಐ, ಡಿಪ್ಲೊಮಾ ಪದವಿ ಮತ್ತು ಕಾನೂನು ಕಾಲೇಜುಗಳನ್ನು ಪ್ರಾರಂಭಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಬೆಂಗಳೂರು ನಗರ ಮಾದರಿಯಲ್ಲಿಯೇ ಬೆಳಗಾವಿಯಿಂದ ಧಾರವಾಡ-ಹುಬ್ಬಳ್ಳಿವರೆಗೆ ಮೆಟ್ರೋ ರೈಲು ಪ್ರಾರಂಭಿಸಲು ಯೋಜನೆಗಳನ್ನು ರೂಪಿಸಬೇಕು ಎಂದರು.
ಈ ವೇಳೆ ಮಹಿಳಾ ಗೌರವಾಧ್ಯಕ್ಷೆ ಕಸ್ತೂರಿ ಭಾವಿ, ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ, ರಾಜ್ಯ ಪ್ರಧಾನ ಸಂಚಾಲಕ ದೇವೇಂದ್ರ ತಳವಾರ, ಜಿಲ್ಲಾ ಉಪಾಧ್ಯಕ್ಷ ಸಂತೋಷ ತಳ್ಳಿಮನಿ, ಭರಮಣ್ಣ ಬಡಸ ಆಟೋ ಘಟಕದ ಅಧ್ಯಕ್ಷ ವಾಸು ಬಸನಾಯ್ಕರ ಇತರರು ಇದ್ದರು.