ಕಂದಾಯ ವಸೂಲಿ ಮಾಡದಿದ್ರೆ ವೇತನ ತಡೆ: ಇಒ ಎಚ್ಚರಿಕೆ

| Published : Jun 14 2024, 01:04 AM IST

ಸಾರಾಂಶ

ನೀರಗಂಟಿಗಳು ಮತ್ತು ಲೈನ್‌ಮ್ಯಾನ್‌ ಜತೆ ಬೆಳಗ್ಗೆ ಮತ್ತು ಸಂಜೆ ತಂಡವಾಗಿ ಬಾಕಿ ಪಟ್ಟಿ ಹಿಡಿದು ಮನೆಗಳಿಗೆ ತೆರಳಿ ಕಂದಾಯ ಸಂಗ್ರಹಿಸಿ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಮಾಸಿಕ ಒಂದೂವರೆ ಲಕ್ಷ ರು. ಕಂದಾಯ ವಸೂಲಾತಿ ಮಾಡದಿದ್ದರೆ ನೋಟಿಸ್ ನೀಡಿ ವೇತನ ತಡೆಹಿಡಿಯಲಾಗುತ್ತದೆ ಎಂದು ತಾಲೂಕು ಪಂಚಾಯಿತಿ ಪ್ರಭಾರಿ ಇಒ ರಾಮಕೃಷ್ಣಪ್ಪ ಪಂಚಾಯಿತಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ಸಮೀಪದ ಕುಂಬಳೂರು ಗ್ರಾಮ ಪಂಚಾಯಿತಿಗೆ ಅನಿರೀಕ್ಷಿತ ಭೇಟಿ ನೀಡಿ ವಸೂಲಾತಿ ಬಗ್ಗೆ ಕರ ಸಂಗ್ರಹಗಾರರ ಪರವಾಗಿ ಅವರ ಪತ್ನಿಗೆ ವಿಚಾರಿಸಿದಾಗ ದಿನಕ್ಕೆ ೧೦ ಸಾವಿರ ರು. ಸಂಗ್ರವಾಗಿದೆ ಎಂದು ಉತ್ತರಿಸಿದಾಗ ಇಒ, ದಿನಕ್ಕೆ ಇಪ್ಪತ್ತು ಸಾವಿರ ವಸೂಲಾತಿ ಮಾಡಬೇಕು. ಸಂಗ್ರಹವಾದ ಮೊತ್ತದಲ್ಲಿ ಮೂರನೇ ಒಂದು ಭಾಗ ಮಾತ್ರ ವೇತನ ನೀಡಬಹುದು, ಮಾಸಿಕ ಒಂದೂವರೆ ಲಕ್ಷ ರು. ವಸೂಲು ಮಾಡಲೇಬೇಕು ಇಲ್ಲದಿದ್ದರೆ ನೌಕರಿ ಮಾಡುವ ಅಗತ್ಯವಿಲ್ಲ, ನೀರಗಂಟಿಗಳು ಮತ್ತು ಲೈನ್‌ಮ್ಯಾನ್‌ ಜತೆ ಬೆಳಗ್ಗೆ ಮತ್ತು ಸಂಜೆ ತಂಡವಾಗಿ ಬಾಕಿ ಪಟ್ಟಿ ಹಿಡಿದು ಮನೆಗಳಿಗೆ ತೆರಳಿ ಕಂದಾಯ ಸಂಗ್ರಹಿಸಿ ಎಂದು ಸೂಚಿಸಿದರು.

ಎಲ್ಲಾ ನೌಕರರು ಪಂಚಾಯತ್ ರಾಜ್ ಕಾಯ್ದೆಯಂತೆ ವಾರದ ಕರ್ತವ್ಯದ ಯೋಜನೆ ಕೊಡಿ, ಅದರಂತೆ ಕೆಲಸ ಮಾಡಿ, ಕಚೇರಿಯಲ್ಲಿ ವಾರದ ನಂತರ ನಾಗರಿಕರ ಯಾವೊಂದು ಅರ್ಜಿ ಬಾಕಿ ಇರಕೂಡದು. ಬರಗಾಲದ ಜಗಳೂರು ತಾಲೂಕಿನಲ್ಲಿ ಕಂದಾಯ ವಸೂಲಾಗುತ್ತದೆ. ಇಲ್ಲಿ ನೀರಾವರಿ ಭಾಗದಲ್ಲಿ ಏಕೆ ವಸೂಲಾಗಲ್ಲ, ನೆಪ ಹೇಳದೇ ಕೆಲಸ ಮಾಡಿ ಇಲ್ಲದಿದ್ರೆ ಪಿಡಿಒಗೆ ನೋಟೀಸ್ ನೀಡಲಾಗುತ್ತೆ. ಅವರು ಎಲ್ಲಾ ಸಿಬ್ಬಂದಿಗೆ ನೋಟಿಸ್ ನೀಡುವರು ಎಂದು ರಾಮಕೃಷ್ಣಪ್ಪ ತಿಳಿಸಿದರು. ನರೇಗಾ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

ನರೇಗಾ ಸಹಾಯಕ ನಿರ್ದೇಶಕ ಸುನಿಲ್, ಪಂಚಾಯತ್‌ ರಾಜ್ ಸಹಾಯಕ ನಿರ್ದೇಶಕ ಉಮೇಶ್, ಪಿಡಿಒ ನರಸಿಂಹಮೂರ್ತಿ, ಕಾರ್ಯದರ್ಶಿ ಉಮೇಶ್, ಗಣಕಯಂತ್ರ ನಿರ್ವಾಹಕ ಹಾಲೇಶ್ ಮತ್ತು ಕೆಲ ಸದಸ್ಯರು ಇದ್ದರು.