ನೂರು ವರ್ಷಗಳಲ್ಲಿ ಅರ್ಧ ಯುರೋಪ್ ಸನಾತನ ಧರ್ಮ ಸ್ವೀಕರಿಸುತ್ತದೆ

| Published : Dec 16 2023, 02:00 AM IST

ನೂರು ವರ್ಷಗಳಲ್ಲಿ ಅರ್ಧ ಯುರೋಪ್ ಸನಾತನ ಧರ್ಮ ಸ್ವೀಕರಿಸುತ್ತದೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಂಥಾಲಯದಲ್ಲಿ ಆಧ್ಯಾತ್ಮಿಕ ಪುರುಷರು ಸೇರಿದಂತೆ ಮಕ್ಕಳ ಬೆಳವಣಿಗೆಗೆ ಪೂರಕವಾದ ಪುಸ್ತಕಗಳನ್ನು ಇಟ್ಟಿರಬೇಕು

ಬಳ್ಳಾರಿ: ಇನ್ನು ನೂರು ವರ್ಷಗಳಲ್ಲಿ ಅರ್ಧ ಯುರೋಪ್ ಸನಾತನ ಧರ್ಮವನ್ನು ಸ್ವೀಕರಿಸುತ್ತದೆ. ಇದು ಖಂಡಿತ. ಮುಂದಾಗುವ ಮಹತ್ವದ ಬೆಳವಣಿಗೆ ಎಂದು ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.

ನಗರದ ರಾಘವ ಕಲಾಮಂದಿರದಲ್ಲಿ ವಿವೇಕ ತೋರಣ ಹಮ್ಮಿಕೊಂಡಿರುವ 9 ದಿನಗಳ ಸ್ವಾಮಿ ವಿವೇಕಾನಂದ ಲೀಲಾಮೃತ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.

ಯುರೋಪಿನ ಇಸಾಬಿಲಾ ಈಶ್ವರಿಯಾಗುತ್ತಿದ್ದಾಳೆ. ಹೀಗೆ ಸಹಸ್ರಾರು ಜನರು ಹಿಂದೂ ಧರ್ಮಕ್ಕೆ ವಾಲುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ರಷ್ಯಾದಲ್ಲಿ ಹಿಂದೂಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಇದೀಗ 20 ಲಕ್ಷದಷ್ಟೂ ಹಿಂದೂಗಳು ಇದ್ದಾರೆ. ಜಪ, ಧ್ಯಾನ, ಯೋಗ, ವೇದ, ಉಪನಿಷತ್ತುಗಳು ಅವರಿಗೆ ಬೇಕಾಗಿದೆ. ಅವರ ಧರ್ಮ ಕೊಡುತ್ತಿರುವುದು ಅವರಿಗೆ ಸಾಕಾಗುತ್ತಿಲ್ಲ. ಹೀಗಾಗಿ ಹಿಂದೂ ಧರ್ಮದ ಬಗ್ಗೆ ಅಧ್ಯಯನಕ್ಕೆ ಮುಂದಾಗುತ್ತಿದ್ದಾರೆ. ಭಾರತೀಯರಿಗಿಂತಲೂ ಅವರಿಗೆ ಧರ್ಮ, ಜಪ, ಯೋಗ, ವೇದಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತಿದೆ. ಲಕ್ಷಾಂತರ ಸಂಖ್ಯೆಯಲ್ಲಾಗುತ್ತಿರುವ ಬೆಳವಣಿಗೆ ನೋಡಿದರೆ ಮುಂದಿನ ದಿನಗಳಲ್ಲಿ ಯುರೋಪ್‌ ಅರ್ಧ ದಷ್ಟು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.

ವಿವೇಕ ಚಿಂತನೆ ಮನೆ ಮನೆಗೆ ತಲುಪಿಸಿ:

ವಿವೇಕಾನಂದರ ಚಿಂತನೆಯನ್ನು ಮನೆ ಮನೆಗೆ ತಲುಪಿಸುವುದನ್ನು ಬಿಟ್ಟರೆ ಅದಕ್ಕಿಂತ ಶ್ರೇಷ್ಠ ಕೆಲಸ ಮತ್ತೊಂದಿಲ್ಲ. ನಾನು, ನನ್ನ ದೇಶ, ನನ್ನ ನೆಲದ ಮಹತ್ವ ತಿಳಿಯಬೇಕಾದರೆ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಪ್ಪದೆ ಅಧ್ಯಯನ ಮಾಡಬೇಕು. ಪೋಷಕರು ಮಕ್ಕಳಿಗಾಗಿಯೇ ಇರುವ ಅನೇಕ ಪುಸ್ತಕಗಳನ್ನು ಓದಿ ತಿಳಿಸಿ ಹೇಳಬೇಕು. ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ನಿರ್ಮಾಣವಾಗಬೇಕು. ಗ್ರಂಥಾಲಯದಲ್ಲಿ ಆಧ್ಯಾತ್ಮಿಕ ಪುರುಷರು ಸೇರಿದಂತೆ ಮಕ್ಕಳ ಬೆಳವಣಿಗೆಗೆ ಪೂರಕವಾದ ಪುಸ್ತಕಗಳನ್ನು ಇಟ್ಟಿರಬೇಕು. ಒಂದು ಮಹಾನಗರ ಎಂದರೆ ಅಲ್ಲಿ ಲಕ್ಷಾಂತರ ಪುಸ್ತಕಗಳು ಇರುವ ಗ್ರಂಥಾಲಯ ಇಲ್ಲವೆಂದಾದರೆ ಅಲ್ಲಿ ವಿವೇಕ ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ, ನಿರಂತರ ಅಧ್ಯಯನ ಹಾಗೂ ಧ್ಯಾನ ಮನುಷ್ಯನನ್ನು ಬದಲಾಯಿಸಲು ಸಾಧ್ಯ ಎಂದರು.

ಇದೇ ವೇಳೆ ಉಪನ್ಯಾಸ ಕೇಳಲು ಆಗಮಿಸಿದ್ದವರು ಕೇಳಿದ ಅನೇಕ ಪ್ರಶ್ನೆಗಳಿಗೆ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ಉತ್ತರಿಸಿದರು. ವಿವೇಕ ತೋರಣದ ಸಂಯೋಜಕ ಪ್ರಭುದೇವ ಕಪ್ಪಗಲ್ಲು, ಉಪನ್ಯಾಸ ಮಾಲಿಕೆ ಸಂಚಾಲಕ ಸಿ. ಎರ್ರಿಸ್ವಾಮಿ ಹಾಗೂ ಅಡವಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಭಾರತೀಯರು ಶ್ರೇಷ್ಠತೆಯನ್ನು ತಮ್ಮ ರಕ್ತದಲ್ಲಿಯೇ ಹೊಂದಿದ್ದಾರೆ. ವಿಜ್ಞಾನ ಮತ್ತು ಗಣಿತಶಾಸ್ತ್ರದಲ್ಲಿ ಸಂಕೀರ್ಣ ಪರಿಕಲ್ಪನೆಗಳನ್ನು ಗ್ರಹಿಸುವ ವಿಶಿಷ್ಟ ಸಾಮರ್ಥ್ಯ ಭಾರತೀಯರಿಗಿದೆ ಎಂದು ನಿರ್ಭಯಾನಂದ ಸರಸ್ವತಿ ಸ್ವಾಮಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಾನವ ವಿಕಾಸ’ ಕುರಿತು ಮಾತನಾಡಿದರು.

ಭಾರತದಲ್ಲಿ ಮತ್ತು ಅಂತಾರಾಷ್ಟ್ರೀಯ ಕ್ಷೇತ್ರಗಳಲ್ಲಿ ಭಾರತೀಯರು ಅದ್ವಿತೀಯ ಸಾಧನೆಗಳನ್ನು ಮಾಡುತ್ತಿದ್ದಾರೆ. ನಮ್ಮದು ಜಾಗತಿಕವಾಗಿ ಬುದ್ಧಿವಂತ ಜನಾಂಗವೆಂಬುದು ಸಾಬೀತಾಗಿದೆ. ವಿದ್ಯಾರ್ಥಿ ಜೀವನದ ನಂತರ ಜೀವನದಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಬೇಕು. ಪ್ರಾಮಾಣಿಕತೆ, ನೈತಿಕತೆ ಹಾಗೂ ಸಮಸ್ಯೆ ಎದುರಿಸುವ ಧೈರ್ಯ ನಿಮ್ಮ ಸಮಸ್ಯೆಗಳನ್ನು ನೀಗಿಸಿ, ಯಶಸ್ಸು ಸಾಧನೆಗೆ ಅವಕಾಶ ಮಾಡಿಕೊಡಬಲ್ಲವು. ಹೀಗಾಗಿ ಪ್ರಾಮಾಣಿಕತೆ ಹಾಗೂ ನೈತಿಕತೆಯನ್ನು ವಿಚಾರದಲ್ಲಿ ಎಂದೂ ರಾಜಿಯಾಗಬೇಡಿ ಎಂದರು.

ಕಾಲೇಜಿನ ಮುಖ್ಯಸ್ಥರಾದ ಡಾ. ಎಸ್.ಎಂ. ಶಶಿಧರ್, ಪ್ರಾಂಶುಪಾಲ ಡಾ. ಹನುಮಂತರೆಡ್ಡಿ, ಡಾ. ಸವಿತಾ ಸೋನೋಳಿ, ಡಾ. ಕೋರಿ ನಾಗರಾಜ್, ಡಾ. ಎಂ. ಚಂದ್ರಗೌಡ, ಡಾ. ವೀರಭದ್ರಪ್ಪ ಆಲಗೂರ್, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.