ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಕಾಲಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯದ್ದರಿಂದ ಗರ್ಭದಲ್ಲೇ ಶಿಶು ಸಾವಿಗೀಡಾಗಿ ಬಾಣಂತಿ ಆರೋಗ್ಯದಲ್ಲಿ ಏರುಪೇರಾದ ಘಟನೆ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.ಗೋಕಾಕ ತಾಲೂಕಿನ ಮೇಲ್ಮಟ್ಟಿ ಗ್ರಾಮದ ರಾಧಿಕಾ ಮಲ್ಲೇಶ ಗಡ್ಡಿಹೋಳಿ (19) ಬಾಣಂತಿಯ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್‌ಗೆ ಸ್ಥಳಾಂತರ ಮಾಡಲಾಗಿದೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಎಂಟೂವರೆ ತಿಂಗಳ ಗರ್ಭಿಣಿಗೆ ಮನೆಯಲ್ಲಿ ಫಿಟ್ಸ್ ಬಂದಿತ್ತು. ತಕ್ಷಣ ಕುಟುಂಬಸ್ಥರು ಯಮಕನಮರಡಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.ಖಾಸಗಿ ಆಸ್ಪತ್ರೆಗೆ ಸೇರುವ ಹೊತ್ತಿಗೆ ಗರ್ಭಿಣಿಯ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಿದ್ದರೆ ಮೊದಲು ಹಣ ಪಾವತಿಸಬೇಕೆಂದು ಕೇಳಿದ್ದರು. ಹಣ ಪಾವತಿಸಲು ಆಗದ ಹಿನ್ನೆಲೆಯಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಕುಟುಂಬಸ್ಥರು ಗರ್ಭಿಣಿಯನ್ನು ಡಿಸ್ಚಾರ್ಜ್ ಮಾಡಿಕೊಂಡು, ಬಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆಸ್ಪತ್ರೆಗಳಿಗೆ ಅಲೆಯುವ ವೇಳೆ ಗರ್ಭದಲ್ಲೇ ಮಗು ಮೃತಪಟ್ಟಿದೆ. ಬಾಣಂತಿಯ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್‌ಆಸ್ಪತ್ರೆಗೆ ರವಾನಿಸಲಾಗಿದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಬಾಣಂತಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಫಿಟ್ಸ್ ಸಮಸ್ಯೆಯಿಂದ ಪ್ರಜ್ಞೆ ಕಳೆದುಕೊಂಡಿದ್ದರು. ಬಾಣಂತಿಗೆ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ನುರಿತ ಹೃದಯ ತಜ್ಞ ವೈದ್ಯರ ಕೊರತೆಯಿಂದಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಬಿಮ್ಸ್ ಆಸ್ಪತ್ರೆ ಜಿಲ್ಲಾ ಸರ್ಜನ್ ವಿಠ್ಠಲ ಶಿಂಧೆ ತಿಳಿಸಿದ್ದಾರೆ.