ಮಹಿಳೆ ಮೇಲೆ ಹಲ್ಲೆ: ವಾಹನ ಚಾಲಕನನ್ನು ಬಂಧಿಸುವಂತೆ ಪ್ರತಿಭಟನೆ

| Published : Nov 05 2025, 01:45 AM IST

ಸಾರಾಂಶ

ಮಹಿಳೆಯ ಮೇಲೆ ವಾಹನ ಚಾಲಕ ನಡೆಸಿರುವ ಹಲ್ಲೆಯನ್ನು ಖಂಡಿಸಿ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಗರದ ಪಿವಿಎಸ್ ಆಸ್ಪತ್ರೆಯಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿರುವ ಅಂಜಿನಮ್ಮಳ ಮೇಲೆ ಆಸ್ಪತ್ರೆಯ ವಾಹನ ಚಾಲಕ ಮಂಜುನಾಥ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರುನಾಡ ವಿಜಯಸೇನೆ, ಭಾರತೀಯ ದಲಿತ ಸಂಘರ್ಷ ಸಮಿತಿ, ದಲಿತ ಸಂಘರ್ಷ ಸಮಿತಿ, ದಲಿತ ಸಂರಕ್ಷಣಾ ವೇದಿಕೆ ಕಾರ್ಯಕರ್ತರು ಅಂಜಿನಮ್ಮಳ ಮೇಲೆ ಹಲ್ಲೆ ನಡೆಸಿರುವ ವಾಹನ ಚಾಲಕ ಮಂಜುನಾಥನನ್ನು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ನ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿತ್ರದುರ್ಗಕ್ಕೆ ಆಗಮಿಸುವ ಸಂದರ್ಭದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲಾಗುವುದು.

ಕಳೆದ ಹದಿನೈದು ವರ್ಷಗಳಿಂದಲೂ ಪಿವಿಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಅಂಜಿನಮ್ಮ ಕಳೆದ ತಿಂಗಳು 31 ರಂದು ಕೆಲಸಕ್ಕೆ ತಡವಾಗಿ ಬಂದಾಗ ಸಿಟ್ಟಿಗೆದ್ದ ಚಾಲಕ ಮಂಜುನಾಥ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಲ್ಲದೆ ಕೆಲಸಕ್ಕೆ ಬರಬಾರದೆಂದು ಬೆದರಿಕೆಯೊಡ್ಡಿದ್ದಾನೆ. ಈ ಸಂಬಂಧ ಸೋಮವಾರ ದೂರು ದಾಖಲಾಗಿದ್ದು ಮಂಜುನಾಥನನ್ನು ಠಾಣೆಗೆ ಕರೆಸಿ ನಂತರ ಮಧ್ಯರಾತ್ರಿ ಬಿಟ್ಟಿರುವುದು ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಹಾಗಾಗಿ ಡಿಸಿಆರ್‌ಇ ಇನ್ಸ್‌ಪೆಕ್ಟರ್

ಜಯನಾಯ್ಕರನ್ನು ಅಮಾನತ್ತುಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಭಾರತೀಯ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬೀರಾವರ ಪ್ರಕಾಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ವಿಶ್ವ ನಾರಾಯಣಮೂರ್ತಿ, ದಾವಣಗೆರೆ ಜಿಲ್ಲೆ ಡಿಎಸ್‍ಎಸ್ ಮುಖಂಡ ಮೈಲಾರಪ್ಪ, ಮುಜಾಹಿದ್, ರಮೇಶ್, ಎಚ್.ವೆಂಕಟೇಶ್, ಚನ್ನಮ್ಮ, ರತ್ನಮ್ಮ,ಗಾಂಧಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.