ಬಸ್‌ ಡಿಕ್ಕಿಯಾಗಿ ಮಹಿಳೆ ಸಾವು: ಚಾಲಕನಿಗೆ ೮ ತಿಂಗಳು ಜೈಲು ಶಿಕ್ಷೆ

| Published : May 11 2025, 11:50 PM IST

ಬಸ್‌ ಡಿಕ್ಕಿಯಾಗಿ ಮಹಿಳೆ ಸಾವು: ಚಾಲಕನಿಗೆ ೮ ತಿಂಗಳು ಜೈಲು ಶಿಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂದೂರ್‌ವೆಲ್‌ ಜಂಕ್ಷನ್‌ನಲ್ಲಿ 2023ರಲ್ಲಿ ಬಸ್‌ ಢಿಕ್ಕಿಯಾಗಿ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಖಾಸಗಿ ಬಸ್‌ ಚಾಲಕನಿಗೆ ಮಂಗಳೂರಿನ ಜೆಎಂಎಫ್‌ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶ ಸುರೇಶ್‌ ಇ.ಎಸ್‌ ಅವರು ಎಂಟು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಬೆಂದೂರ್‌ವೆಲ್‌ ಜಂಕ್ಷನ್‌ನಲ್ಲಿ 2023ರಲ್ಲಿ ಬಸ್‌ ಢಿಕ್ಕಿಯಾಗಿ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಖಾಸಗಿ ಬಸ್‌ ಚಾಲಕನಿಗೆ ಮಂಗಳೂರಿನ ಜೆಎಂಎಫ್‌ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶ ಸುರೇಶ್‌ ಇ.ಎಸ್‌ ಅವರು ಎಂಟು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಐರಿನ್‌ ಡಿ’ಸೋಜಾ(72) ಮೃತಪಟ್ಟ ಮಹಿಳೆ. ವಾಮಂಜೂರಿನ ಎಚ್‌. ಭಾಸ್ಕರ ಶಿಕ್ಷೆಗೊಳಗಾದ ಚಾಲಕ.2023ರ ಮಾ.30ರಂದು ಮಧ್ಯಾಹ್ನ ಐರಿನ್‌ ಡಿ’ಸೋಜಾ ಅವರು ಖಾಸಗಿ ಸಿಟಿ ಬಸ್‌ನಲ್ಲಿ ಬಂದು ಬೆಂದೂರ್‌ವೆಲ್‌ ಜಂಕ್ಷನ್‌ನಲ್ಲಿ ಇಳಿದು ಅದೇ ಬಸ್‌ನ ಮುಂಭಾಗದಿಂದ ರಸ್ತೆಯನ್ನು ದಾಟುತ್ತಿದ್ದರು. ಆಗ ಚಾಲಕ ನಿರ್ಲಕ್ಷ್ಯತನದಿಂದ ಬಸ್‌ ಚಲಾಯಿಸಿ ಐರಿನ್‌ ಡಿ’ಸೋಜಾ ಅವರಿಗೆ ಡಿಕ್ಕಿ ಪಡಿಸಿದ್ದ. ಅವರ ತಲೆಯ ಮೇಲೆ ಬಸ್‌ನ ಚಕ್ರ ಹರಿದು ಹೋಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಬಸ್‌ ಚಾಲಕ ಬಸ್‌ ನಿಲ್ಲಿಸದೇ ಬಸ್‌ನೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಧೀಶರು ಮೇ 5ರಂದು ಆರೋಪಿ ಚಾಲಕ ಭಾಸ್ಕರನಿಗೆ 8 ತಿಂಗಳು ಜೈಲುವಾಸ ಹಾಗೂ 27,000 ರು. ದಂಡ ವಿಧಿಸಿ ಆದೇಶ ನೀಡಿದ್ದಾರೆ.ಬಸ್‌ ನಿರ್ವಾಹಕ ಎರಡನೇ ಆರೋಪಿ ಮೊಹಮ್ಮದ್‌ ಮುಸ್ತಾಫ ‘ನಿರ್ವಾಹಕ ಪರವಾನಗಿ’ ಇಲ್ಲದೆ ಕರ್ತವ್ಯ ನಿರ್ವಹಿಸಿರುವುದಕ್ಕಾಗಿ 10,000 ರು. ದಂಡ ಹಾಗೂ ‘ನಿರ್ವಾಹಕ ಪರವಾನಗಿ’ ಇಲ್ಲದೆ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ 3ನೇ ಆರೋಪಿ ಬಸ್‌ ಮಾಲೀಕ ಸಂತೋಷ್‌ ಅರುಣ್‌ ಮೆನೇಜಸ್‌ನಿಗೆ 5,000 ರು. ದಂಡ ವಿಧಿಸಿ ಆದೇಶ ನೀಡಿದ್ದಾರೆ.ಸಂಚಾರ ಪೂರ್ವ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ನಾಗರಾಜ್‌ ಅವರು ತನಿಖೆ ನಡೆಸಿ ಪೊಲೀಸ್‌ ನಿರೀಕ್ಷಕ ಗೋಪಾಲಕೃಷ್ಣ ಭಟ್‌ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಗೀತಾ ರೈ ಸಾಕ್ಷಿದಾರರನ್ನು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.ಈ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳನ್ನು ನ್ಯಾಯಾಲಯ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ ಅಂತಿಮ ತೀರ್ಪು ನೀಡಿದೆ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.