ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿದು ಮಹಿಳೆ ಸಾವು, ಬದುಕುಳಿದ ಮಗು

| Published : Jul 20 2024, 12:59 AM IST

ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿದು ಮಹಿಳೆ ಸಾವು, ಬದುಕುಳಿದ ಮಗು
Share this Article
  • FB
  • TW
  • Linkdin
  • Email

ಸಾರಾಂಶ

ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಮೃತ ದೇಹವನ್ನು ಹೊರ ತೆಗೆಯಲು ಗ್ರಾಮಸ್ಥರು ಹರಸಾಹಸ ಪಡಬೇಕಾಯಿತು.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಕಳೆದ ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತಿರುವ ಕಾರಣ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದ್ದು, ಆಕೆಯ ಕೈಯಲ್ಲಿದ್ದ ಮಗು ಪ್ರಾಣಪಾಯದಿಂದ ಪಾರಾಗಿದೆ.

ತಾಲೂಕಿನ ರಾವಂದೂರು ಹೋಬಳಿ ಕಗ್ಗುಂಡಿ ಗ್ರಾಮದ ಶಿವರಾಜ್ ಎಂಬವರ ಪತ್ನಿ ಹೇಮಾವತಿ (22) ಮೃತಪಟ್ಟವರು.

ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಮೃತ ದೇಹವನ್ನು ಹೊರ ತೆಗೆಯಲು ಗ್ರಾಮಸ್ಥರು ಹರಸಾಹಸ ಪಡಬೇಕಾಯಿತು. ಕಳೆದ ಮೂರು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ಹೇಮಾವತಿಗೆ ಎರಡು ವರ್ಷದ ಗಂಡು ಮಗುವಿದ್ದು, ಈ ಮಗುವನ್ನು ಶೌಚಾಲಯಕ್ಕೆ ಕರೆದುಕೊಂಡು ಹೋದಾಗ ಶೌಚಾಲಯದ ಪಕ್ಕದಲ್ಲಿದ್ದ ಶೀಥಿಲಾವಸ್ಥೆಯಲ್ಲಿದ್ದ ಬ್ಯಾರೆನ್ ಮನೆಯ ಗೋಡೆ ಕುಸಿದಿದೆ.

ಗೋಡೆ ಬಿದ್ದ ಶಬ್ದ ಕೇಳಿಸಿಕೊಂಡು ಮನೆಯಲ್ಲಿದ್ದ ಆಕೆಯ ಪತಿ ಶಿವರಾಜ್ ಹೊರ ಬಂದು ನೋಡಿದಾಗ ಹೇಮಾವತಿ ಮೇಲೆ ಗೋಡೆ ಕುಸಿದು ಬಿದ್ದಿತ್ತು, ನಂತರ ಮಗು ಸ್ವಲ್ಪ ಹತ್ತಿರದಲ್ಲೇ ನಿಂತಿತು ಎಂದು ಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೇರೆದಿರುವ ಹೇಮಾವತಿ

ಶೌಚಾಲಯದಿಂದ ಬರುವಾಗ ಗೋಡೆ ಕುಸಿಯುವುದನ್ನು ಗಮನಿಸಿದ ಹೇಮಾವತಿ ತನ್ನ ತೋಳಿನಲ್ಲಿದ್ದ ಮಗುವನ್ನ ಹೊರದೂಡಿ ಮಗುವಿನ ಪ್ರಾಣಪಾಯದಿಂದ ಪಾರು ಮಾಡಿ ತಾನು ಸಿಲುಕಿಕೊಂಡಿದ್ದಾರೆ ಎಂದು ಗ್ರಾಮಸ್ಥರೆಲ್ಲರೂ ಉಹಿಸಿದ್ದಾರೆ.

ತಾಲೂಕು ತಹಸೀಲ್ದಾರ್ ಎನ್.ಎ ಕುಂಜ್ಞಿ ಅಹಮದ್, ಉಪ ತಹಸೀಲ್ದಾರ್ ಗಳಾದ ವಿನೋದ್. ಶೋಭಾ, ರವಿನ್ಯು ಇನ್ಸ್ಪೆಕ್ಟರ್ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪಿರಿಯಾಪಟ್ಟಣ ಪೊಲೀಸ್ ನಿರೀಕ್ಷಕ ರಾಘವೇಂದ್ರ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.