ರಿಕ್ಷಾ ಪಲ್ಟಿಯಾಗಿ ಮಹಿಳೆ ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ

| Published : Oct 26 2025, 02:00 AM IST

ಸಾರಾಂಶ

ರಿಕ್ಷಾ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ಶಿಗ್ಗಾಂವಿಯ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-೪೮ರ ರಾಜಸ್ಥಾನ ದಾಬಾ ಬಳಿ ನಡೆದಿದೆ.

ಶಿಗ್ಗಾಂವಿ: ರಿಕ್ಷಾ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ಶಿಗ್ಗಾಂವಿಯ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-೪೮ರ ರಾಜಸ್ಥಾನ ದಾಬಾ ಬಳಿ ನಡೆದಿದೆ.

ತಾಲೂಕಿನ ಮುಗಳಿ ಗ್ರಾಮದ ಸರೋಜಾ ವಿರೂಪಾಕ್ಷಪ್ಪ ಕಾಮನಹಳ್ಳಿ (೩೫) ಸ್ಥಳದಲ್ಲೇ ಮೃತಪಟ್ಟ ಮಹಿಳೆ. ಶೋಭಾ ಪಾಟೀಲ, ಶೈಲಾ ಹೊಸಮನಿ, ರೇವತಿ ಹೂವಣ್ಣನವರ, ಕವಿತಾ ಈಶಗಪ್ಪನವರ, ಚಾಲಕ ಶಿವರಾಜ ಯಲಿವಾಳ ಗಾಯಗೊಂಡಿದ್ದಾರೆ. ಗಾಯಾಳುಗಳು ಮುಗಳಿ ಮತ್ತು ಶಿಗ್ಗಾಂವಿ ಪಟ್ಟಣಕ್ಕೆ ಸೇರಿದವರಾಗಿದ್ದಾರೆ. ಶುಕ್ರವಾರ ಸಾಯಂಕಾಲ ಬಂಕಾಪುರದ ಶಾಹೀನ್ ಗಾರ್ಮೆಂಟ್ಸಗೆ ಕೆಲಸಕ್ಕೆ ತೆರಳಿದ್ದ ಮಹಿಳೆಯರೆಲ್ಲರೂ ವಾಪಸ್ ಮುಗಳಿ ಗ್ರಾಮಕ್ಕೆ ತೆರಳುವ ವೇಳೆ ಮಳೆ ಬಂದಿರುವ ಕಾರಣದಿಂದ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ರಿಕ್ಷಾಪಲ್ಟಿಯಾಗಿ ದುರ್ಘಟನೆ ಜರುಗಿದೆ.

ಮೃತ ಮಹಿಳೆ ಕುಟುಂಬಕ್ಕೆ ಸಾಂತ್ವನ: ಶಾಸಕ ಯಾಸೀರಖಾನ್ ಪಠಾಣ ಸಹೋದರ, ಕಾಂಗ್ರೆಸ್ ಮುಖಂಡ ಮುನ್ನಾ ಪಠಾಣ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಎಸ್.ಎಫ್. ಮಣಕಟ್ಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಅಲ್ಲದೇ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿದರು.

ದುರ್ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಹೆಚ್ಚಿನ ಚಿಕಿತ್ಸೆ ಅವಶ್ಯವಿರುವ ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸನಲ್ಲಿ ಚಿಕಿತ್ಸೆ ಕೊಡಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಚಾಲಕರು ಜವಾಬ್ದಾರಿ ಮರೆಯದೇ ರಸ್ತೆ ಸುರಕ್ಷತಾ ಕ್ರಮ ಪಾಲಿಸಬೇಕು ಎಂದು ಶಿಗ್ಗಾಂವಿ ಬಿಜೆಪಿ ಮುಖಂಡ ಭರತ ಬೊಮ್ಮಾಯಿ ಹೇಳಿದರು.