ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಸಿ. ಹಾಗೂ ಚಾಲಕ ಕೆಂಚೇಶ್ ಇ.ಎನ್. ಅವರು ಪರಿಸ್ಥಿತಿಯನ್ನು ಅತ್ಯಂತ ತಾಳ್ಮೆಯಿಂದ ನಿಭಾಯಿಸಿ, ವಾಹನದಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು.

ಮುಂಡಗೋಡ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ೧೦೮ ಆ್ಯಂಬುಲೆನ್ಸ್‌ನಲ್ಲಿಯೇ ಯಶಸ್ವಿಯಾಗಿ ಹೆರಿಗೆಯನ್ನು ಸಿಬ್ಬಂದಿ ಮಾಡಿಸಿದ್ದಾರೆ.

ತಾಲೂಕಿನ ಕೆಂದಲಗೇರಿ ಗ್ರಾಮದ ನಿವಾಸಿ ನಿಖಿತಾ ಕಲ್ಮಶ ದಳವಿ(೨೦) ಅವರಿಗೆ ಭಾನುವಾರ ಬೆಳಗಿನ ಜಾವ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮದ ಆಶಾ ಕಾರ್ಯಕರ್ತೆ ಸುಜಾತಾ ಅವರು ೧೦೮ ತುರ್ತು ಆರೋಗ್ಯ ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮುಂಡಗೋಡ ೧೦೮ ಆ್ಯಂಬುಲೆನ್ಸ್ ಸಿಬ್ಬಂದಿ ಗರ್ಭಿಣಿಯನ್ನು ವಾಹನಗಲ್ಲಿ ಆಸ್ಪತ್ರೆಗೆ ಕರೆ ತರುವಾಗ ಮಾರ್ಗಮಧ್ಯೆ ನಿಖಿತಾ ಅವರಿಗೆ ಹೆರಿಗೆ ನೋವು ತೀವ್ರಗೊಂಡಿದೆ. ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರಿತ ಸಿಬ್ಬಂದಿ, ಆ್ಯಂಬುಲೆನ್ಸ್‌ಅನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿದರು.

ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಸಿ. ಹಾಗೂ ಚಾಲಕ ಕೆಂಚೇಶ್ ಇ.ಎನ್. ಅವರು ಪರಿಸ್ಥಿತಿಯನ್ನು ಅತ್ಯಂತ ತಾಳ್ಮೆಯಿಂದ ನಿಭಾಯಿಸಿ, ವಾಹನದಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ನಿಖಿತಾ ಅವರು ಆರೋಗ್ಯವಂತ ಗಂಡುಮಗುವಿಗೆ ಜನ್ಮ ನೀಡಿದ್ದು, ತಾಯಿ- ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಯಶಸ್ವಿ ಹೆರಿಗೆಯ ಬಳಿಕ ಇಬ್ಬರನ್ನೂ ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ನಿಖಿತಾ ಅವರಿಗೆ ಇದು ಮೊದಲ ಹೆರಿಗೆಯಾಗಿದೆ.26ರಂದು ವಾಹನಗಳ ಬಹಿರಂಗ ಹರಾಜು

ದಾಂಡೇಲಿ: ಮೋಟಾರು ವಾಹನ ತೆರಿಗೆ ಕಾಯ್ದೆಯ ಪ್ರಕಾರ ತೆರಿಗೆ ಸಂದಾಯ ಮಾಡದಿರುವ ಕಾರಣ ಮುಟ್ಟುಗೋಲು ಹಾಕಿದ ವಾಹನಳಗಳ ಬಹಿರಂಗ ಹರಾಜನ್ನು ನ. 26ರಂದು ಮಧ್ಯಾಹ್ನ 3.30 ಗಂಟೆಗೆ ಎಆರ್‌ಟಿಒ ಕಚೇರಿಯಲ್ಲಿ ಮಾಡಲಾಗುವುದು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಕರ್ನಾಟಕ ಮೋಟಾರು ವಾಹನ ತೆರಿಗೆ ನಿಯಮ 72ಎ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳಗಿದ್ದು, ವಾಹನಗಳನ್ನು ಹಾಲಿ ಇರುವ ಸ್ಥಿತಿಯಲ್ಲಿಯೆ ಬಹಿರಂಗ ಹರಾಜು ಹಾಕಿ ಸರ್ಕಾರಕ್ಕೆ ಬರಬೇಕಾದ ಬಾಕಿ ತೆರಿಗೆಯನ್ನು ಸಂಗ್ರಹಿಸಲಾಗುವುದು. ನ. 26ರಂದು ನಡೆಯಲಿರುವ ಬಹಿರಂಗ ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ವಿನಂತಿಸಿದ್ದಾರೆ.