ಕೆ.ಆರ್.ಪೇಟೆ: ಕಳೆದ 15 ದಿನಗಳ ಹಿಂದೆ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ವೇಳೆ ಹುಚ್ಚು ನಾಯಿ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ರಂಗೇಗೌಡನಕೊಪ್ಪಲು ಗ್ರಾಮದ ರೈತ ಮಹಿಳೆ ಸಾಕಮ್ಮ ಮೃತಪಟ್ಟವರು. ಕಳೆದ 15 ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಾಕಮ್ಮರಿಗೆ ನಾಯಿ ಏಕಾಏಕಿ ದಾಳಿ ಮಾಡಿ ಮುಖ, ಕುತ್ತಿಗೆ ಭಾಗವನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿತ್ತು. ಸ್ಥಳೀಯರ ನೆರವಿನಿಂದ ಕುಟುಂಬಸ್ಥರು ಅವರನ್ನು ತಕ್ಷಣವೇ ಪಟ್ಟಣದ ಶ್ರೀಮತಿ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾಕಮ್ಮ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.