ಕೌಟುಂಬಿಕ ಕಲಹದ ಹಿನ್ನೆಲೆ ಮೂವರು ಮಕ್ಕಳೊಂದಿಗೆ ಸೋಮವಾರ ರಾತ್ರಿ ತುಂಗಾ ನದಿಗೆ ಹಾರಿದ ಮಹಿಳೆ ಹಾಗೂ 11 ತಿಂಗಳ ಮಗವನ್ನು ರಕ್ಷಿಸಲಾಗಿದ್ದು, ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು ಹೆಣ್ಣು ಮಕ್ಕಳು ಇನ್ನೂ ಸಿಕ್ಕಿಲ್ಲ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೌಟುಂಬಿಕ ಕಲಹದ ಹಿನ್ನೆಲೆ ಮೂವರು ಮಕ್ಕಳೊಂದಿಗೆ ಸೋಮವಾರ ರಾತ್ರಿ ತುಂಗಾ ನದಿಗೆ ಹಾರಿದ ಮಹಿಳೆ ಹಾಗೂ 11 ತಿಂಗಳ ಮಗವನ್ನು ರಕ್ಷಿಸಲಾಗಿದ್ದು, ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು ಹೆಣ್ಣು ಮಕ್ಕಳು ಇನ್ನೂ ಸಿಕ್ಕಿಲ್ಲ. ಅವರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ 7.15ರ ಸುಮಾರಿಗೆ ರೈಲ್ವೆ ಸೇತುವೆ ಮೇಲಿಂದ ಮೊದಲು ಇಬ್ಬರು ಮಕ್ಕಳನ್ನು ನದಿಗೆ ತಳ್ಳಿದ್ದು, ನಂತರ 11 ತಿಂಗಳ ಗಂಡು ಮಗುವಿನೊಂದಿಗೆ ತಬ್ಬಿಕೊಂಡು ಮಹಿಳೆ ನದಿಗೆ ಜಿಗಿದಿದ್ದಾಳೆ. ಆದರೆ, ತಾಯಿ ಹಾಗೂ ಮಗುವಿನ ಪ್ರಾಣ ಉಳಿದಿದ್ದು, ಇನ್ನಿಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸಾನ್ವಿಕಾ (6) ಹಾಗೂ ತನ್ವಿಕಾ (4) ಎಂಬ ಇಬ್ಬರು ಮಕ್ಕಳಿಗಾಗಿ ಮಂಗಳವಾರ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ತೀವ್ರ ಶೋಧ ಕಾರ್ಯ ಮುಂದುವರಿದಿದೆ.ಸ್ಥಳೀಯರು ಇದಕ್ಕೆ ಸಹಕಾರಿಯಾಗಿದ್ದು, ತೆಪ್ಪದ ಮೂಲಕ ಅವರು ಕೂಡ ಮಕ್ಕಳನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಆದರೆ ಕತ್ತಲಾಗಿದ್ದರಿಂದ ಇಬ್ಬರು ಹೆಣ್ಣು ಮಕ್ಕಳನ್ನು ಸೋಮವಾರ ರಾತ್ರಿ ಪತ್ತೆ ಮಾಡಲು ಸಾಧ್ಯವಾಗಲಿಲ್ಲ.
ತಾಯಿ-ಮಗು ಸುರಕ್ಷಿತ: ಮಹಿಳೆ ಇಬ್ಬರು ಮಕ್ಕಳನ್ನು ನದಿಯ ಮಧ್ಯಕ್ಕೆ ತಳ್ಳಿ, 11 ತಿಂಗಳ ಮಗುವನ್ನು ತಬ್ಬಿಕೊಂಡು ನದಿ ದಡದ ಭಾಗಕ್ಕೆ ಜಿಗಿದಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಯುವಕರು ಕೂಡಲೇ ನದಿಗೆ ಹಾರಿ ಇಬ್ಬರನ್ನು ರಕ್ಷಿಸಿದ್ದು, ಮಗುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮತ್ತು ಮಗು ಕ್ಷೇಮವಾಗಿದ್ದಾರೆ. ಯುವಕರ ಸಮಯ ಪ್ರಜ್ಞೆಯಿಂದ ಎರಡು ಜೀವ ಉಳಿದಿದೆ.ಸ್ಥಳೀಯರಾದ ದಾದಾಪೀರ್ ಹಾಗೂ ನವೀನ್ ಘಟನೆ ನಡೆದ ಸ್ಥಳದ ಸಮೀಪ ಇದ್ದರು. ಈ ಘಟನೆ ಕಂಡ ಕೂಡಲೇ ಯಾವುದೇ ಮೀನಾಮೇಷ ಎಣಿಸದೆ ಹಾಗೂ ತಮ್ಮ ಜೀವವನ್ನು ಲೆಕ್ಕಿಸದೆ ತಾಯಿ-ಮಕ್ಕಳನ್ನು ರಕ್ಷಣೆ ಮಾಡಲು ನದಿಗೆ ಹಾರಿದ್ದಾರೆ. ತಮ್ಮ ಪ್ರಯತ್ನದ ಫಲವಾಗಿ ತಾಯಿ-ಮಗುವನ್ನು ರಕ್ಷಿಸಲು ಸಫಲರಾಗಿದ್ದು, ಈ ಸಾಹಸಕ್ಕೆ ಸಾರ್ವಜನಿಕರು ಹಾಗೂ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಮಕ್ಕಳ ಕಾಪಾಡಿ ಎಂದು ತಾಯಿ ಅಳಲು
ಚಿತ್ರದುರ್ಗದ ಹೊಸೂರು ಗ್ರಾಮದ ನಿವಾಸಿ ಭವಾನಿ ತನ್ನ ಕುಟುಂಬದೊಂದಿಗೆ ಸವಳಂಗದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸಂಜೆ ಗಂಡನೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಬಂದಿದ್ದು, ರೈಲ್ವೆ ಸೇತುವೆಯ ಮೇಲಿಂದ 6 ವರ್ಷ, 4 ವರ್ಷ ಹಾಗೂ 11ತಿಂಗಳ ಮಗುವಿನೊಂದಿಗೆ ನದಿಗೆ ಹಾರಿದ್ದಾಳೆ. ಕೂಡಲೇ ಚಿಕ್ಕಲ್‌ನ ನವೀನ್ ಮತ್ತು ದಾದಾಪೀರ್ ಧಾವಿಸಿ ಮಗು ಹಾಗೂ ತಾಯಿಯನ್ನು ರಕ್ಷಿಸಿದ್ದಾರೆ. ಆದರೆ ಇನ್ನಿಬ್ಬರು ಮಕ್ಕಳನ್ನು ಕಾಪಾಡಿ ಎಂದು ತಾಯಿ ಭವಾನಿ ಅಂಗಲಾಚಿದ್ದು, ಈಕೆಯ ಈ ನಿರ್ಧಾರಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲಸಕ್ಕೆ ಬಂದಿದ್ದ ಕುಟುಂಬ
ಜೆಸಿಬಿ ಮತ್ತು ಲಾರಿ ಡ್ರೈವರ್ ಆಗಿದ್ದ ದುರ್ಗಪ್ಪ ತನ್ನ ಕುಟುಂಬ ಸಮೇತ ಕಳೆದ 4 ತಿಂಗಳ ಹಿಂದೆ ಸವಳಂಗಕ್ಕೆ ಕೆಲಸಕ್ಕೆ ಬಂದಿದ್ದು, ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ರಾತ್ರಿ ನಡೆದ ಸಣ್ಣ ಜಗಳಕ್ಕೆ ಹೆಂಡತಿ ಭವಾನಿ ಸಾಯುವುದಾಗಿ ಹೇಳಿ ನದಿಗೆ ಹಾರಿದ್ದಾಳೆ. ಈ ಘಟನೆ ತಿಳಿದು ದುರ್ಗಪ್ಪ ಆತಂಕಕ್ಕೊಳಗಾಗಿದ್ದು, ಮಕ್ಕಳನ್ನು ಪತ್ತೆ ಹಚ್ಚುವಂತೆ ಅಂಗಲಾಚುತ್ತಿದ್ದಾನೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಅರಕೇಶ್ವರ ಸ್ವಾಮಿ ದೇವಾಲಯದ ಬಳಿ ದುರ್ಗಪ್ಪ ಅಳಲು ತೋಡಿಕೊಂಡಿದ್ದಾನೆ. ಮಕ್ಕಳನ್ನು ಪತ್ತೆ ಮಾಡಲು ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ನಿರಂತರ ಪ್ರಯತ್ನದಲ್ಲಿದ್ದು, ತುಂಗಾ ನದಿಯ ದಡದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.---
ಮೊದಲು ಇಬ್ಬರು ಮಕ್ಕಳನ್ನು ಮೇಲಿಂದ ನದಿಯ ಮಧ್ಯಕ್ಕೆ ತಳ್ಳಿದ್ದಾಳೆ, ನಂತರ ಇನ್ನೊಂದು ಮಗುವನ್ನು ತಬ್ಬಿಕೊಂಡು ಜಿಗಿದಿದ್ದಾಳೆ. ನಾನು ಹಾಗೂ ದಾದಾಪೀರ್ ಕೂಡಲೇ ನದಿಗೆ ಧುಮುಕಿ ತಾಯಿ ಮತ್ತು ಮಗುವನ್ನು ಕಾಪಾಡಿದೆವು. ಆದರೆ ನೋವಿನ ಸಂಗತಿ ಎಂದರೆ ಇನ್ನಿಬ್ಬರು ಮಕ್ಕಳನ್ನು ನಮ್ಮ ಕೈಯಲ್ಲಿ ಉಳಿಸಲು ಸಾಧ್ಯವಾಗಲಿಲ್ಲ.- ನವೀನ್, ಸ್ಥಳೀಯ.