ಸಾರಾಂಶ
ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದು ಸುಟ್ಟು ಹಾಕಿ ಕುಟುಂಬದೊಂದಿಗೆ ಸಂಭ್ರಮದಿಂದ ನಾಗರ ಪಂಚಮಿ ಆಚರಿಸಿದ್ದ ಮಹಿಳೆ ಹಾಗೂ ಅವಳ ಪ್ರಿಯಕರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಪ್ಪಳ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದು ಸುಟ್ಟು ಹಾಕಿ ಕುಟುಂಬದೊಂದಿಗೆ ಸಂಭ್ರಮದಿಂದ ನಾಗರ ಪಂಚಮಿ ಆಚರಿಸಿದ್ದ ಮಹಿಳೆ ಹಾಗೂ ಅವಳ ಪ್ರಿಯಕರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕುಕನಪಳ್ಳಿ ಗ್ರಾಮದ ಹೊರವಲಯದಲ್ಲಿ ಬೂದಗುಂಪಾ ಗ್ರಾಮದ ನಿವಾಸಿ ದ್ಯಾಮಣ್ಣ ಧರ್ಮಪ್ಪ ವಜ್ರಬಂಡಿ (38) ಹತ್ಯೆಯಾದ ವ್ಯಕ್ತಿ.
ಈ ಘಟನೆಗೆ ಸಂಬಂಧಿಸಿದಂತೆ ಮೃತನ ಪತ್ನಿ ನೇತ್ರಾವತಿ ವಜ್ರಬಂಡಿ ಹಾಗೂ ಅವಳ ಪ್ರಿಯಕರ ಕಾಮನೂರು ಗ್ರಾಮದ ಸೋಮಪ್ಪ ಕುರುಬಡಗಿ ಅವರನ್ನು ಬಂಧಿಸಲಾಗಿದೆ.
ಮದುವೆಯಾಗಿ 14 ವರ್ಷವಾಗಿದ್ದರೂ ಹಳೆಯ ಪ್ರಿಯಕರನೊಂದಿಗೆ ನೇತ್ರಾವತಿ ಸಂಪರ್ಕದಲ್ಲಿ ಇದ್ದಳು. ದ್ಯಾಮಣ್ಣ ಅವರನ್ನು ಜು.25ರಂದು ಕೊಂದು ಸುಟ್ಟು ಹಾಕಲಾಗಿತ್ತು.
ಪೂರ್ಣ ಸುಟ್ಟು ಕರಕಲಾಗಿದ್ದರಿಂದ ಮೃತದೇಹದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ, ಅನಾಮಧೇಯ ಶವವೆಂದು ಪರಿಗಣಿಸಿ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ಮಾಹಿತಿ ಕಲೆಹಾಕಲು ಪೊಲೀಸರು ಸುತ್ತಮುತ್ತಲ ಜಿಲ್ಲೆಯಲ್ಲಿಯೂ ತಡಕಾಡಿದ್ದರು.
ಆದರೆ, ಪತಿ ಕೊಂದಿದ್ದ ಪತ್ನಿ ನೇತ್ರಾವತಿ ಮನೆಯಲ್ಲಿ ಎಲ್ಲರೊಂದಿಗೆ ಪಂಚಮಿ ಆಚರಿಸಿದ್ದರಲ್ಲದೆ ತನಗೇನು ಗೊತ್ತೇ ಇಲ್ಲ ಎನ್ನುವಂತೆ ಇದ್ದಳು. ತನ್ನ ಪತಿಯ ಮಾಹಿತಿ ಕೇಳಿದರೆ ಅವರು ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ಹೇಳುತ್ತಿದ್ದಳು. ವಾರ ಕಳೆದರೂ ಬಾರದೆ ಇದ್ದಾಗ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಇದರ ಜಾಡು ಹಿಡಿದು ಬೆನ್ನುಹತ್ತಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈಗ ಇಬ್ಬರು ಆರೋಪಿಗಳನ್ನು ಜೈಲಿಗೆ ಅಟ್ಟಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತಕುಮಾರ ಆರ್., ಡಿವೈಎಸ್‌ಪಿ ಮುತ್ತಣ್ಣ ಸವರಗೋಳ, ಸಿಪಿಐ ಸುರೇಶ ಡಿ., ಪಿಎಸ್‌ಐ ಸುನಿಲ್ ಅವರನ್ನೊಳಗೊಂಡ ತಂಡಳ ಈ ಪ್ರಕರಣ ಭೇದಿಸಿದೆ.