ಮಹಾಂತೇಶನೇ ಪ್ರಿಯಾಂಕಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ಪ್ರಿಯಾಂಕಾ ಶವವನ್ನು ನೀರಿನ ಸಂಪ್‌ಗೆ ಹಾಕಿ, ನೀರು ತರಲು ಹೋಗಿ ಬಿದ್ದು ಸಹಜ ಸಾವಾಗಿದೆ ಎಂದು ಪ್ರಕರಣ ಮುಚ್ಚಿ ಹಾಕಲು ಗಂಡನ ಮನೆಯವರು ಸಂಚು ರೂಪಿಸಿದ್ದರು ಎಂದು ದೂರಲಾಗಿದೆ.

ಶಿರಹಟ್ಟಿ: ತಾಲೂಕಿನ ಮಜ್ಜೂರ ತಾಂಡಾದಲ್ಲಿ ಮಂಗಳವಾರ ರಾತ್ರಿ ಮಹಿಳೆಯೊಬ್ಬರು ನೀರಿನ ಸಂಪ್‌ಗೆ ಬಿದ್ದು ಸಾವಿಗೀಡಾಗಿದ್ದು, ವರದಕ್ಷಿಣೆ ಕಿರುಕುಳ ನೀಡಿ ಪತಿ ಹಾಗೂ ಆತನ ಕುಟುಂಬದವರೇ ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಸಂಬಂಧಿಕರು ದೂರು ದಾಖಲಿಸಿದ್ದಾರೆ.

ಪ್ರಿಯಾಂಕಾ ಲಮಾಣಿ(೨೨) ಎಂಬವರೇ ಮೃತಪಟ್ಟ ಮಹಿಳೆ. ಕಳೆದ ೬ ತಿಂಗಳ ಹಿಂದೆ ತಾಲೂಕಿನ ಮಜ್ಜೂರ ತಾಂಡಾದ ಮಹಾಂತೇಶ ಲಮಾಣಿ ಎಂಬವರ ಜತೆ ಪ್ರಿಯಾಂಕಾ ಮದುವೆಯಾಗಿತ್ತು. ಆದರೆ ಪತಿ ಮಹಾಂತೇಶ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಗಂಡನ ಕಿರುಕುಳಕ್ಕೆ ಪ್ರಿಯಾಂಕಾ ಬೇಸತ್ತಿದ್ದಳು. ಮಹಾಂತೇಶನೇ ಪ್ರಿಯಾಂಕಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ಪ್ರಿಯಾಂಕಾ ಶವವನ್ನು ನೀರಿನ ಸಂಪ್‌ಗೆ ಹಾಕಿ, ನೀರು ತರಲು ಹೋಗಿ ಬಿದ್ದು ಸಹಜ ಸಾವಾಗಿದೆ ಎಂದು ಪ್ರಕರಣ ಮುಚ್ಚಿ ಹಾಕಲು ಗಂಡನ ಮನೆಯವರು ಸಂಚು ರೂಪಿಸಿದ್ದರು ಎಂದು ದೂರಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಿಯಾಂಕಾಳ ಪತಿ ವರದಕ್ಷಿಣೆ ಕಿರುಕುಳ ನೀಡಿ ಹೊಡೆದು ಹಾಕಿದ್ದಾನೆ. ಇದು ಕೊಲೆ ಎಂದು ಮಹಿಳೆಯ ಕುಟುಂಬಸ್ಥರು ದೂರು ನೀಡಿದ್ದರಿಂದ ಮಹಾಂತೇಶ ಆತನ ತಂದೆ ಹನುಮಂತಪ್ಪ, ತಾಯಿ ಲಕ್ಷ್ಮವ್ವ ಹಾಗೂ ಸಂಬಂಧಿಕರಾದ ಸೋನವ್ವ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶಿರಹಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಈರಪ್ಪ ರಿತ್ತಿ ತಿಳಿಸಿದ್ದಾರೆ. ಶಿರಹಟ್ಟಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂಜಾಟ ನಿಷೇಧಿಸಲು ಎಸ್ಪಿಗೆ ಮನವಿ

ಗದಗ: ಇಸ್ಪೀಟ್ ಜೂಜಾಟ ನಿಷೇಧಿಸುವಂತೆ ಒತ್ತಾಯಿಸಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಜಿಲ್ಲಾ ಘಟಕದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಕಾರ್ಯದರ್ಶಿ ಮಂಜುನಾಥ ಹದ್ದಣ್ಣವರ ಮಾತನಾಡಿ, ಜಿಲ್ಲಾದ್ಯಂತ ದೀಪಾವಳಿಯ ಹಬ್ಬದ ನೆಪದಲ್ಲಿ ಎಲ್ಲ ಅಂಗಡಿ ಮನೆ ಹಾಗೂ ಫುಟ್‌ಪಾತ್‌ನಲ್ಲಿ ಪೆಂಡಾಲ್ ಹಾಕಿ, ಸುತ್ತಲೂ ಪರದೆ ಕಟ್ಟಿ ರಾಜಾರೋಷವಾಗಿ ಇಸ್ಪೀಟ್ ಜೂಜಾಟ ಯಾರ ಭಯವಿಲ್ಲದೇ ಲೀಲಾಜಾಲವಾಗಿ ನಡೆಯುತ್ತವೆ.ಬರಗಾಲದ ಪರಿಸ್ಥಿತಿಯಿಂದ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿರುವಾಗ ಇಸ್ಪೀಟ್, ಜೂಜಾಟದಿಂದ ಬಹಳಷ್ಟು ಕುಟುಂಬಗಳು ಹಣ ಕಳೆದುಕೊಳ್ಳುವುದರೊಂದಿಗೆ ಸಾಲ ಮಾಡಿ ಸಮಸ್ಯೆಗಳ ಸುಳಿಗೆ ಸಿಲುಕಿ, ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು, ಮಹಿಳೆಯರ ತಾಳಿಯನ್ನು ಕೂಡಾ ಅಡವಿಟ್ಟು ಜೂಜಾಟವಾಡುತ್ತಿರುವುದರಿಂದ ತಾಯಂದಿರು ಹಾಗೂ ಮಹಿಳೆಯರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಎಲ್ಲರ ಬಾಳಿನಲ್ಲಿ ಬೆಳಕು ಚೆಲ್ಲುವ ದೀಪಾವಳಿ ಹಬ್ಬದ ದಿನವೇ ಸಾವಿರಾರು ಕುಟುಂಬಗಳು ಕಂಗಾಲಾಗಿ ಬೀದಿಗೆ ಬೀಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ಶೈಲೇಂದ್ರ ಶೆಂಬೇಕರ, ಪ್ರಕಾಶ ಬನ್ನಿಗಿಡದ, ಹನುಮಂತ ಪಲದೊಡ್ಡಿ, ಶೇಖಸಾಬ ಕಾತರಕಿ, ಯಾಸೀನಸಾಬ ಬೊದ್ಲೇಖಾನ, ಡಾ. ಸಿ.ಎಸ್. ಹನುಮಂತಗೌಡ್ರ, ಮಂಜುನಾಥ ಆಸಂಗಿ, ಶಂಕರಗೌಡ ಪಾಟೀಲ, ಕಿರಣ ಶೆಂಬೇಕರ, ಸುರಜ ಶೆಂಬೇಕರ, ಈರಣ್ಣಾ ಮಲ್ಲಾಡದ, ಸಾಮಾಜಿಕ ಕಾರ್ಯಕರ್ತರಾದ ಇಬ್ರಾಹಿಮಸಾಬ ದಾವಲಖಾನ, ಮನಸೂರ ಅಹ್ಮದ ಶಿರಹಟ್ಟಿ, ರಾಜೇಸಾಬ ಬೊದ್ಲೇಖಾನ, ಇಸ್ಮಾಯಿಲ್ ಬದಾಮಿ, ಮುಸ್ತಾಕಅಹ್ಮದ ಧಾರವಾಡ, ಹಜರತಸಾಬ ಬಾಗಲಿ ಸೇರಿದಂತೆ ಇತರರು ಇದ್ದರು.