ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದ ರತ್ನವ್ವ ಈಟೆ(40) ಅವರು ಎದೆನೋವಿನ ಸಮಸ್ಯೆಯಿಂದ ಬುಧವಾರ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕುಟುಂಬಸ್ಥರ ಆರೋಪದ ಪ್ರಕಾರ, ಸೂಕ್ತ ಚಿಕಿತ್ಸೆ ನೀಡದೇ ವೈದ್ಯರು ಅವರನ್ನು ಡಿಸ್ಚಾರ್ಜ್ ಮಾಡಿದ್ದರು.
ಗದಗ: ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೆಲ ಸಮಯದಲ್ಲಿಯೇ ಆಸ್ಪತ್ರೆಯ ಅಂಗಳದಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸಿದ್ದು, ಆಸ್ಪತ್ರೆಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದ ರತ್ನವ್ವ ಈಟೆ(40) ಅವರು ಎದೆನೋವಿನ ಸಮಸ್ಯೆಯಿಂದ ಬುಧವಾರ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕುಟುಂಬಸ್ಥರ ಆರೋಪದ ಪ್ರಕಾರ, ಸೂಕ್ತ ಚಿಕಿತ್ಸೆ ನೀಡದೇ ವೈದ್ಯರು ಅವರನ್ನು ಡಿಸ್ಚಾರ್ಜ್ ಮಾಡಿದ್ದರು. ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಕಾರಣ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದ ವೇಳೆ, ಆಸ್ಪತ್ರೆಯ ಅಂಗಳದಲ್ಲೇ ರತ್ನವ್ವ ಕುಸಿದು ಬಿದ್ದು ನರಳಲಾರಂಭಿಸಿದರು.
ಅಂದಾಜು ಒಂದು ಗಂಟೆಗೂ ಹೆಚ್ಚು ಕಾಲ ಅವರು ಅಂಗಳದಲ್ಲೇ ನೋವಿನಿಂದ ಒದ್ದಾಡುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರು ತಕ್ಷಣ ಸ್ಪಂದಿಸಲಿಲ್ಲ. ಆಸ್ಪತ್ರೆ ಆವರಣದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಓಡಾಡುತ್ತಿದ್ದರೂ ರೋಗಿಯ ಸ್ಥಿತಿಯ ಕಡೆ ಗಮನ ಹರಿಸಲಿಲ್ಲ. ಕೊನೆಗೆ ರತ್ನವ್ವ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದರು.ಸಮಯಕ್ಕೆ ವೈದ್ಯರು ಲಭ್ಯವಾಗದಿರುವುದು, ರೋಗಿಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಹಾಗೂ ತುರ್ತು ಚಿಕಿತ್ಸಾ ವ್ಯವಸ್ಥೆಯ ಕೊರತೆ, ಜಿಮ್ಸ್ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಮೃತರ ಸಂಬಂಧಿಕರಾದ ನಾಗರಾಜ ಈಟೆ ಹಾಗೂ ಸ್ಥಳೀಯ ನಿವಾಸಿ ಸಚಿನ ಲಮಾಣಿ ಆಸ್ಪತ್ರೆಯ ನಿರ್ಲಕ್ಷ್ಯವನ್ನು ಖಂಡಿಸಿದ್ದು, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಹಿಳೆಯ ಕುಟುಂಬಸ್ಥರ ಆರೋಪ ಸತ್ಯಕ್ಕೆ ದೂರಮಹಿಳೆ ಸಾವಿಗೆ ಸಂಬಂಧಿಸಿದಂತೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಪ್ರತಿಕ್ರಿಯಿಸಿ, ಮಹಿಳೆಯ ಕುಟುಂಬಸ್ಥರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಮಹಿಳೆಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಆದಾಗ್ಯೂ ಅವರ ಸಾವು ಸಂಭವಿಸಿದೆ ಎಂದಿದ್ದಾರೆ.ಬುಧವಾರ ಜಿಲ್ಲಾ ಆಸ್ಪತ್ರೆಗೆ ಸ್ಕಿನ್ ಸಮಸ್ಯೆ ಇದೆ ಎಂದು ಮಹಿಳೆಯನ್ನು ಕರೆತರಲಾಗಿತ್ತು. ಮಹಿಳೆಯನ್ನು ತಪಾಸಣೆ ನಡೆಸಿದ ನಂತರ ವೈದ್ಯರು ನಾಲ್ಕೈದು ರಕ್ತ ತಪಾಸಣೆ ಮತ್ತು ಸ್ಕ್ಯಾನಿಂಗ್ ಮಾಡಿಸುವಂತೆ ಹೇಳಿದ್ದಾರೆ. ಅವುಗಳನ್ನು ಅವರು ಮಾಡಿಸಿಲ್ಲ.ಅಲ್ಲದೇ ಜಿಲ್ಲಾಸ್ಪತ್ರೆಗೆ ಬರುವ ಮೊದಲೇ ಮಹಿಳೆಯಲ್ಲಿ ಅತಿಯಾದ ಸ್ಟಿರಾಯಿಡ್ ಬಳಕೆ ಮಾಡಿರುವುದು ಪತ್ತೆಯಾಗಿದೆ. ಇದನ್ನು ಮಹಿಳೆಯ ಕುಟುಂಬಸ್ಥರಿಗೆ ತಿಳಿಸಲಾಗಿತ್ತು. ಅದನ್ನು ಕುಟುಂಬಸ್ಥರು ಒಪ್ಪಿಕೊಂಡಿದ್ದರು. ಗುರುವಾರ ಬೆಳಗ್ಗೆ ಕೂಡಾ ಅವರನ್ನು ತಪಾಸಣೆ ಮಾಡಿದಾಗ ಅವರ ಬಿಪಿ ಸಹಜವಾಗಿತ್ತು. ಇದಾದ ನಂತರ ಅವರು ಹೆಚ್ವಿನ ಗಾಳಿ ಬೇಕು ಎಂದು ಅವರೇ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಗೆ ಹೃದಯಾಘಾತವಾಗಿದೆ ಎಂದರು.