ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಅನ್ಯ ಕೋಮಿನ ವ್ಯಕ್ತಿಯೋರ್ವ ಪಟ್ಟಣದ ಕಾಳಮ್ಮ ನಗರದ ಆಶ್ರಯ ಕಾಲನಿ‌ಯ ದಲಿತ ಮಹಿಳೆಯೊಬ್ಬಳನ್ನು ಚಾಕುವಿನಿಂದ ಭೀಕರವಾಗಿ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

 ಯಲ್ಲಾಪುರ : ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಅನ್ಯ ಕೋಮಿನ ವ್ಯಕ್ತಿಯೋರ್ವ ಪಟ್ಟಣದ ಕಾಳಮ್ಮ ನಗರದ ಆಶ್ರಯ ಕಾಲನಿ‌ಯ ದಲಿತ ಮಹಿಳೆಯೊಬ್ಬಳನ್ನು ಚಾಕುವಿನಿಂದ ಭೀಕರವಾಗಿ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ. ಇದರಿಂದ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.

ಆಶ್ರಯ ನಗರದ ನಿವಾಸಿ ರಂಜಿತಾ ಮಲ್ಲಪ್ಪ ಬಸ್ಸೊಡೆ (30) ಮೃತರು.

ಕಾಳಮ್ಮ ನಗರದ ಮಹಮ್ಮದ ರಫಿಕ್ ಇಮಾಮಸಾಬ ಆರೋಪಿ. ಆರೋಪಿ ಮಹಮ್ಮದ್ ರಫಿಕ್ ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾನೆ. ಶೋಧಕ್ಕಾಗಿ ನಾಲ್ಕು ತಂಡ ರಚಿಸಲಾಗಿದೆ.

ವಿವಾಹಿತಳಾದ ಅವಳು ಗಂಡನ ಬಿಟ್ಟು ತವರು ಮನೆಯಲ್ಲಿ ವಾಸ

ರಂಜಿತಾ ರಾಮಾಪುರ ಶಾಲೆಯಲ್ಲಿ ಅಡುಗೆ ಕೆಲಸ‌ ನಿರ್ವಹಿಸುತ್ತಿದ್ದರು. ಈಗಾಗಲೇ ವಿವಾಹಿತಳಾದ ಅವಳು ಗಂಡನನ್ನು ಬಿಟ್ಟು ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಅವಳಿಗೆ ಆರೋಪಿ ಸದಾ ತನ್ನನ್ನು ಮದುವೆಯಾಗು ಎಂದು ಒತ್ತಾಯಿಸುತ್ತಿದ್ದ. ರಂಜಿತಾ‌ ನಿರಾಕರಿಸಿದ ಹಿನ್ನೆಲೆ ಶನಿವಾರ ಮಧ್ಯಾಹ್ನ ಶಾಲೆಯಿಂದ ಬರುತ್ತಿದ್ದಾಗ 2ಗಂಟೆಗೆ ದಾರಿಯಲ್ಲಿ ಅಡ್ಡ ಗಟ್ಟಿ ಕುತ್ತಿಗೆಗೆ ಚಾಕುವಿನಿಂದ ಇರಿದ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಒಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದರು. ಕುತ್ತಿಗೆಯ ಮೂರು ನರಗಳು ತುಂಡಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಪಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯ

ಈ ಘಟನೆಯ ಮಾಹಿತಿ ಹಬ್ಬುತ್ತಿದ್ದಂತೆ ನಾಗರಿಕರು ಠಾಣೆಯ ಎದುರು ಜಮಾಯಿಸಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ. ಅವರಿಗೆ ಒತ್ತಾಯಿಸಿದರು.

ಆರ್‌ಎಸ್ಎಸ್ ಪ್ರಮುಖರಾದ ನಾಗೇಶ ಪಟಗಾರ, ರಾಮು ನಾಯ್ಕ, ಪ್ರಸಾದ ಹೆಗಡೆ, ಶ್ಯಾಮಲಾ ಪಾಟಣಕರ, ನಮಿತಾ ಬೀಡಿಕರ ಅನೇಕರು ಆರೋಪಿಯ ಕುಟುಂಬದವರನ್ನು ಠಾಣೆಗೆ ಕರೆಸುವಂತೆ ಆಗ್ರಹಿಸಿದರು. ಆರೋಪಿ ಮನೆಗೆ ಪೊಲೀಸ್‌ ರಕ್ಷಣೆ ನೀಡಿದ್ದನ್ನು ಖಂಡಿಸಿದರು.

ಕಾಳಮ್ಮ ನಗರದ ಸುತ್ತ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭಧ್ರತೆ ಒದಗಿಸಲಾಗಿದೆ. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮರಕಂಡಿ ನೇತೃತ್ವದಲ್ಲಿ ತಂಡ ರಚಿಸಿದ್ದು ಯಲ್ಲಾಪುರ ಪಿಐ ರಮೇಶ ಹಾನಾಪುರ, ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ ಶೋಧನಾ ತಂಡದಲ್ಲಿ ಇದ್ದಾರೆ. ಮೃತಳ ಸಹೋದರಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

ಶಾಸಕ ಶಿವರಾಮ ಹೆಬ್ಬಾರ ಘಟನೆ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಟಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ನಂತರ ಘಟನೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಇಂದು ಯಲ್ಲಾಪುರ ಬಂದ್‌ಗೆ ಕರೆ

ಮಹಿಳೆಯ ಕೊಲೆ ಖಂಡಿಸಿ ವಿವಿಧ ಹಿಂದೂ ಸಂಘಟನೆಗಳು ಜ.4ರಂದು ಯಲ್ಲಾಪುರ ಬಂದ್‌ಗೆ ಕರೆ ನೀಡಿವೆ.ಬೆಳಗ್ಗೆ 9ಕ್ಕೆ ಬಸವೇಶ್ವರ ಸರ್ಕಲ್ ಬಳಿ ಪ್ರತಿಭಟನೆ ಆರಂಭವಾಗಲಿದ್ದು, ಕೊಲೆ ಮಾಡಿದ ವ್ಯಕ್ತಿಯನ್ನು ಬಂಧಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ. ಎಲ್ಲಾ ಅಂಗಡಿಕಾರರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ನೀಡಬೇಕೆಂದು ವಿ.ಹಿಂ.ಪ ಅಧ್ಯಕ್ಷ ಗಜಾನನ ನಾಯ್ಕ ಮನವಿ ಮಾಡಿದ್ದಾರೆ. ಇನ್ನು ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆ ಸಹ ನಡೆಯುವ ಸಾಧ್ಯತೆ ಇಲ್ಲ.