ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಕಾಡಾನೆಯ ತುಳಿತಕ್ಕೆ ಒಳಗಾಗಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಣಿಯಾರು ಮಲೆ ಎಂಬಲ್ಲಿ ನಡೆದಿದೆ.ಕೊಳ್ತಿಗೆ ಗ್ರಾಮದ ಕನಿಯಾರು ಸಿಆರ್‌ಸಿ ಕಾಲೊನಿ ನಿವಾಸಿ ದಿ. ರಾಜು ಎಂಬವರ ಪತ್ನಿ ಸೆಲ್ಲಮ್ಮ (೬೫) ಮೃತರು. ಕನಿಯಾರು ಮಲೆಯ ಅರ್ತಿಯಡ್ಕ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಸಂದರ್ಭ ಆನೆ ದಾಳಿ ಮಾಡಿತ್ತು. ಸೆಲ್ಲಮ್ಮ ಕನಿಯಾರು ಸಿಆರ್‌ಸಿ ಕಾಲೊನಿಯಲ್ಲಿ ಓರ್ವರೇ ವಾಸವಾಗಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಮುಂಜಾನೆ ಸೆಲ್ಲಮ್ಮ ಸಹಿತ ಮೂವರು ರಬ್ಬರ್ ಟಾಪಿಂಗ್ ಮಾಡಲು ತೆರಳಿದ್ದರು. ಟ್ಯಾಪಿಂಗ್ ಮಾಡುತ್ತಿರುವ ಸಂದರ್ಭ ಕಣಿಯಾರು ಮಲೆ ಎಂಬಲ್ಲಿ ಅವರನ್ನು ಆನೆ ಅಟ್ಟಿಸಿಕೊಂಡು ಬಂದಿತ್ತು. ಇನ್ನಿಬ್ಬರು ಓಡಿ ತಪ್ಪಿಸಿಕೊಂಡರೂ ನತದೃಷ್ಟ ಮಹಿಳೆ ಓಡಲಾಗದೆ ಆಯತಪ್ಪಿ ನೆಲಕ್ಕೆ ಬಿದ್ದಿದ್ದರು. ಆಗ ಆನೆ ಆಕೆಯ ಮುಖ ಮತ್ತು ಹೊಟ್ಟೆಯ ಭಾಗಕ್ಕೆ ತುಳಿದು ಸ್ಥಳದಲ್ಲೇ ಸಾವು ಸಂಭವಿಸಿತು.
ಸೆಲ್ಲಮ್ಮ ಅರ್ತಿಯಡ್ಕ ರಬ್ಬರ್ ತೋಟದಲ್ಲಿ ನಿರಂತರ ಕೆಲಸ ಮಾಡುತ್ತಿದ್ದ ಕಾರ್ಮಿಕನ ಬದಲಿಗೆಂದು ಮಂಗಳವಾರ ಕೆಲಸಕ್ಕೆ ಆಗಮಿಸಿದ್ದರು.ಬೆಳಗ್ಗೆ ಸುಮಾರು ೮.೩೦ರ ವೇಳೆಗೆ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದ್ದು, ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ನೂರಾರು ಜನರು ಆಗಮಿಸಿದ್ದರು. ಶಾಸಕ ಅಶೋಕ್ ಕುಮಾರ್ ರೈ ಸ್ಥಳಕ್ಕೆ ಬಂದು ನಂತರ ಮೃತದೇಹ ಸ್ಥಳದಿಂದ ಎತ್ತಿ ಆಸ್ಪತ್ರೆಗೆ ಸಾಗಿಸಲಾಯಿತು.
ಈ ಸಂದರ್ಭ ಅಲ್ಲಿದ್ದ ರಬ್ಬರ್ ಟಾಪಿಂಗ್ ಕಾರ್ಮಿರು ಶಾಸಕರ ಬಳಿ ಕಾಡಾನೆಯಿಂದ ತಮಗಾಗುತ್ತಿರುವ ನೋವನ್ನು ತೋಡಿಕೊಂಡರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಿದ್ದರೆ ನಾವು ಮುಂದೆ ಒಂದು ವರ್ಷವಾದರೂ ಕೆಲಸಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದರು. ಅವರಿಗೆ ಸಮಾಧಾನ ಮಾಡಿದ ಶಾಸಕರು ಅವರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು ಹಾಗೂ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.೧೦ ದಿನ ಟ್ಯಾಪಿಂಗ್‌ಗೆ ನಿಷೇಧ:
ಕಾಡಾನೆ ದಾಳಿಯ ಹಿನ್ನೆಲೆಯಲ್ಲಿ ಅರ್ತಿಯಡ್ಕ ಪ್ರದೇಶದ ರಬ್ಬರ್ ತೋಟದಲ್ಲಿ ಮುಂದಿನ ಹತ್ತು ದಿನಗಳ ಕಾಲ ರಬ್ಬರ್ ಟ್ಯಾಪಿಂಗ್ ಮಾಡುವುದನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ. ಇಲ್ಲಿನ ಕಾರ್ಮಿಕರಿಗೆ ಬೇರೆಡೆ ಕೆಲಸ ನಿರ್ವಹಣೆಗೆ ಸೂಚನೆ ನೀಡಿದ್ದಾರೆ....................
ಟಾಸ್ಕ್ ಫೋರ್ಸ್ ರಚನೆ, 15 ಲಕ್ಷ ರು. ಪರಿಹಾರ: ಅಶೋಕ್ ರೈಕಾರ್ಮಿಕರ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಲ್ಲಿ ಟಾರ್ಸ್ಕ್ ಫೋರ್ಸ್ ರಚಿಸಲಾಗುವುದು, ರಬ್ಬರ್ ತೋಟದಲ್ಲಿ ಕಾರ್ಮಿಕರು ಬರುವ ಮೊದಲು ಈ ತಂಡವನ್ನು ಕಳುಹಿಸಿ ಸುರಕ್ಷೆ ಪರಿಶೀಲಿಸಿದ ನಂತರ ಕಾರ್ಮಿಕರ ಆಗಮನ ಸಹಿತ ವಿವಿಧ ಮುನ್ನೆಚ್ಚೆರಿಕೆ ಕ್ರಮ ವಹಿಸುವಂತೆ ನಿರ್ದೇಶಿಸಲಾಗಿದೆ. ಮೃತರ ಮನೆಯವರಿಗೆ ಅರಣ್ಯ ಇಲಾಖೆಯ ಮೂಲಕ ರು. ೧೫ ಲಕ್ಷ ಪರಿಹಾರ ನೀಡಲಾಗುವುದು. ಮೃತರ ಪುತ್ರನಿಗೆ ಕೆಎಫ್‌ಡಿಸಿಯಲ್ಲಿ ಉದ್ಯೋಗ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಶೋಕ್ ಕುಮಾರ್ ರೈ ಈ ತಿಳಿಸಿದರು.ಬೆಳ್ಳಾರೆ ಠಾಣಾ ಪೊಲೀಸರು, ಸುಳ್ಯ ಠಾಣಾ ವೃತ್ತ ನಿರೀಕ್ಷಕರು, ಕೆಎಫ್‌ಡಿಸಿ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.................ಕಣಿಯಾರು ಮಲೆ ರಕ್ಷಿತಾರಣದಿಂದ ರಬ್ಬರ್ ತೋಟಕ್ಕೆ ಕಾಡಾನೆ ನುಗ್ಗಿ ಮಹಿಳೆ ಮೇಲೆ ದಾಳಿ ಮಾಡಿರುವುದು ಕಂಡು ಬಂದಿದೆ. ಜನರ ಸುರಕ್ಷತೆಯ ನಿಟ್ಟಿನಲ್ಲಿ ಅರಣ್ಯ ಭಾಗದಲ್ಲಿ ಹಾದು ಹೋಗಿರುವ ರಸ್ತೆಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ಗಸ್ತು ನಿಯೋಜನೆಗೆ ಆದ್ಯತೆ ನೀಡಲಾಗುವುದು.
-ಅಂತೋನಿ ಮರಿಯಪ್ಪ, ಡಿಸಿಎಫ್, ಮಂಗಳೂರು.