ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಬಾಣಾವರದಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಇಲ್ಲದೆ ಹಲವಾರು ದಿನಗಳಿಂದ ಸಂಕಷ್ಟ ಅನುಭವಿಸುತ್ತಿರುವ ಸ್ಥಳೀಯರು, ಕೊನೆಗೆ ಆಕ್ರೋಶ ವ್ಯಕ್ತಪಡಿಸಿ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಖಾಲಿ ಕೊಡಗಳ ಪ್ರದರ್ಶನ ನಡೆಸಿ ತೀವ್ರ ಪ್ರತಿಭಟನೆ ನಡೆಸಿದರು.ಪೇಟೆ ಬಡಾವಣೆಯ ಪೊಲೀಸ್ ಕ್ವಾಟ್ರಸ್ ಹಿಂಭಾಗದ ವಸತಿಗೃಹಗಳು ಹಾಗೂ ಸುತ್ತಮುತ್ತಲಿನ ಬಡಾವಣೆಗಳಿಗೆ ಸರಿಯಾದ ರೀತಿಯಲ್ಲಿ ನೀರು ಪೂರೈಕೆ ಆಗುತ್ತಿಲ್ಲವೆಂದು ಆರೋಪಿಸಿದ ಹಿರಿಯ ನಾಗರಿಕರ ವೇದಿಕೆ, ಸ್ಥಳೀಯ ನಿವಾಸಿಗಳು ಹಾಗೂ ಮಹಿಳೆಯರು ತಕ್ಷಣ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಲವಾರು ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕುಡಿಯುವ ನೀರು ಮಾತ್ರವಲ್ಲ, ದಿನನಿತ್ಯದ ಬಳಕೆಯ ನೀರಿಗೂ ತೀವ್ರ ಅಭಾವ ಉಂಟಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ಬೇಸಿಗೆಯ ಉಷ್ಣತೆಯ ನಡುವೆ ನೀರಿಗಾಗಿ ಪರದಾಡುತ್ತಿರುವ ಜನರಿಗೆ ಆಡಳಿತದ ನಿರ್ಲಕ್ಷ್ಯ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ ಎಂದು ಸ್ಥಳೀಯರು ಆರೋಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಪರಮೇಶ್ವರ್, ಬಾಣಾವರ ಪಟ್ಟಣದ ಅನೇಕ ಬಡಾವಣೆಗಳಿಗೆ ಹೇಮಾವತಿ ನದಿ ಮೂಲದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಪೇಟೆ ಬಡಾವಣೆಯ ಪೊಲೀಸ್ ಕ್ವಾಟ್ರಸ್ ಹಿಂಭಾಗ ಹಾಗೂ ನಾಲ್ಕನೇ ವಾರ್ಡ್ ಪ್ರದೇಶಕ್ಕೆ ಮಾತ್ರ ಈ ಮೂಲಸೌಕರ್ಯವೇ ಕಲ್ಪಿಸದೇ ಜನರನ್ನು ಕಡೆಗಣಿಸಲಾಗಿದೆ. ಇಲ್ಲಿ ಹೇಮಾವತಿ ನೀರಿನ ಪೈಪ್‌ಲೈನ್ ವ್ಯವಸ್ಥೆಯೇ ಇಲ್ಲದಿರುವುದು ಆಡಳಿತದ ಮಲತಾಯಿ ಧೋರಣೆಯ ಸ್ಪಷ್ಟ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಸಿಲಿನ ತಾಪದಿಂದ ಜನರು ತತ್ತರಿಸುತ್ತಿರುವ ಸಂದರ್ಭದಲ್ಲಿ, ನೀರಿನಂತಹ ಮೂಲಭೂತ ಅಗತ್ಯಕ್ಕೂ ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿ. ತಕ್ಷಣ ಸಮರ್ಪಕ ನೀರಿನ ವ್ಯವಸ್ಥೆ ಮಾಡದಿದ್ದರೆ, ಪಟ್ಟಣ ಪಂಚಾಯಿತಿ ಕಚೇರಿ ಎದುರು ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಕೇಂದ್ರ ತೆಂಗು ಅಭಿವೃದ್ಧಿ ನಿಗಮದ ನಿರ್ದೇಶಕ ಬಿ. ಆರ್. ಜಯಣ್ಣ ಮಾತನಾಡಿ, ಇದು ಕೇವಲ ಒಂದು ಬಡಾವಣೆಯ ಸಮಸ್ಯೆಯಲ್ಲ. ಬಾಣಾವರ ಪಟ್ಟಣದ ಹಲವು ಬೀದಿಗಳು ಮತ್ತು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ತಲೆದೋರಿದೆ. ಅದರಲ್ಲೂ ಈ ಪ್ರದೇಶಕ್ಕೆ ಹೇಮಾವತಿ ನದಿ ಮೂಲದ ನೀರಿನ ಸಂಪರ್ಕವೇ ಕಲ್ಪಿಸದೇ ಇರುವುದು ಅತ್ಯಂತ ವಿಷಾದನೀಯ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.ಆಡಳಿತ ವ್ಯವಸ್ಥೆ ಜನರ ಅಗತ್ಯಗಳನ್ನು ನಿರ್ಲಕ್ಷ್ಯ ಮಾಡುತ್ತಾ ಬಂದರೆ, ಮುಂದಿನ ದಿನಗಳಲ್ಲಿ ಜನರ ಸಹನೆ ಮೀರಬಹುದು. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಲಕಂಠ ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಈ ಬಡಾವಣೆಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಹೇಮಾವತಿ ನದಿ ಮೂಲದ ನೀರಿನ ಸಂಪರ್ಕಕ್ಕಾಗಿ ಜೆಜೆಎಂ ಕಾಮಗಾರಿ ಗುತ್ತಿಗೆದಾರರು, ಆರ್‌ಡಿಪಿಆರ್ ಇಂಜಿನಿಯರ್‌ಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ವಿಷಯ ತರಲಾಗುತ್ತದೆ ಎಂದು ಭರವಸೆ ನೀಡಿದರು.ಇದೇ ವೇಳೆ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ. ಎಚ್. ಸಂಜಯ್, ಬಾಣಾವರದ ಸರ್ವತೋಮುಖ ಅಭಿವೃದ್ಧಿಯ ಭಾಗವಾಗಿ ಪೇಟೆ ಬಡಾವಣೆಯ ಪೊಲೀಸ್ ವಸತಿಗೃಹ ಪ್ರದೇಶದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು, ವಾಟರ್‌ಮನ್‌ಗಳು ಹಾಗೂ ಜೆಜೆಎಂ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸಿ, ತಾಂತ್ರಿಕ ಸಮಸ್ಯೆಗಳ ನಿವಾರಣೆ ಮಾಡಿ ಶೀಘ್ರದಲ್ಲೇ ನೀರಿನ ಸರಬರಾಜು ಸುಧಾರಿಸಲಾಗುವುದು ಎಂದು ತಿಳಿಸಿದರು.
ಈ ಸಂಬಂಧ ಉಪ ತಹಸೀಲ್ದಾರ್ ಲಿಂಗರಾಜು ಅವರಿಗೂ ಸ್ಥಳೀಯರು ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ವಾಜಿದ್ ಸಾಬ್, ಕೋಟಪ್ಪ, ಶರ್ಫಾನ್, ಹಬೀಬ್, ಆರೋಗ್ಯ ಸ್ಥಾಯಿ ಸಮಿತಿ ನಿರ್ದೇಶಕ ಇಮ್ರಾನ್, ಸ್ಥಳೀಯ ನಿವಾಸಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ವೇದಿಕೆಯ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.