ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂದು

| Published : Mar 09 2025, 01:50 AM IST

ಸಾರಾಂಶ

ಗುಂಡ್ಲುಪೇಟೆಯಲ್ಲಿ ದಸಾಪ ಪದಗ್ರಹಣ ಸಮಾರಂಭವನ್ನು ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂದನ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮಹಿಳೆ ಸರ್ಕಾರವಿದ್ದಂತೆ, ಆರೋಗ್ಯ ಕೆಟ್ಟಾಗ ಎಲ್ಲರ ಆರೋಗ್ಯ ವಿಚಾರಿಸಿ ಆರೋಗ್ಯ ಮಂತ್ರಿಯಾಗ್ತಾರೆ, ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಶಿಕ್ಷಣ ಮಂತ್ರಿಯಾಗಿ ಕೆಲಸ ಮಾಡ್ತಾರೆ ಎಂದು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಹೇಳಿದರು.

ಪಟ್ಟಣದ ಗೌತಮ ನರ್ಸಿಂಗ್‌ ಶಾಲೆಯಲ್ಲಿ ತಾಲೂಕು ದಲಿತ ಸಾಹಿತ್ಯ ಪರಿಷತ್ತು, ಗೌತಮ ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ಸಾಹಿತಿ ಹಾಗೂ ಹೋರಾಟಗಾರ್ತಿ ಪ್ರೇಮಬೋಧಿ ಮಾತನಾಡಿ, ಪ್ರಸ್ತುತ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಅಲ್ಲದೆ ಆರ್ಥಿಕವಾಗಿ ಪ್ರಗತಿ ಸಾಧಿಸಿ ಸ್ವಾವಲಂಬನೆ ಬದುಕು ನಡೆಸುತ್ತಿದ್ದಾರೆ ಎಂದರು.

ಗೌತಮ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜಮ್ಮ ಎನ್ ಮಾತನಾಡಿ, ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೂ ಔದ್ಯೋಗಿಕ ಹಾಗೂ ರಾಜಕೀಯ ರಂಗದಲ್ಲಿ ಸಿಗಬೇಕಾದ ಪಾಲು ಸಿಕ್ಕಿಲ್ಲ ಎಂದರು. ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂಧನ್ ಕಾರ್ಯಕ್ರಮ ಉದ್ಘಾಟಿಸಿದರು. ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ವಿತರಿಸಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯೋಗೇಶ ಕೆ, ವಕೀಲ ಕಾಳಸ್ವಾಮಿ, ದಸಾಪ ಪ್ರಧಾನ ಕಾರ್ಯದರ್ಶಿ ರಾಜು ಬೇರಂಬಾಡಿ, ಗೌತಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ.ಸಿದ್ದರಾಜು, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಡಾ.ಪ್ರೇಮ, ಜಿಲ್ಲಾ ಉಪಾಧ್ಯಕ್ಷೆ ಡಾ.ಲಕ್ಷ್ಮೀ ಪ್ರೇಮಕುಮಾರ್, ತಾಲೂಕು ಘಟಕದ ಉಪಾಧ್ಯಕ್ಷ ಗೋವಿಂದ ನಾಯಕ, ಕರುನಾಡ ಯುವ ಶಕ್ತಿ ಸಂಘಟನೆಯ ಮುನೀರ್ ಪಾಷಾ, ಇಲಿಯಾಸ್, ಕರವೇ ಶಿವಮೂರ್ತಿ, ದಸಾಪ ಖಜಾಂಚಿ ಮೋಹನ್ ಕುಮಾರ್, ದಸಾಪ ಪತ್ರಿಕಾ ಕಾರ್ಯದರ್ಶಿ ಗೋವಿಂದಯ್ಯ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.