ಮಹಿಳೆ ಪುರುಷರಷ್ಟೇ ಸಮಾನರು

| Published : Mar 23 2024, 01:00 AM IST

ಸಾರಾಂಶ

೧೨ನೇ ಶತಮಾನದ ಪ್ರಾರಂಭದಲ್ಲಿ ಮಹಿಳೆಯರನ್ನು ಅತ್ಯಂತ ಹೀನವಾಗಿ, ಕ್ರೌರ್ಯದಿಂದ ನೋಡುವ ಪರಿಸ್ಥಿತಿ ಇತ್ತು. ವ್ಯಕ್ತಿಯಾಗಿ ಕಾಣದೇ, ವಸ್ತುವಾಗಿ ನೋಡುತ್ತಿದ್ದರು.

ಗದಗ: ಬಸವಾದಿ ಶರಣರ ಕಾಲದಲ್ಲಿ ನೂರಾರು ಶರಣೆಯರು ವಚನಕಾರ್ತಿಯರಾಗಿದ್ದರು. ಪುರುಷರಷ್ಟೇ ಮಹಿಳೆಯರೂ ಸಮಾನರು ಎಂಬ ತತ್ವ ಸಿದ್ಧಾಂತ ಬಸವಾದಿ ಶಿವಶರಣರ ಕಾಲದಿಂದಲೂ ಬಂದಿದೆ ಎಂದು ಭೈರನಹಟ್ಟಿಯ ಶ್ರೀಶಾಂತಲಿಂಗ ಸ್ವಾಮಿಗಳು ಹೇಳಿದರು.

ನಗರದ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ೨೬೮೫ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಎಲ್ಲ ಶರಣೆಯರು ಅನುಭವ ಮಂಟಪದಲ್ಲಿ ಪಾಲ್ಗೊಳ್ಳುತ್ತಿದ್ದರು. ಮೊಟ್ಟ ಮೊದಲ ಕವಯತ್ರಿ ಅಕ್ಕಮಹಾದೇವಿ ಆಗಿದ್ದರು. ಬಸವಾದಿ ಶಿವಶರಣರ ನಂತರ ಕೆಲವು ಕಾಲ ಸ್ತಬ್ಧವಾಗಿದ್ದ ವಚನ ಸಾಹಿತ್ಯವನ್ನು ೧೫ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಮುಂದುವರೆಸಿಕೊಂಡು ಬಂದರು ಎಂದರು.

ಮಹಿಳೆ ಸಮಸ್ಯೆ-ಸವಾಲುಗಳು ಕುರಿತು ಕೊಪ್ಪಳದ ಸಾಹಿತಿ ಸಾವಿತ್ರಿ ಮುಜುಮದಾರ ಉಪನ್ಯಾಸ ನೀಡಿ, ಮಹಿಳೆಯರು ತಮ್ಮ ಅಸ್ತಿತ್ವಕ್ಕಾಗಿ,ಶಿಕ್ಷಣಕ್ಕಾಗಿ, ಹಕ್ಕುಗಳಿಗಾಗಿ,ಮತದಾನಕ್ಕಾಗಿ ಅನೇಕ ಹೋರಾಟಗಳಿಂದ ಪಡೆದಿರುವ ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ. ಪ್ರತಿದಿನವೂ ಮಹಿಳೆಯರನ್ನು ಗೌರವಿಸಬೇಕು, ಆರಾಧಿಸಬೇಕು, ಸ್ಮರಿಸಬೇಕು. ಮಹಿಳೆಗೂ, ಮಹಿಳಾ ಜೀವನಕ್ಕೂ, ಬದುಕಿಗೂ, ಸ್ವಾತಂತ್ರ್ಯಕ್ಕೂ ೧೨ನೇ ಶತಮಾನ ಬಹಳ ಮುಖ್ಯವಾಗಿದೆ. ೧೨ನೇ ಶತಮಾನದ ಪ್ರಾರಂಭದಲ್ಲಿ ಮಹಿಳೆಯರನ್ನು ಅತ್ಯಂತ ಹೀನವಾಗಿ, ಕ್ರೌರ್ಯದಿಂದ ನೋಡುವ ಪರಿಸ್ಥಿತಿ ಇತ್ತು. ವ್ಯಕ್ತಿಯಾಗಿ ಕಾಣದೇ, ವಸ್ತುವಾಗಿ ನೋಡುತ್ತಿದ್ದರು.ಇಂತಹ ಕಷ್ಟದ ಸನ್ನಿವೇಶದಲ್ಲಿ ಮಹಿಳೆಯರಿಗೆ ಸಮಾನತೆ, ಧ್ವನಿ ಕೊಟ್ಟವರು ಅಣ್ಣ ಬಸವಣ್ಣನವರು ಎಂದರು.

ಈ ವೇಳೆ ಅನಾಥ ಶವಗಳಿಗೆ ಸಂಸ್ಕಾರ ಮಾಡುವ ಕಾಯಕದಲ್ಲಿ ನಿರತರಾದ ನಿಮಿತ್ತ ರಾಮನಗರ ಜಿಲ್ಲೆಯ ಜಯಪುರದ ಆಶಾ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶಿವಾನುಭವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವಾರ್ಷಿಕೋತ್ಸವ ಆಚರಿಸಲಾಯಿತು.

ಅಕ್ಕಮಹಾದೇವಿ ಯೋಗವಿಜ್ಞಾನ ಕೇಂದ್ರದ ಸದಸ್ಯರು ಯೋಗ ನೃತ್ಯ ಮಾಡಿದರು. ಜೆ.ಸಿ. ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.

ತನ್ವಿ ರಾಮಚಂದ್ರ ಮೋನೆ ವಚನ ಸಂಗೀತ ಹಾಡಿದರು. ಗುರುನಾಥ ಸುತಾರ ಮತ್ತು ಪ್ರಸಾದ ಸುತಾರ ತಬಲಾ ಮತ್ತು ಹಾರ್ಮೋನಿಯಮ್ ಸಾಥ್ ನೀಡಿದರು. ಧರ್ಮಗ್ರಂಥ ಪಠಣವನ್ನು ರೇಣುಕಾ ಅಮಾತ್ಯ, ವಚನ ಚಿಂತನೆಯನ್ನು ಜಯಶ್ರೀ ಉಗಲಾಟದ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆ ವಹಿಸಿಕೊಂಡಿದ್ದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದವರನ್ನು ಪೂಜ್ಯರು ಸನ್ಮಾನಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.