ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ ಆಧುನಿಕತೆಯ ಗಾಳಿ ಗ್ರಾಮ, ಸಮುದಾಯ, ಹಟ್ಟಿ, ಮೊಹಲ್ಲಾಗಳ ಮೇಲೆಲ್ಲಾ ಬೀಸುತ್ತಿದೆ. ಆದರೆ ಗೊಲ್ಲರ ಹಟ್ಟಿಗಳ ನಡುವೆ ಆಧುನಿಕತೆಯ ಗಾಳಿ ಇನ್ನೂ ಬೀಸಿಲ್ಲ. ಸಂಪ್ರದಾಯ ಹಾಗೂ ಆಚಾರಗಳ ಮೂಟೆಯಿಂದ ಹೊರ ಬರದ ಈ ಸಮಾಜದಲ್ಲಿ ಮೌಢ್ಯತೆಯ ಹಲ್ಲುಗಳಿಗೆ ಈಗಲೂ ಹೆಣ್ಣೇ ಆಹಾರ ಎಂದು ಬೆಂಗಳೂರಿನ ಕೆ.ಆರ್.ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ.ಟಿ.ಯಲ್ಲಪ್ಪ ಹೇಳಿದರು. ಬೆಂಗಳೂರಿನ ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ತಾಲೂಕಿನ ಕೈಲಾಂಚ ಹೋಬಳಿಯ ಆಲೆಮರದದೊಡ್ಡಿ ಹಾಗೂ ದೇವರದೊಡ್ಡಿಯಲ್ಲಿ ವಾಸವಾಗಿರುವ ಕಾಡುಗೊಲ್ಲ ಸಮುದಾಯ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಕ್ಷೇತ್ರಕಾರ್ಯದಲ್ಲಿ ಅವರು ಮಾತನಾಡಿದರು.ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಈ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿಯಾಗಿದೆ ಎಂದು ತಿಳಿಸಿದರು.ಮಕ್ಕಳ ಹಡೆದ ತಾಯಿಗೆ ಊರ ಹೊರಗಿನ ಗುಡಿಸಲೇ ವಾಸ ಸ್ಥಾನ. ಋತುಮತಿಯಾದ ಮನೆ ಮಗಳು ಹಟ್ಟಿಯಿಂದ ಹೊರಗೆ. ಮುರುಕಲು ಜೋಪಡಿ, ಗಾಳಿ, ಮಳೆ, ಬಿಸಿಲೇ ಇವಳ ಸಂಗಾತಿಗಳು. ಗೊಲ್ಲರ ಸಮುದಾಯದಲ್ಲಿ ಜನನ ಸಂಬಂಧಿ ಆಚರಣೆಗಳು ಕಠಿಣವಾಗಿರುತ್ತವೆ ಎಂದು ತಿಳಿಸಿದರು.ಗರ್ಭಿಣಿಗೆ ಹೆರಿಗೆ ನೋವು ಪ್ರಾರಂಭವಾದ ಕೂಡಲೇ ಊರ ಹೊರಗೆ ಚಿಕ್ಕಗುಡಿಸಲನ್ನು ನಿರ್ಮಿಸಿ ಅಲ್ಲಿ ಬಿಡುತ್ತಾರೆ. ಹೆರಿಗೆ ಸಂದರ್ಭದಲ್ಲಿ ಆಕೆಗೆ ಸಹಾಯಕ್ಕಾಗಿ ಬೇಡರ ಸೂಲಗಿತ್ತಿಯನ್ನು ನೇಮಿಸುತ್ತಾರೆ. ಹೆರಿಗೆಯಾಗಿ ಎರಡು ತಿಂಗಳು ಕಳೆಯುವ ವರೆಗೆ ಹಸಿ ಬಾಣಂತಿ ಮಳೆ, ಗಾಳಿ, ಬಿಸಿಲೆನ್ನದೆ ಊರ ಹೊರಗೆ ಕಾಲ ಕಳೆಯಬೇಕು. ಆಕೆಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಒಂದು ಮೊರದಲ್ಲಿಟ್ಟು, ನೂಕಿ ಹೋಗುತ್ತಾರೆ. ಈ ಎಲ್ಲಾ ಘಟನೆಗಳಿಗೂ ಸೂತಕವೇ ಕಾರಣ ಎಂದು ತಿಳಿಸಿದರು.ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಪ್ರಾದ್ಯಾಪಕ ಡಾ. ಎಂ. ನಾಗರಾಜು ಮಾತನಾಡಿ, ಜನರ ನಡವಳಿಕೆ ನಂಬಿಕೆಗಳು, ಸಂಪ್ರದಾಯ-ಆಚರಣೆಗಳು, ಮೌಖಿಕ ಗ್ರಾಂಥಿಕ ಸಾಹಿತ್ಯ ಸಂವೇದನೆಗಳು ಸಂಸ್ಕೃತಿಯ ಅಧ್ಯಯನಕ್ಕೆ ಅವಕಾಶ ತೆರೆದಿಡುತ್ತವೆ. ಇಂಥ ಅರ್ಥಪೂರ್ಣ ಅಧ್ಯಯನಕ್ಕೆ ಬುಡಕಟ್ಟು ಸಮುದಾಯಗಳು ಉತ್ತಮ ಗ್ರಾಸ ಒದಗಿಸಿಕೊಡುತ್ತವೆ. ಬುಡಕಟ್ಟು ಸಮುದಾಯಗಳಲ್ಲಿ ಕಂಡು ಬರುವ ಈ ಎಲ್ಲಾ ವೈಶಿಷ್ಟ್ಯ ಹಾಗೂ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಗುರುತಿಸಿ ಅಧ್ಯಯನ ಮಾಡಬೇಕು ಎಂದು ಹೇಳಿದರು.ಈ ಸಮುದಾಯದಲ್ಲಿ ಹೆಣ್ಣು ಮಕ್ಕಳು ಮೈ ನೆರೆಯುವುದು ಕೂಡ ಒಂದು ಶಾಪವೇ ಸರಿ. ಅವರಿಗೂ ತಿಂಗಳುಗಟ್ಟಲೆ ಊರ ಹೊರಗಿನ ವನವಾಸ ಕಡ್ಡಾಯ. ತಮ್ಮ ಕರುಳು ಕುಡಿಗಳು ಇಷ್ಟೆಲ್ಲಾ ಯಾತನೆ ಪಡುತ್ತಿದ್ದರೂ ಸಮುದಾಯದ ಹಿರಿಯರಾಗಲೀ, ಪ್ರಜ್ಞಾವಂತರಾಗಲೀ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಲೆತಲಾಂತರದಿಂದ ನಡೆದು ಬಂದಿರುವ ಪದ್ಧತಿಯೆಂದು ಈಗಲೂ ಅಪ್ಪನ ಆಲದ ಮರಕ್ಕೇ ನೇತು ಹಾಕಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾದ ಡಾ. ಶರಣಪ್ಪ, ಜನಾರ್ಧನ, ಮಂಜುನಾಥ್, ಚಂದ್ರೇಶೇಖರ್ ಇತರರು ಹಾಜರಿದ್ದರು. ಕಾಡುಗೊಲ್ಲರು ಅನುಸರಿಸುತ್ತಿರುವ ಪದ್ಧತಿ ತಪ್ಪು ಎಂದು ಸಮುದಾಯದ ಹಿರಿಯರಿಗೆ ಮನವರಿಕೆಯಾಗಿದೆ. ಆದರೆ ಅವರು ಸಂಪ್ರದಾಯ ಬಿಡಲು ಒಪ್ಪರು. ಆದ್ದರಿಂದ ಬಾಣಂತಿಯರು ಹಾಗೂ ಋತುಮತಿಯಾದ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಕೃಷ್ಣ ಕುಟೀರಗಳನ್ನು ನಿರ್ಮಿಸಿಕೊಡುವಂತೆ ಕೇಳುತ್ತಿದ್ದಾರೆ.
ಡಾ. ವಿಜಯಲಕ್ಷ್ಮಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ