ಸಾರಾಂಶ
ಮುಂಡಗೋಡ: ಇಂದಿನ ಸ್ಪರ್ಧಾಯುಗದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಬಲರಾಗಿ ಬೆಳೆಯುತ್ತಿದ್ದಾರೆ. ಹಿಂದಿನಂತೆ ಯಾವುದೇ ಸಮಸ್ಯೆಗಳಿಲ್ಲದೆ ಉತ್ತಮವಾಗಿ ತನ್ನ ಕಾಲುಗಳ ಮೇಲೆ ತಾನೆ ನಿಂತು ಪುರುಷರೊಂದಿಗೆ ಸ್ಪರ್ಧಿಸುವ ಧೈರ್ಯವನ್ನು ಮಹಿಳೆ ಹೊಂದಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಡಾ. ಅನುಪಮಾ ಆದಾಪುರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಂಡಗೋಡ ಘಟಕದ ವತಿಯಿಂದ ಸಂಗಮೇಶ್ವರ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಅಬಲೆಯಲ್ಲ, ಸಬಲೆಯಾಗಿ ಹೊರಹೊಮ್ಮುತ್ತಿದ್ದಾರೆ. ಹಿಂದಿನ ಕಾಲದ ಅಜ್ಜಿಯರು ಅನುಭವಿಸಿದ ಸಮಸ್ಯೆಗಳನ್ನು ಇಂದಿನ ಮಹಿಳೆಯರಿಗಿಲ್ಲ. ೧೨ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ತತ್ವ ಪಾಲಿಸಿದ ಪರವಾಗಿ ಇಂದು ಮಹಿಳೆ ಪುರುಷ ಮೇಲು-ಕೀಳು ಎಂಬ ಭಾವನೆ ಸಮಾಜದಲ್ಲಿ ಉಳಿದಿಲ್ಲ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ತೋರಿ ಇತರರಿಗೆ ಮಾದರಿಯಾಗಿದ್ದಾರೆ. ಇಲ್ಲಿ ಗಂಡು-ಹೆಣ್ಣು ಅನ್ನುವುದಕ್ಕಿಂತ ಇಬ್ಬರೂ ಸಮಾನರು ಅನ್ನುವ ದೃಷ್ಟಿಯಿಂದ ಸಮಾಜವನ್ನು ಬೆಳೆಸುವ ಬಹುದೊಡ್ಡ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲಿದೆ. ಗಂಡು-ಹೆಣ್ಣು ಎರಡು ಕಣ್ಣುಗಳು, ಎರಡು ಕಣ್ಣುಗಳು ಚೆನ್ನಾಗಿದ್ದರೆ ಮಾತ್ರ ಜಗತ್ತನ್ನು ಸುಂದರವಾಗಿ ಕಾಣಲು ಸಾಧ್ಯವಿದೆ ಎಂದರು.ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ ಅಧ್ಯಕ್ಷತೆವಹಿಸಿದ್ದರು. ಜ್ಯೋತಿ ಆಚಾರ್ಯ, ಸುಮಿತ್ ಸಿಜಿಯರ್, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ನಿಲಯಪಾಲಕರಾದ ಶಿವಲೀಲಾ ಗಂಟಾಮಠ, ನಂದಾ ಮಠಲ್ಲೆ, ವಿನಾಯಕ ಶೇಟ್, ಎಸ್.ಡಿ. ಮುಡೆಣ್ಣವರ, ನಾಗರಾಜ ಅರ್ಕಸಾಲಿ ಡಾ. ಪಿ.ಪಿ. ಚಬ್ಬಿ, ಎಸ್.ಕೆ. ಬೋರ್ಕರ್, ಆರ್. ಎನ್. ನಾಯಕ, ಸುಭಾಸ ಡೋರಿ, ಸಂಗಪ್ಪ ಕೋಳೂರು, ಆನಂದ ಹೊಸೂರು, ದಿನೇಶ ವೆರ್ಣೇಕರ್, ಆರ್.ಎಸ್. ಕಲಾಲ್, ಮಲ್ಲಮ್ಮ ನೀರಲಗಿ, ಎಸ್.ಬಿ. ಹೂಗಾರ, ಮಂಜುನಾಥ ನೀಲಮ್ಮನವರ, ಶ್ರೀಕಾಂತ ಹೊಂಡದಕಟ್ಟಿ, ಸಂತೋಷ ಕೂಸನೂರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕರಾದ ಶಿವಲೀಲಾ ಘಂಟಾಮಠ ಹಾಗೂ ಸುಲೋಚನಮ್ಮ ರಾಮಣ್ಣನವರ್ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಅದಿತಿ ನಾರಾಯಣ್ ನಾಯಕ ಪ್ರಾರ್ಥಿಸಿದರು. ಶಾರದಾಬಾಯಿ ರಾಥೋಡ್ ಸ್ವಾಗತಿಸಿದರು. ವಿದ್ಯಾ ಸಣ್ಣಕ್ಕಿ ಕಾರ್ಯಕ್ರಮ ನಿರೂಪಿಸಿದರು. ಗೌರಮ್ಮ ಕೊಳ್ಳಾನ್ನವರ ವಂದಿಸಿದರು.