ಪುರುಷರ ಸಾಧನೆಗೆ ಮಹಿಳೆಯೇ ಬೆನ್ನೆಲುಬು: ಚಲನಚಿತ್ರ ನಟಿ ಶೃತಿ

| Published : Mar 18 2024, 01:45 AM IST

ಪುರುಷರ ಸಾಧನೆಗೆ ಮಹಿಳೆಯೇ ಬೆನ್ನೆಲುಬು: ಚಲನಚಿತ್ರ ನಟಿ ಶೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಮಹಿಳೆ ಇರುವುದರಿಂದ ಪುರುಷ ಯಶಸ್ವಿಯಾಗಿ ಗುರಿ ಸಾಧಿಸಲು ಸಾಧ್ಯವಾಗಿದೆ ಎಂದು ಕನ್ನಡ ಚಲನಚಿತ್ರದ ಹಿರಿಯ ನಟಿ ಶೃತಿ ಅಭಿಪ್ರಾಯಪಟ್ಟರು. ಹಾಸನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ

ಕನ್ನಡಪ್ರಭ ವಾರ್ತೆ ಹಾಸನ

ಸಮಾಜದಲ್ಲಿ ಮಹಿಳೆ ಇರುವುದರಿಂದ ಪುರುಷ ಯಶಸ್ವಿಯಾಗಿ ಗುರಿ ಸಾಧಿಸಲು ಸಾಧ್ಯವಾಗಿದೆ ಎಂದು ಕನ್ನಡ ಚಲನಚಿತ್ರದ ಹಿರಿಯ ನಟಿ ಶೃತಿ ಅಭಿಪ್ರಾಯಪಟ್ಟರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಸರ್ಕಾರಿ, ಅರೆಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಹಾಸನ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಜಂಟಿಯಾಗಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿದ ನಂತರ ದಿವಂಗತ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸಮಾಜದಲ್ಲಿ ಮಹಿಳೆಯರಿಗೆ ಅನುಕಂಪಕ್ಕಿಂತ ಅವಕಾಶ ನೀಡಬೇಕು. ಎಲ್ಲಾ ರಂಗಗಳಲ್ಲಿ ಮಹಿಳೆಯರು ಬಹುಸಂಖ್ಯಾತರಾಗಬೇಕು. ಆತ್ಮಸ್ಥೈರ್ಯ ಕಳೆದುಕೊಂಡರೆ ಬದುಕು ಅಸಾದ್ಯ. ಆತ್ಮ ಸ್ಥೈರ್ಯ ಗಟ್ಟಿಯಾಗಿ ಇದ್ದರೆ ಸಮಾಜದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಹೇಳಿದರು.

ಕುಟುಂಬದ ಹಂತದಲ್ಲೇ ಮಹಿಳೆಯರಿಗೆ ಪುರುಷರಿಗೆ ಸಮಾನ ಸ್ಥಾನಮಾನ, ಅವಕಾಶ ನೀಡಬೇಕು. ಅಮೆರಿಕ ದೇಶದಲ್ಲಿ ಹೆಚ್ಚು ಕಾಲ ದುಡಿಸಿಕೊಳ್ಳುತ್ತಿದ್ದ ವೇಳೆ ತಮಗಾಗಿ ಒಂದು ದಿನವನ್ನು ಮೀಸಲಿಡಬೇಕು ಎಂಬ ಉದ್ದೇಶವೇ ಮಹಿಳಾ ದಿನಾಚರಣೆ ಹುಟ್ಟಲು ಕಾರಣ. ಪ್ರತಿಯೊಬ್ಬ ಯಶಸ್ವಿ ಪುರುಷನ ಜೊತೆ ಜೊತೆಗೆ ಮಹಿಳೆ ಇರುವ ಕಾರಣದಿಂದಲೇ ಪುರುಷರು ಸಾಧಿಸಲು ಸಾಧ್ಯವಾಗುತ್ತದೆ, ಪುರುಷರ ಜೊತೆ ಜೊತೆಯಾಗಿ ನಡೆದು ಪುರುಷರನ್ನು ಸಾಧನೆಯ ಹಾದಿಯಲ್ಲಿ ಕೊಂಡೊಯ್ದ ದಿನಗಳು ಹೆಚ್ಚಿವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ದೇಶಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ಮಹಿಳೆಯರು ಸಾಧನೆ ಮಾಡಿರುವ ಸಾಕಷ್ಟು ಉದಾಹರಣೆಗಳು ಇವೆ. ನಂಬಿಕೆ ಎಂಬ ಕುದುರೆ ಏರಿ, ವಿದ್ಯೆ ಎಂಬ ಆಯುಧ ಬಳಸಿಕೊಂಡು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕು. ಮಹಿಳೆಯರು ಆರ್ಥಿಕವಾಗಿ ಕೂಡ ಪ್ರಬಲರಾಗಬೇಕು ಎಂದರು.

ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಶೋಷಣೆ ಇತ್ತು. ಈಗ ಅವು ಯಾವುದೂ ಇಲ್ಲ. ಎಲ್ಲಾ ರಂಗದಲ್ಲೂ ಮಹಿಳೆಯರು ಇದ್ದಾರೆ. ಯಾವ ಮನೆಯಲ್ಲಿ ಮಹಿಳೆ ಶಾಂತಿಯುತವಾಗಿ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾಳೊ ಆ ಮನೆ ನೆಮ್ಮದಿಯಿಂದ ಇರುತ್ತದೆ ಎಂದರು.

ಡಯಟ್ ಮುಖ್ಯಸ್ಥೆ ಎಚ್.ಕೆ. ಪುಷ್ಪಲತಾ ಮಾತನಾಡಿ, ಮಾರ್ಚ್ ತಿಂಗಳು ಬಂದರೆ ತುಂಬಾ ಕಡೆ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಆದರೆ ಮತ್ತೆ ಮುಂದಿನ ವರ್ಷದ ಮಾರ್ಚ್‌ಗೆ ಕಾಯುವ ಪರಿಸ್ಥಿತಿ ಇದೆ. ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲಾ ಸಂಕೋಲೆಯನ್ನು ಕಳಚಿ ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಇಂದು ಛಾಪು ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಮಹಿಳೆಯರಿಗೆ ವಿಶೇಷ ಮನ್ನಣೆ ನೀಡುವ ದಿನಗಳು ಬರಬೇಕು ಎಂದರು.

ಇದೇ ವೇಳೆ ಸ್ತ್ರೀರೋಗ ತಜ್ಞೆ ಡಾ. ಎ. ಸಾವಿತ್ರಿ ಹಾಗೂ ಮನೋರೋಗ ತಜ್ಞೆ ಡಾ.ಸುನೀತಾ ಮಹಿಳೆಯರಿಗೆ ಆರೋಗ್ಯ ಸಂರಕ್ಷಣೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ಶಿಕ್ಷಕರಾಗಿ ದುಡಿಯುತ್ತಿರುವ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಮಹಿಳೆಯರು ಹಾಗೂ ಸಂಘದ ಮಹಿಳಾ ನಿರ್ದೇಶಕರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ಮಂಜುಳಾ, ಮಾಜಿ ಶಾಸಕ ಪ್ರೀತಂ ಜೆ. ಗೌಡರ ಪತ್ನಿ ಕಾವ್ಯ ಪ್ರೀತಂ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಕಿರಣ್, ಚನ್ನರಾಯಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ದೀಪಾ, ಹಿಮ್ಸ್ ಆಸ್ಪತ್ರೆಯ ಡಾ.ಸುನಿತಾ, ಹಾಸನ ಜಿಲ್ಲಾ ಸರ್ಕಾರಿ ನೌಕರರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎನ್. ಪರಮೇಶ್, ಉಪಾಧ್ಯಕ್ಷ ಆರ್. ಶಿವೇಗೌಡ, ಗೌರವಾಧ್ಯಕ್ಷ ಆರ್.ಸಿ. ಭೈರಪ್ಪ, ಬಿ.ಎನ್.ರಾಜಶೇಖರ್, ಗೌರವ ಕಾರ್ಯದರ್ಶಿ ಸತೀಶ್, ನಿರ್ದೇಶಕರಾದ ಎಸ್. ಮಧು, ಬಿ.ಆರ್. ಧರ್ಮ, ಕೆ.ಕೆ. ಸಿಂಧು, ಕೆ.ಎಸ್. ಲಾವಣ್ಯ ಇದ್ದರು. ಲಕ್ಷ್ಮೀನಾರಾಯಣ್ ನಿರೂಪಿಸಿದರು.ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಹಾಸನ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಹಿರಿಯ ನಟಿ ಶೃತಿ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.