ಸಾರಾಂಶ
ಸಿಎಂ ಸಿದ್ದರಾಮಯ್ಯ ಎದುರು 6 ಮಂದಿ ನಕ್ಸಲರು ಶರಣಾಗತಿಯ ಹಿಂದೆ ಸುಮಾರು 72 ದಿನಗಳ ಸುದೀರ್ಘ ಪಯಣವಿದೆ. ಹಸು ಕಾಯುವ ಆದಿವಾಸಿ ಮಹಿಳೆ ಗೌರಮ್ಮ ಎಂಬುವರು ಸರ್ಕಾರ ಮತ್ತು ನಕ್ಸಲರ ಮಧ್ಯೆ ಕೊಂಡಿಯಾಗಿ ಸುದ್ದಿ ಮುಟ್ಟಿಸುವ ಕೆಲಸ ಮಾಡಿ ನಕ್ಸಲ್ ಶರಣಾಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು
ಆರ್. ತಾರಾನಾಥ್ ಅಟೋಕರ್
ಚಿಕ್ಕಮಗಳೂರು : ಬೆಂಗಳೂರಲ್ಲಿ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಎದುರು 6 ಮಂದಿ ನಕ್ಸಲರು ಶರಣಾಗತಿಯ ಹಿಂದೆ ಸುಮಾರು 72 ದಿನಗಳ ಸುದೀರ್ಘ ಪಯಣವಿದೆ. ಹಸು ಕಾಯುವ ಆದಿವಾಸಿ ಮಹಿಳೆ ಗೌರಮ್ಮ ಎಂಬುವರು ಸರ್ಕಾರ ಮತ್ತು ನಕ್ಸಲರ ಮಧ್ಯೆ ಕೊಂಡಿಯಾಗಿ ಸುದ್ದಿ ಮುಟ್ಟಿಸುವ ಕೆಲಸ ಮಾಡಿ ನಕ್ಸಲ್ ಶರಣಾಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಕುತೂಹಲದ ಅಂಶ ಈಗ ಬೆಳಕಿಗೆ ಬಂದಿದೆ.
ದನ ಕಾಯುವ ವೇಳೆ ಗೌರಮ್ಮ ಅವರು ನಕ್ಸಲರ ಸಂಪರ್ಕಕ್ಕೆ ಬಂದಿದ್ದರು. ಆಗ ನಕ್ಸಲರು ತಮ್ಮ ಸಂಪರ್ಕಕ್ಕೆ ಬಂದ ಗೌರಮ್ಮ ಅವರನ್ನು ಸಂಪೂರ್ಣವಾಗಿ ನಂಬಿದ್ದರು. ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರುವ ಸಂಬಂಧ ಒಲವು ತೋರಿ ಪತ್ರವೊಂದನ್ನು ಗೌರಮ್ಮ ಮೂಲಕ ಸರ್ಕಾರದೊಂದಿಗೆ ಸಂಧಾನಕ್ಕೆ ಸಮರ್ಥರಾದ ವ್ಯಕ್ತಿಯೊಬ್ಬರಿಗೆ ತಲುಪಿಸಿದ್ದರು. ಬಳಿಕ ಗೌರಮ್ಮ ಅವರು ಸರ್ಕಾರದ ನಕ್ಸಲ್ ಪುನರ್ವಸತಿ ಸಮಿತಿ ಪ್ರತಿನಿಧಿಗಳಿಗೆ ವಿಷಯ ಮುಟ್ಟಿಸಿದ್ದರು. ಅಂದಿನಿಂದಲೇ ಸಂಧಾನ ಪ್ರಕ್ರಿಯೆ ಆರಂಭವಾಗಿ, ಹಲವು ಸುತ್ತಿನ ಪತ್ರ ವ್ಯವಹಾರ ನಡೆದಿತ್ತು. ಕೆಲ ಬಾರಿ ಸಂಧಾನ ಸಮಿತಿಯ ಪತ್ರಗಳನ್ನೂ ಗೌರಮ್ಮ ಅವರು ನಕ್ಸಲರಿಗೆ ತಲುಪಿಸಿದ್ದರು. ಎಂದು ಗೊತ್ತಾಗಿದೆ.
ಎನ್‌ಕೌಂಟರ್‌ಗಿಂತ ಮೊದಲೇ ಸಂಧಾನ ಪ್ರಕ್ರಿಯೆ: ‘ನಕ್ಸಲೀಯರು ಕಾಡಿನಲ್ಲಿ ಇರಲಾಗದೆ, ವಿಕ್ರಂಗೌಡನ ಎನ್‌ಕೌಂಟರ್‌ನಿಂದ ಹೆದರಿ ಶರಣಾಗತಿಗೆ ಬಂದವರಲ್ಲ. ಅದಕ್ಕಿಂತ ಮೊದಲೇ ಪತ್ರ ವ್ಯವಹಾರ ಆರಂಭವಾಗಿತ್ತು. ಎನ್‌ಕೌಂಟರ್‌ಗೂ ಮೊದಲು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಅ.17ರಂದು ಮುಂಡಗಾರು ಲತಾ ಅವರನ್ನು ಆಕಸ್ಮಿಕವಾಗಿ ಭೇಟಿ ಮಾಡಿದ್ದರು. ‘ಆ ಸಂದರ್ಭದಲ್ಲಿ ಸಮಾಜದ ಮುಖ್ಯವಾಹಿನಿಗೆ ಬನ್ನಿ. ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡೋಣ’ ಎಂದು ಕರೆಕೊಟ್ಟಿದ್ದರು. ಅದಕ್ಕೆ ಲತಾ ಅವರಿಂದ ನೋಡೋಣ... ಎಂಬ ಉತ್ತರ ಬಂದಿತ್ತು. ಆಗಿನಿಂದ ಸಂಧಾನದ ಬಾಗಿಲು ತೆರೆಯಿತು. ಮುಂದೆ ಪತ್ರ ವ್ಯವಹಾರವು ಗೌರಮ್ಮನ ಮೂಲಕ ನಡೆಯಿತು ಎಂದು ತಿಳಿದುಬಂದಿದೆ.
ಹೀಗಾಗಿ ನಕ್ಸಲೀಯರು ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕಿತ್ತಲೆಮನೆ ಗ್ರಾಮದ ಗೌರಮ್ಮ (ಮೂಲತಃ ಕಡುಗುಂಡಿ ಗ್ರಾಮದವರು) ಅವರ ಮೂಲಕ ಪತ್ರವೊಂದನ್ನು ಕಳೆದ 2024ರ ಅ.17ರಂದು ಭೇಟಿ ಮಾಡಿದ್ದ ವ್ಯಕ್ತಿಗೆ ತಲುಪಿಸಿದರು ಹಾಗೂ ಆ ವ್ಯಕ್ತಿಯು ಉತ್ತರಿಸಿದ ಪತ್ರವೊಂದನ್ನು ತರಬೇಕು ಎಂದು ಹೇಳಿ ಕಳುಹಿಸಿದರು.
ಗೌರಮ್ಮ ಕಿತ್ತಲೆಮನೆ ಗ್ರಾಮದಿಂದ ಸುಮಾರು 20-25 ಕಿ.ಮೀ. ದೂರದಲ್ಲಿರುವ ಆ ವ್ಯಕ್ತಿ ಮನೆಗೆ ಬಂದು ಪತ್ರ ಕೊಟ್ಟರು. ಅವರಿಂದ ನಕ್ಸಲೀಯರಿಗೆ ಪತ್ರ ಕೇಳಿದಾಗ, ‘ಹಾಗೆ ಮಾಡಿದರೆ ಸಮಸ್ಯೆಯಾಗುತ್ತದೆ. ಮುಂದೆ ನೋಡೋಣ’ ಎಂದು ಗೌರಮ್ಮ ಅವರನ್ನು ಕಳುಹಿಸಿದರು. ನಂತರ ನಕ್ಸಲರು ಪತ್ರ ಬರೆದ ವಿಷಯ ಶಾಂತಿಗಾಗಿ ನಾಗರಿಕ ವೇದಿಕೆ ಕೆಲವು ಮುಖಂಡರಿಗೆ ಮುಟ್ಟಿಸಿದರು.
ಇತ್ತ ಮಾತುಕತೆ ನಡೆಯುತ್ತಿರುವ ವೇಳೆಯೇ ಉಡುಪಿ ಜಿಲ್ಲೆ ಹೆಬ್ಬಿಯ ಕಬ್ಬಿನಾಲೆ ಪೀತಬೈಲು ಗ್ರಾಮದಲ್ಲಿ ನವೆಂಬರ್ 19 ರಂದು ವಿಕ್ರಂಗೌಡ ಎನ್‌ಕೌಂಟರ್ ನಡೆಯಿತು. ಇದರಿಂದ ಮಾತುಕತೆಗೆ ಕೊಂಚ ಹಿನ್ನಡೆಯಾಯಿತು.ಡಿಸೆಂಬರ್ 3ರ ನಂತರ ಸಂಧಾನ ಸಮಿತಿಯ ಕೆಲ ಪತ್ರಗಳು ಗೌರಮ್ಮ ಅವರ ಮೂಲಕ ನಕ್ಸಲರಿಗೆ ಹೋದವು. ನಕ್ಸಲೀಯರೊಂದಿಗೆ ಮತ್ತೆ ಮಾತುಕತೆ ಆರಂಭವಾಯಿತು. ನಕ್ಸಲರ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಯಿತು. ಹೀಗೆ 4-5 ಬಾರಿ ಸಭೆ ನಡೆಸಿದ ನಂತರ ಅಂತಿಮ ನಿರ್ಧಾರಕ್ಕೆ ಬರಲಾಯಿತು.
ಜನವರಿ 3ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಿರಂತರವಾಗಿ ಸಭೆ ನಡೆಸಿ ಶರಣಾಗತಿ ಸಾಧಕ- ಬಾಧಕ, ಸರ್ಕಾರದ ಭರವಸೆ ಹಾಗೂ ಕಾಡಿನಿಂದ ಹೊರಗೆ ತೆರಳುವ ವಿಧಾನದ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ. ಜನವರಿ 6ರಂದು ಶಾಂತಿಗಾಗಿ ನಾಗರಿಕ ವೇದಿಕೆ ಹಾಗೂ ಸ್ಥಳೀಯರು ಒಂದೆಡೆ ಸೇರಿ ಜನವರಿ 8ರಂದು ಬೆಳಗ್ಗೆ ಸ್ಥಳದಿಂದ ಹೊರಟು ಮೊದಲು ಚಿಕ್ಕಮಗಳೂರು ತಲುಪಿದರು. ನಂತರ ಶರಣಾಗತಿ ಸ್ಥಳ ಬದಲಾದ ಕಾರಣ ಸಂಜೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಮ್ಮುಖದಲ್ಲಿ 6 ಮಂದಿ ನಕ್ಸಲೀಯರು ಶರಣಾದರು.
ಇದರೊಂದಿಗೆ ನಕ್ಸಲ್ ಚಳವಳಿ ಅಂತ್ಯ ಕಂಡಂತಾಗಿದೆ.ಸುಮಾರು 15 ವರ್ಷಗಳ ಬಳಿಕ ಮುಂಡಗಾರು ಲತಾ ಅವರನ್ನು ನೋಡಿದೆ. ಹೊರಗೆ ಬನ್ನಿ ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡೋಣ ಎಂದು ಕರೆದೆ. ಅದಕ್ಕೆ ಸ್ಪಂದಿಸಿದರು. ಈ ಪ್ರಕ್ರಿಯೆ ನಡೆಸುವಾಗ ತುಂಬಾ ಆತಂಕ ಇತ್ತು. ಯಾವ ಸಂದರ್ಭದಲ್ಲಿ ಏನಾದರೂ ಆದ್ರೆ ಎಂಬ ಭಯ ಕಾಡುತ್ತಿತ್ತು. ಆದರೆ, ಎಲ್ಲಾ ಕಾರ್ಯವೂ ನಿರೀಕ್ಷಿತ ಮಟ್ಟದಲ್ಲಿ ಆಗಿದೆ.
- ಮಧ್ಯಸ್ಥಿಕೆ ವಹಿಸಿದ್ದ ಹೆಸರು ಹೇಳಲು ಇಚ್ಛಿಸದ ವ್ಯಕ್ತಿ
- ಸರ್ಕಾರ- ನಕ್ಸಲರ ನಡುವೆ ಗೌರಮ್ಮನೇ ಕೊಂಡಿ
- ಈಕೆಯ ಮೂಲಕವೇ ಮೊದಲ ಸಂಧಾನ ಪತ್ರ ರವಾನೆ
- ಸಂಧಾನ ಸೇತು
ಗೌರಮ್ಮ ಹೇಗೆ ಮಧ್ಯಸ್ಥಿಕೆ ವಹಿಸಿದ್ದಳು?
- ದನ ಕಾಯುವ ವೇಳೆ ಗೌರಮ್ಮನು ನಕ್ಸಲರ ಸ್ನೇಹ ಸಂಪಾದಿಸಿದ್ದಳು
- ವಿಕ್ರಂ ಗೌಡ ಎನ್‌ಕೌಂಟರ್‌ಗೂ ಮುನ್ನವೇ ಸಂಧಾನಕ್ಕೆ ಸಿದ್ಧರಾಗಿದ್ದರು
- ಗೌರಮ್ಮನ ಮೂಲಕ ಸಂಧಾನ ಪತ್ರವನ್ನು ಸಂಧಾನ ಸಮಿತಿಗೆ ತಲುಪಿಸಿದ್ದರು
- ನಂತರ ಕೆಲವು ಬಾರಿ ಸಂಧಾನ ಸಮಿತಿ ಪತ್ರವನ್ನು ನಕ್ಸಲರಿಗೆ ಮುಟ್ಟಿಸಿದ್ದಳು
- ಈ ರೀತಿ ಸಂಧಾನ ಸೇತುವೆಯಾಗಿ ದನಗಾಹಿ ಮಹಿಳೆ ಕೆಲಸ ಮಾಡಿದ್ದಳು