ಕನ್ನಡಪ್ರಭ ವಾರ್ತೆ ಬೆಳಗಾವಿ ಮಹಿಳೆಯರ ಮೇಲಿನ ಕಿರುಕುಳ, ದೌರ್ಜನ್ಯ ಹಾಗೂ ಅನ್ಯಾಯದ ವಿರುದ್ಧ ಮೌನವೇ ಅತಿದೊಡ್ಡ ಅಡ್ಡಿಯಾಗುತ್ತಿದೆ ಎಂಬ ಕಠಿಣ ಸತ್ಯವನ್ನು ಮನಗಂಡು, ಮೌನ ಮುರಿಯಿರಿ-ದೂರು ನೀಡಿ ಎಂಬ ಜಾಗೃತಿ ಅಭಿಯಾನವನ್ನು ನಗರದಲ್ಲಿ ಬೆಳಗಾವಿ ನಗರ ಪೊಲೀಸರು ಆರಂಭಿಸಿದ್ದಾರೆ. ಮಹಿಳೆಯರು ಭಯವಿಲ್ಲದೆ ತಮ್ಮ ಮೇಲಾದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವಂತೆ ಪ್ರೇರೇಪಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಮಹಿಳೆಯರ ಮೇಲಿನ ಕಿರುಕುಳ, ದೌರ್ಜನ್ಯ ಹಾಗೂ ಅನ್ಯಾಯದ ವಿರುದ್ಧ ಮೌನವೇ ಅತಿದೊಡ್ಡ ಅಡ್ಡಿಯಾಗುತ್ತಿದೆ ಎಂಬ ಕಠಿಣ ಸತ್ಯವನ್ನು ಮನಗಂಡು, ಮೌನ ಮುರಿಯಿರಿ-ದೂರು ನೀಡಿ ಎಂಬ ಜಾಗೃತಿ ಅಭಿಯಾನವನ್ನು ನಗರದಲ್ಲಿ ಬೆಳಗಾವಿ ನಗರ ಪೊಲೀಸರು ಆರಂಭಿಸಿದ್ದಾರೆ. ಮಹಿಳೆಯರು ಭಯವಿಲ್ಲದೆ ತಮ್ಮ ಮೇಲಾದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವಂತೆ ಪ್ರೇರೇಪಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಸಮಾಜದಲ್ಲಿ ನಡೆಯುವ ಅನೇಕ ಕಿರುಕುಳ ಮತ್ತು ದೌರ್ಜನ್ಯ ಪ್ರಕರಣಗಳು ಸಾಮಾಜಿಕ ಭಯ, ಮಾನಸಿಕ ಒತ್ತಡ ಹಾಗೂ ಗೌರವ ಹಾನಿಯ ಆತಂಕದಿಂದ ಪೊಲೀಸರ ಗಮನಕ್ಕೆ ಬಾರದೆಯೇ ಉಳಿಯುತ್ತಿರುವುದು ಗಂಭೀರ ಚಿಂತನೆಯ ವಿಷಯವಾಗಿದೆ. ಇದರ ಪರಿಣಾಮವಾಗಿ ಅನ್ಯಾಯ ಮಾಡುವವರಿಗೆ ಧೈರ್ಯ ಹೆಚ್ಚುತ್ತಿದ್ದು, ಸಂತ್ರಸ್ತ, ಬಾಧಿತ ಮಹಿಳೆಯರು ಮತ್ತಷ್ಟು ಒಂಟಿತನಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಮಹಿಳೆಯರು ಯಾವುದೇ ರೀತಿಯ ಕಿರುಕುಳವನ್ನೂ ಸಹಿಸಿಕೊಳ್ಳದೆ, ತಕ್ಷಣ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬೇಕು ಎಂಬ ಸಂದೇಶವನ್ನು ನಗರ ಪೊಲೀಸರು ಸ್ಪಷ್ಟವಾಗಿ ನೀಡಿದ್ದಾರೆ.ಇಂದಿನ ದಿನಗಳಲ್ಲಿ ಮಹಿಳೆಯರ ಸುರಕ್ಷತೆಯೇ ಪೊಲೀಸ್ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ದೂರು ನೀಡುವ ಪ್ರತಿಯೊಬ್ಬ ಮಹಿಳೆಗೆ ಕಾನೂನು ರಕ್ಷಣೆ, ತಕ್ಷಣದ ಸ್ಪಂದನೆ ಹಾಗೂ ಸಂಪೂರ್ಣ ಗೌಪ್ಯತೆಯನ್ನು ಖಚಿತಪಡಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಮಹಿಳೆಯರು ಯಾವುದೇ ಭಯಪಡುವ ಅಗತ್ಯವಿಲ್ಲ. ಕಾನೂನು ಸದಾ ಅವರ ಬೆಂಬಲದಲ್ಲಿದೆ. ಮೌನ ಮುರಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ. ಮಹಿಳೆಯರ ರಕ್ಷಣೆಗೆ ನಗರ ಪೊಲೀಸರು ತಕ್ಷಣ ಸ್ಪಂದಿಸುವ ತಂಡಗಳು, ಸಹಾಯ ಕೇಂದ್ರಗಳು ಹಾಗೂ ಕಾನೂನು ಮಾರ್ಗದರ್ಶನ ವ್ಯವಸ್ಥೆಯನ್ನು ಸಜ್ಜುಗೊಳಿಸಿದ್ದಾರೆ.ದೌರ್ಜನ್ಯಕ್ಕೊಳಗಾಗುವ ಮಹಿಳೆಯರು ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿ ಮೂಲಕ ಕ್ಷಿಪ್ರ ನೆರವು ಪಡೆಯಬಹುದಾಗಿದೆ. ಅದರ ಜೊತೆಗೆ ಸಾರ್ವಜನಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಈ ಜಾಗೃತಿ ಸಂದೇಶವನ್ನು ವ್ಯಾಪಕವಾಗಿ ಎಲ್ಲೆಡೆ ಹರಡಲಾಗುತ್ತಿದೆ. ಭಯವಿಲ್ಲದೆ ಬದುಕುವುದು ಪ್ರತಿಯೊಬ್ಬ ಮಹಿಳೆಯ ಹಕ್ಕು ಎಂಬ ಸಂದೇಶವನ್ನು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿಸುವುದೇ ಈ ಜಾಗೃತಿ ಅಭಿಯಾನದ ಮುಖ್ಯವಾದ ಅಂತಿಮ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
-------ಕೋಟ್:ಮೌನ ಅನ್ಯಾಯಕ್ಕೆ ಉತ್ತೇಜನ ನೀಡುತ್ತದೆ. ಧೈರ್ಯವೇ ನ್ಯಾಯಕ್ಕೆ ದಾರಿ ತೋರಿಸುತ್ತದೆ. ಮಹಿಳೆಯರು ತಮ್ಮ ಮೇಲಾದ ಅನ್ಯಾಯ ಮತ್ತು ದೌರ್ಜನ್ಯವನ್ನು ಸಹಿಸಿಕೊಳ್ಳದೆ ಧೈರ್ಯವಾಗಿ ಪೊಲೀಸ್ ಠಾಣೆಗೆ ದೂರು ನೀಡಬೇಕು. ಮಹಿಳೆಯರೊಂದಿಗೆ ಸದಾ ಕಾನೂನು ಇರಲಿದೆ.ಭೂಷಣ ಬೋರಸೆ, ನಗರ ಪೊಲೀಸ್ ಆಯುಕ್ತರು